ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಆಸ್ತಿ: ರೋಷನ್ ಬೇಗ್ ವಿರುದ್ಧ ಎಫ್‌ಐಆರ್

Last Updated 4 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಆಸ್ತಿ ಹೊಂದಿರುವುದು ಮತ್ತು ಸರ್ಕಾರಕ್ಕೆ ವಂಚಿಸಿರುವ ಆರೋಪದ ಮೇಲೆ ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್. ರೋಷನ್ ಬೇಗ್, ಅವರ ಪತ್ನಿ ಸಬೀಹಾ ರೋಷನ್ ಮತ್ತು ಪುತ್ರ ರುಮಾನ್ ಬೇಗ್ ರೆಹಮಾನ್ ವಿರುದ್ಧ ಲೋಕಾಯುಕ್ತ ಪೊಲೀಸರು ಶುಕ್ರವಾರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.

ರೋಷನ್ ಬೇಗ್ ಮತ್ತು ಅವರ ಕುಟುಂಬದ ಸದಸ್ಯರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿ ಶಿವಾಜಿನಗರ ನಿವಾಸಿ ಅಬ್ದುಲ್ ಹಖ್ ಸುರಥಿ ಎಂಬುವರು ಜೂನ್ 14ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ದೂರಿನಲ್ಲಿರುವ ಆರೋಪಗಳ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಜೂನ್ 18ರಂದು ಆದೇಶ ಹೊರಡಿಸಿದ್ದರು.

ನ್ಯಾಯಾಲಯದ ಆದೇಶದ ಪ್ರತಿ ಶುಕ್ರವಾರ ಬೆಳಿಗ್ಗೆ ಲೋಕಾಯುಕ್ತ ಪೊಲೀಸರನ್ನು ತಲುಪಿತು. ಅದರಂತೆ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎಚ್.ಎಸ್.ಮಂಜುನಾಥ್ ಎಫ್‌ಐಆರ್ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ ಎಂದು ಲೋಕಾಯುಕ್ತದ ಉನ್ನತ ಮೂಲಗಳು ತಿಳಿಸಿವೆ.

ಬೇಗ್ ಅವರ ಕುಟುಂಬದ ಸದಸ್ಯರ ಒಡೆತನದ ಡ್ಯಾನಿಷ್ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ರುಮಾನ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸಬೀಹಾ ಅಪಾರೆಲ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮದ ದೈತ್ಯ ಸಂಸ್ಥೆ ಪ್ರೆಸ್ಟೀಜ್ ಎಸ್ಟೇಟ್ಸ್ ಹೆಸರನ್ನೂ ಆರೋಪಿಗಳ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಆರೋಪ ಏನಿದೆ?: `ರೋಷನ್ ಬೇಗ್ ಅವರು ಚುನಾವಣಾ ಆಯೋಗ ಮತ್ತು ಲೋಕಾಯುಕ್ತರಿಗೆ ಸಲ್ಲಿಸಿರುವ ಆಸ್ತಿ ವಿವರ ಹಾಗೂ ಅವರು ಹೊಂದಿರುವ ಆಸ್ತಿಯ ಮೌಲ್ಯದ ನಡುವೆ 100 ಕೋಟಿ ರೂಪಾಯಿ ವ್ಯತ್ಯಾಸವಿದೆ.

ಉದ್ಯಮ ಸ್ಥಾಪಿಸುವುದಕ್ಕಾಗಿ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದಿಂದ (ಕಿಯೋನಿಕ್ಸ್) ಬೇಗೂರಿನಲ್ಲಿ ಭೂಮಿ ಪಡೆದಿದ್ದ ಶಾಸಕರು, ಅದನ್ನು ರಿಯಲ್ ಎಸ್ಟೇಟ್‌ಗೆ ಬಳಸಿದ್ದಾರೆ. ಪ್ರೆಸ್ಟೀಜ್ ಎಸ್ಟೇಟ್ಸ್ ಜೊತೆ ಜಂಟಿ ಪಾಲುದಾರಿಕೆ ಒಪ್ಪಂದದಲ್ಲಿ ವಾಣಿಜ್ಯ ಬಳಕೆ ಕಟ್ಟಡ ನಿರ್ಮಿಸಿದ್ದಾರೆ. ಇದರಿಂದ ವಾರ್ಷಿಕ 2.5 ಕೋಟಿ ರೂಪಾಯಿ ಬಾಡಿಗೆ ಪಡೆಯುತ್ತಿದ್ದಾರೆ~ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT