ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಆಸ್ತಿ ಪ್ರಕರಣ: ಮಾಯಾ ನಿರಾಳ

Last Updated 6 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಕ್ರಮ ಆಸ್ತಿ ಸಂಗ್ರಹ ಪ್ರಕರಣದಲ್ಲಿ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ವಿರುದ್ಧ ಸಿಬಿಐ 9 ವರ್ಷಗಳ ಹಿಂದೆ ದಾಖಲಿಸಿದ್ದ  `ಎಫ್‌ಐಆರ್~ ಅನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದರಿಂದಾಗಿ ಮಾಯಾವತಿ ನಿರಾಳ ಅನುಭವಿಸುವಂತಾಗಿದೆ. 

 ಕೋರ್ಟ್‌ನಿಂದ ನಿರ್ದಿಷ್ಟ ಸೂಚನೆ ಇಲ್ಲದಿದ್ದಾಗಲೂ ಅವರ ವಿರುದ್ಧ ತನಿಖೆ ಆರಂಭಿಸಿದ್ದಕ್ಕೆ ತನಿಖಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ.

 ತಾಜ್ ಕಾರಿಡಾರ್ ಹಗರಣಕ್ಕೆ ಸಂಬಂಧಿಸಿ 2003ರ ಸೆಪ್ಟೆಂಬರ್ 18ರಂದು ಕೋರ್ಟ್ ಹೊರಡಿಸಿದ್ದ ಆದೇಶವನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಸಿಬಿಐ ತನ್ನ ಅಧಿಕಾರ ವ್ಯಾಪ್ತಿ ಮೀರಿ ಮಾಯಾವತಿ ಅವರ ವಿರುದ್ಧ ತನಿಖೆ ನಡೆಸಿದೆ. ಈ ತನಿಖೆ ಅನಗತ್ಯವಾಗಿತ್ತು ಎಂದು ನ್ಯಾಯಪೀಠ ಹೇಳಿದೆ.

ನ್ಯಾಯಮೂರ್ತಿ ಪಿ. ಸದಾಶಿವಂ ಹಾಗೂ ದೀಪಕ್ ಮಿಶ್ರಾ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ ಈ ಆದೇಶ ಹೊರಡಿಸಿದೆ.

`ತಾಜ್ ಕಾರಿಡಾರ್ ಹಗರಣದಲ್ಲಿ ಉತ್ತರ ಪ್ರದೇಶ ಸರ್ಕಾರದ ಅನುಮತಿ ಇಲ್ಲದೇ 17  ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರಿಂದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಲಾಗಿತ್ತು. ಆದರೆ, ಮಾಯಾವತಿ ಆದಾಯ ಮೂಲ ಮೀರಿದ ಆಸ್ತಿ ಸಂಗ್ರಹಿಸಿರುವುದರ ವಿರುದ್ಧ ಪ್ರತ್ಯೇಕವಾಗಿ `ಎಫ್‌ಐಆರ್~ ದಾಖಲಿಸುವಂತೆ ಕೋರ್ಟ್ ಹೇಳಿರಲಿಲ್ಲ. ಅಲ್ಲದೇ ಆದಾಯ ಮೂಲ ಮೀರಿದ ಆಸ್ತಿ ಸಂಗ್ರಹ ಪ್ರಕರಣಕ್ಕೂ ತಾಜ್ ಕಾರಿಡಾರ್ ಹಗರಣಕ್ಕೂ ನೇರ ಸಂಬಂಧ ಕಲ್ಪಿಸುವಲ್ಲಿ ಸಿಬಿಐ ವಿಫಲವಾಗಿದೆ~ ಎಂದು ನ್ಯಾಯಪೀಠ ತಿಳಿಸಿದೆ.

ಸಿಬಿಐ ತನ್ನ ಅಧಿಕಾರ ವ್ಯಾಪ್ತಿ ಮೀರಿ ಮಾಯಾವತಿ ವಿರುದ್ಧ ಪ್ರಕರಣ ದಾಖಲಿಸಿದೆಯೇ ಎಂಬುದನ್ನಷ್ಟೇ ಕೋರ್ಟ್ ಪರಿಶೀಲಿಸಿದೆ. ಆದರೆ, ಮಾಯಾ ವಿರುದ್ಧ ಅದು ಮಾಡಿರುವ ಆರೋಪಗಳನ್ನು ಪರಿಗಣಿಸಿಲ್ಲ ಎಂದು ಎಫ್‌ಐಆರ್ ವಜಾಗೊಳಿಸುವ ಸಂಬಂಧ ಹೊರಡಿಸಿರುವ 34 ಪುಟಗಳ ಆದೇಶದ ಮೊದಲ ಪುಟದಲ್ಲಿಯೇ ನ್ಯಾಯಪೀಠ ಸ್ಪಷ್ಟಪಡಿಸಿದೆ.

ವಿವರ: ತಾಜ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದ 17 ಕೋಟಿ ರೂಪಾಯಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸಿಬಿಐ 2002ರಲ್ಲಿ ಮಾಯಾವತಿ ಮತ್ತು ಇತರ ಹನ್ನೊಂದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.

ತನಿಖೆ ಪೂರ್ಣಗೊಂಡ ಮೇಲೆ ಲಖನೌ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿತ್ತು. ಆದರೆ, ಮಾಯಾ ಅವರ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡದ ಕಾರಣ ಈ ವರದಿ ಅಂಗೀಕರಿಸಲು ಕೋರ್ಟ್ ನಿರಾಕರಿಸಿತ್ತು.

ಆನಂತರ ಮಾಯಾವತಿ ಆದಾಯ ಮೂಲ ಮೀರಿ ಹಣ ಸಂಗ್ರಹಿಸಿದ್ದಾರೆ ಎಂದು ಸಿಬಿಐ ಅವರೊಬ್ಬರ ವಿರುದ್ಧ ಪ್ರತ್ಯೇಕವಾಗಿ ಮತ್ತೊಂದು ಪ್ರಕರಣ ದಾಖಲಿಸಿತು. ಇದು ಮೊದಲ ಪ್ರಕರಣಕ್ಕೆ ನೇರವಾಗಿ ಸಂಬಂಧಿಸಿದೆ. 2003ರಲ್ಲಿ ಕೇವಲ ಒಂದು ಕೋಟಿಯಷ್ಟಿದ್ದ ಅವರ ಆದಾಯ 2007ರ ಹೊತ್ತಿಗೆ ರೂ 50 ಕೋಟಿ ತಲುಪಿದೆ ಎಂದು ತನಿಖಾ ಸಂಸ್ಥೆ ವಾದಿಸಿತ್ತು.

ಆದರೆ ಮಾಯಾವತಿ, ಪಕ್ಷದ ಕಾರ್ಯಕರ್ತರು ತಮಗೆ ದೇಣಿಗೆ ರೂಪದಲ್ಲಿ ಈ ಹಣ ನಿಡಿದ್ದಾರೆ ಎಂದು ತಿಳಿಸಿದ್ದರು. ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ವಜಾಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ರಾಜಕೀಯ ದ್ವೇಷ ಸಾಧಿಸಲು ಈ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದ್ದರು.

ಆದಾಯ ತೆರಿಗೆ ಮಂಡಳಿ ತಮ್ಮ ಆದಾಯ ಸಕ್ರಮವಾಗಿದೆ ಎಂದು ಹೇಳಿದೆ. ದೆಹಲಿ ಹೈಕೋರ್ಟ್ ಸಹ ಈ ಆದೇಶ ಎತ್ತಿಹಿಡಿದಿದೆ ಎಂದು ನ್ಯಾಯಪೀಠದ ಮುಂದೆ ಮಾಯಾವತಿ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT