ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಆಸ್ತಿ: ದಾಖಲೆ ಬಹಿರಂಗಕ್ಕೆ ಸವಾಲು

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:`ಅಕ್ರಮ ಆಸ್ತಿ ಗಳಿಕೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿರುವುದಾಗಿ ದೇವೇಗೌಡರ ಕುಟುಂಬದ ಮೇಲೆ ಆರೋಪ ಮಾಡಲಾಗುತ್ತಿದೆ. ಈ ಸಂಬಂಧ ಯಾವುದೇ ದಾಖಲೆಗಳಿದ್ದರೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಬಹಿರಂಗಪಡಿಸಲಿ~ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಸವಾಲು ಹಾಕಿದರು.

ಜೆಡಿಎಸ್ ಕನಕಪುರ ತಾಲ್ಲೂಕು ಘಟಕದ ವತಿಯಿಂದ ನಗರದ ಪುರಭವನದಲ್ಲಿ ಶುಕ್ರವಾರ ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಕೃಷ್ಣಾ ಮೇಲ್ದಂಡೆ ಯೋಜನೆಯ ತುಂಡು ಗುತ್ತಿಗೆ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರದಲ್ಲಿ ಮಾಧ್ಯಮಗಳು ಸೇರಿದಂತೆ ಇತರೆ ಪಕ್ಷಗಳು ದೇವೇಗೌಡರ ಮೇಲೆ ಆರೋಪ ಮಾಡುತ್ತಿವೆ. ಯಾರೋ ಕೇಸು ದಾಖಲು ಮಾಡಿದ ಮಾತ್ರಕ್ಕೆ ಅವರು ಆರೋಪಿಯಾಗುವುದಿಲ್ಲ. ವಾಸ್ತವ ಅಂಶಗಳನ್ನು ಅರಿತು ಮಾಧ್ಯಮಗಳು ವರದಿ ಮಾಡಬೇಕು~ ಎಂದು ಅವರು ಬೇಸರ ವ್ಯಕ್ತಪಡಿಸಿದರು.
 
ಈ ಯೋಜನೆಯಿಂದ ಆ ಭಾಗದ ಜನರಿಗೆ ಅನುಕೂಲ ಕಲ್ಪಿಸಲು ದೇವೇಗೌಡರು ಪಟ್ಟ ಶ್ರಮ ಯಾರಿಗೂ ತಿಳಿದಿಲ್ಲ. ಆದರೆ ಅವರನ್ನೇ ಆರೋಪಿಯನ್ನಾಗಿ ಮಾಡುವ ಹುನ್ನಾರಗಳು ನಡೆಯುತ್ತಿದೆ. ಇದನ್ನೆಲ್ಲ ಧೈರ್ಯವಾಗಿ ಎದುರಿಸುತ್ತೇವೆ ಎಂದು ಹೇಳಿದರು. 

  ಬಿ.ಎಸ್.ಯಡಿಯೂರಪ್ಪ ಜೈಲಿಗೆ ಹೋದಾಗ ಕೆಲ ಕಾಂಗ್ರೆಸ್ ಮುಖಂಡರು ಕುಣಿದು ಕುಪ್ಪಳಿಸಿದರು. ಆದರೆ ಅದೇ ನಾಯಕರು ರಾತ್ರಿಯಾದರೆ ಬಿಎಸ್‌ವೈ ಮನೆಯಲ್ಲಿ ಟಿಕಾಣಿ ಹೂಡುತ್ತಿದ್ದರು. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಆ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು. ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ, ಹಿಂದುಳಿದ ವರ್ಗಗಳ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಪ್ರಮೀಳಾ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT