ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಕಟ್ಟಡ ತೆರವಿಗೆ ಸಂಸದರೇ ಅಡ್ಡಿ

Last Updated 17 ಜುಲೈ 2012, 7:15 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಕಾನೂನು ಉಲ್ಲಂಘಿಸಿ ಬಹುಮಹಡಿ ಕಟ್ಟಿಕೊಂಡಿರುವ ನೂರಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳನ್ನು ತೆರವು ಗೊಳಿಸಲು ಮಹಾನಗರ ಪಾಲಿಕೆ ಮುಂದಾಗಿರುವುದಕ್ಕೆ ಸಂಸದ ಸುರೇಶ ಅಂಗಡಿ ಅವರು ಅಡ್ಡಗಾಲು ಹಾಕಲು ಯತ್ನಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಿಂದ ತೀವ್ರವಾದ ಖಂಡನೆ ವ್ಯಕ್ತವಾಗಿದೆ.
 
ನಗರದಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವುದು ಬೇಡ ಎಂದು ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರಿಗೆ ಕಾನೂನು ರೂಪಿಸ ಬೇಕಾದ ಸಂಸದರೇ ಜುಲೈ 13ರಂದು ಲಿಖಿತವಾಗಿ ಸೂಚಿಸುವ ಮೂಲಕ ಕಾನೂನು ಉಲ್ಲಂಘಿಸಿದ ಬಿಲ್ಡರ್‌ಗಳ ಬೆಂಬಲಕ್ಕೆ ನಿಂತಿರುವುದು ನಾಗರಿಕರಲ್ಲಿ ನಿರಾಸೆ ಮೂಡಿಸಿದೆ.

ನಿಯಮ ಬಾಹಿರವಾಗಿ ಮಹಡಿ ಮೇಲೆ ಮಹಡಿ ನಿರ್ಮಿಸುತ್ತಿರುವ ಕಟ್ಟಡಗಳು ನಗರದಲ್ಲಿ `ನಾಯಿ ಕೊಡೆ~ಗಳಂತೆ ತಲೆ ಎತ್ತುತ್ತಿವೆ. ಹೀಗಾಗಿಯೇ ಪಾಲಿಕೆಯ ಅಧಿಕಾರಿಗಳು ಇವುಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಆದರೆ, ಇದೀಗ ಸಂಸದರು ಕಟ್ಟಡಗಳನ್ನು ತೆರವುಗೊಳಿಸದಂತೆ ಸೂಚಿಸಿರುವುದರಿಂದ ಕಾನೂನು ಬಾಹಿರವಾಗಿ ಬಹುಮಹಡಿಗಳನ್ನು ನಿರ್ಮಿಸುವ ಬಿಲ್ಡರ್ಸ್‌ಗಳಿಗೆ `ಆನೆ ಬಲ~ ಬಂದಂತಾಗಿದೆ.

`ಬೆಳಗಾವಿಯು ಅತಿ ವೇಗದಿಂದ ಬೆಳೆಯುತ್ತಿರುವ ನಗರವಾಗಿದ್ದು, ಸುವರ್ಣ ಸೌಧ ನಿರ್ಮಾಣವಾಗುವ ಮೂಲಕ ಎರಡನೇ ರಾಜಧಾನಿಯಾಗಿದೆ. ಇಲ್ಲಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುತ್ತಿರುವುದು ಸಹಜ ವಾಗಿದೆ. ಹೀಗಾಗಿ ಇಂದಿನ ನಗರದ ಬೆಳವಣಿಗೆಗೆ ತಕ್ಕಂತೆ `ಸಮಗ್ರ ಅಭಿವೃದ್ಧಿ ಯೋಜನೆ~ (ಸಿಡಿಪಿ)ಯಲ್ಲಿಮಾರ್ಪಾಡಾಗುವವರೆಗೂ ಕಟ್ಟಡ ಗಳನ್ನು ತೆರವುಗೊಳಿಸಬಾರದು~ ಎಂದು ಅಂಗಡಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“ಕಾನೂನು ರೂಪಿಸುವ ಸಂಸದರು ಕಾನೂನು ಬಾಹಿರ ಕಟ್ಟಡ ನಿರ್ಮಾಣವನ್ನು ಬೆಂಬಲಿ ಸುತ್ತಿರುವುದು ಸರಿಯಲ್ಲ. ಇದರ ಹಿಂದೆ ಅವರ ವೈಯಕ್ತಿಕ ಹಿತಾಸಕ್ತಿ ಇದೆ. ಇದರಿಂದಾಗಿ ಸಾರ್ವಜನಿಕರು ಏಕೆ ತೊಂದರೆ ಪಡಬೇಕು” ಎಂದು ವ್ಯಾಪಾರಿ ಬಸವರಾಜ ಪ್ರಶ್ನಿಸುತ್ತಾರೆ.

“ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಸಣ್ಣ ಪುಟ್ಟ ಅತಿಕ್ರಮಣ ಮಾಡಿದ್ದ ಮನೆಯನ್ನೂ ಒಡೆಯಲಾಗಿತ್ತು. ಆಗ ಸಂಸದರು ಯಾರೊಬ್ಬರ ಬೆಂಬಲಕ್ಕೂ ಬಂದಿರಲಿಲ್ಲ. ಆದರೆ, ಇದೀಗ ಬಿಲ್ಡರ್ಸ್‌ಗಳ ಬೆಂಬಲಕ್ಕೆ ನಿಂತಿರುವುದು ವಿಪರ್ಯಾಸ” ಎನ್ನುತ್ತಾರೆ ಉದ್ಯಮಿ ರಾಜು ಹಿರೇಮಠ.

“ಪಾಲಿಕೆಯಲ್ಲಿರುವ ದಾಖಲೆಗಳ ಪ್ರಕಾರ ನೆಲ ಮಹಡಿ ಸೇರಿದಂತೆ ಎರಡು ಮಹಡಿ ನಿರ್ಮಿಸಲು 285 ಕಟ್ಟಡಗಳಿಗೆ ಪರವಾನಿಗೆ ನೀಡಲಾಗುತ್ತು. ಆದರೆ, ಇವುಗಳ ಪೈಕಿ 104 ಕಟ್ಟಡಗಳಲ್ಲಿ ನಿಯಮ ಬಾಹಿರವಾಗಿ ಮಹಡಿಗಳನ್ನು ನಿರ್ಮಿಸಲಾಗಿದೆ. ನಿಯಮ ಬಾಹಿರವಾಗಿ ಬಹುಮಹಡಿ ಕಟ್ಟಡ ನಿರ್ಮಿಸುತ್ತಿರುವುದನ್ನು ತಡೆಯಲಾಗುತ್ತಿದೆ.

ಕರ್ನಾಟಕ ವಿಧಾನಮಂಡಲದ ಅಂದಾಜು ಸಮಿತಿಯು ಅನಧಿಕೃತ ಕಟ್ಟಡ ನಿರ್ಮಾಣವನ್ನು ತಡೆಯುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ನಾವು ಕಾರ್ಯಾಚರಣೆ ಮಾಡಲಿದ್ದೇವೆ” ಎಂದು ಮಹಾನಗರ ಪಾಲಿಕೆ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು `ಪ್ರಜಾವಾಣಿ~ಗೆ ತಿಳಿಸಿದರು.

“ನಿಯಮ ಉಲ್ಲಂಗಿಸಿದ ಕಟ್ಟಡಗಳ ತಪಾಸಣೆ ನಡೆಸಲಾಗುತ್ತಿದೆ. ಅನಧಿಕೃತವಾಗಿ ಛಾವಣಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವುದನ್ನೂ ತೆರವುಗೊಳಿಸಲಾಗುವುದು” ಎಂದು ತಿಳಿಸಿದರು.

ನೆಲಮಾಳಿಗೆ ಅಬಾಧಿತ!:
ನಗರದ ಮಾರ್ಕೆಟ್ ಪ್ರದೇಶಗಳಲ್ಲಿನ ಹಲವು ಬಹುಮಹಡಿ ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕಿದ್ದ `ನೆಲ ಮಾಳಿಗೆ~ಯಲ್ಲೂ ಅನಧಿಕೃತವಾಗಿ ನೂರಾರು ಅಂಗಡಿಗಳು ನಡೆಯುತ್ತಿವೆ.
ಪಾಲಿಕೆಯಿಂದ ಪರವಾನಿಗೆ ಪಡೆದುಕೊಳ್ಳು ವಾಗಿ ಪಾರ್ಕಿಂಗ್‌ಗೆ ಜಾಗ ತೋರಿಸಿರುವ ಸ್ಥಳಗಳಲ್ಲಿ ನೂರಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ತಲೆ ಎತ್ತಿವೆ. ಗಣಪತಿ ಗಲ್ಲಿ, ಖಡೇಬಜಾರ, ರಾಮದೇವ ಗಲ್ಲಿ ಸೇರಿದಂತೆ ಹಲವೆಡೆ ಪಾರವಾನಿಗೆ ಪಡೆಯದೇ ನಿಯಮಬಾಹಿರವಾಗಿ ಅಂಗಡಿಗಳನ್ನು ನಡೆಸಲಾಗುತ್ತಿದೆ.

ಈ ಬಗ್ಗೆ ಪಾಲಿಕೆಯ ಆಯುಕ್ತರ ಗಮನಕ್ಕೆ ತಂದಾಗ, ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಬೇಕಾದ ಜಾಗದಲ್ಲಿ ಪರವಾನಿಗೆ ಪಡೆಯದೇ ಅಂಗಡಿ ಇಟ್ಟುಕೊಂಡಿರುವ ಬಗ್ಗೆ ಸಮೀಕ್ಷೆ ನಡೆಸಿ, ಅವುಗಳ ಮೇಲೆ ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT