ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಕಟ್ಟಡ ವಿರುದ್ಧ ಜನದನಿ

Last Updated 6 ಅಕ್ಟೋಬರ್ 2011, 19:50 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಕಟ್ಟಡಗಳ ನಿಯಮ ಉಲ್ಲಂಘನೆ ಕುರಿತು `ಪ್ರಜಾವಾಣಿ~ಯಲ್ಲಿ ಪ್ರಕಟವಾದ ಸರಣಿ ಲೇಖನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅನೇಕ ಓದುಗರು ಲೇಖನಮಾಲೆಯನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಾರೆ.

`ಅಕ್ರಮ-ಸಕ್ರಮ~ದ ಮೂಲಕ ಸಮಸ್ಯೆ ಪರಿಹರಿಸಿ
ಬೆಂಗಳೂರಿನ ರೆವಿನ್ಯೂ ನಿವೇಶನ ಹಾಗೂ ಕಟ್ಟಡಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಮೂಲಕ ಬೆಳಕು ಚೆಲ್ಲಿದ್ದೀರಿ. ಅದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ. ಆದರೆ, ನಾನು ಕೂಡ ಒಂದು ಸಮಸ್ಯೆ ಎದುರಿಸುತ್ತಿದ್ದೇನೆ. 2005ರಲ್ಲಿ ನಾನು ರೆವಿನ್ಯೂ ನಿವೇಶನ ಖರೀದಿಸಿದೆ. ಆ ಸಮಯದಲ್ಲಿ ಅಕ್ರಮ- ಸಕ್ರಮ ಯೋಜನೆ ಬಗ್ಗೆ ಚರ್ಚೆ ಆರಂಭವಾದರೂ ಈವರೆಗೆ ಜಾರಿಯಾಗಿಲ್ಲ.

ಅಂದಿನಿಂದ ನಾವು ಬಹಳ ಸಮಸ್ಯೆ ಎದುರಿಸುತ್ತಿದ್ದೇವೆ. ನನ್ನಂತೆ ರೆವಿನ್ಯೂ ನಿವೇಶನಗಳನ್ನು ಖರೀದಿಸಿದಂತಹ ಬಹಳಷ್ಟು ಜನ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಉಸ್ತುವಾರಿ ಸಚಿವ ಆರ್. ಅಶೋಕ ಕೂಡಲೇ ಇತ್ತ ಗಮನಹರಿಸಿ `ಅಕ್ರಮ-ಸಕ್ರಮ~ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಈ ಮೂಲಕ ಕೋರಿಕೊಳ್ಳುತ್ತೇನೆ.
-ಲೋಕೇಶ್, ಬೆಂಗಳೂರು

ದೊಡ್ಡ ಜಾಗದ ಅತಿಕ್ರಮಣ
ಜೆ.ಪಿ. ನಗರದ `ರಂಗಶಂಕರ~ ಮುಂಭಾಗದ ದೊಡ್ಡ ಆಸ್ತಿಯನ್ನು ವ್ಯಕ್ತಿಯೊಬ್ಬರು ವಶಪಡಿಸಿಕೊಂಡಿದ್ದಾರೆ. ಈ ಜಾಗದಲ್ಲಿ ಮೊದಲು ಬಿಡಿಎ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದೀಗ ಈ ಜಾಗದಲ್ಲಿ ತಾತ್ಕಾಲಿಕ ಟೆಂಟ್- ಹೋಟೆಲ್‌ಗಳ ಜತೆಗೆ ಹಲವು ಶಾಶ್ವತ ಕಟ್ಟಡಗಳು ತಲೆಯೆತ್ತಿವೆ. ಇದು ಹೇಗೆ ಸಾಧ್ಯವಾಯಿತು? ಈ ಬಗ್ಗೆ ಲೋಕಾಯುಕ್ತರೇ ಏನನ್ನಾದರೂ ಮಾಡಬೇಕಿದೆ.
-ಎಸ್. ದಿನ್ನಿ

ಅಕ್ರಮ ಚಟುವಟಿಕೆ ನಿಲ್ಲಿಸಿ
ನಗರದ ಕುಂಬಳಗೋಡು ಬಳಿ ಮೊದಲು ಶಾಲೆಯೊಂದಕ್ಕೆ ಅನುಮತಿ ಪಡೆಯಲಾಯಿತು. ಅದೇ ಜಾಗದಲ್ಲಿ ಇದೀಗ ದೊಡ್ಡ ವಸತಿ ನಿಲಯವನ್ನೂ ನಡೆಸಲಾಗುತ್ತಿದೆ. ದೇಶದಲ್ಲಿ ನಡೆಯುತ್ತಿರುವ ಇಂತಹ ಅಕ್ರಮಗಳ ಕಡಿವಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ಈ ಅಕ್ರಮ ಚಟುವಟಿಕೆ ನಿಲ್ಲಿಸಲು ನೀವು ಸರ್ಕಾರದ ಕಣ್ಣು ತೆರೆಸುತ್ತೀರಿ ಎಂದು ನಾನು ನಂಬಿದ್ದೇನೆ. ದೇಶಕ್ಕಾಗಿ ಮೌಲ್ಯಯುತ ಸೇವೆ ಸಲ್ಲಿಸುತ್ತಿರುವ ನಿಮಗೆ ನನ್ನ ಅಭಿನಂದನೆ.
-ನೊಂದ ಪೋಷಕರು

ಕಾನೂನುರೀತ್ಯ ಕ್ರಮ ಜರುಗಿಸಿ

ಬಿಬಿಎಂಪಿಯ ವಾರ್ಡ್ ನಂ. 38ರ ಎರಡನೇ ಬ್ಲಾಕ್‌ನಲ್ಲಿ ವ್ಯಕ್ತಿಯೊಬ್ಬರು ನಿಯಮ ಉಲ್ಲಂಘಿಸಿ ಮೂರು ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ.

ಈ ಸಂಬಂಧ ನಾನು ಆಯುಕ್ತರು, ಜಂಟಿ ಆಯುಕ್ತರು ಹಾಗೂ ವಿಭಾಗೀಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಆಗಸ್ಟ್ 5ರಂದು ದೂರು ಸಲ್ಲಿಸಿದ್ದೇನೆ. ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟ ಕಿರಿಯ ಅಧಿಕಾರಿಗಳು ಲಂಚ ಪಡೆದು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ ಎಂಬ ಸಂಶಯ ಮೂಡಿದೆ. ಇನ್ನೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ನಾನು ಹೈಕೋರ್ಟ್ ಮೊರೆ ಹೋಗುತ್ತೇನೆ. ಇನ್ನೂ ಕಾನೂನು ಕ್ರಮ ವಿಳಂಬವಾಗಬಾರದು ಎಂಬುದು ನನ್ನ ಮನವಿ.
-ಜಿ. ವೆಂಕಟೇಶ್, ವಕೀಲರು

ಸೆಟ್ ಬ್ಯಾಕ್ ಬಿಟ್ಟಿಲ್ಲ

ನಗರದ ವಾರ್ಡ್ ನಂ. 131ರ ನಾಯಂಡಹಳ್ಳಿ ರೇವಣ್ಣ ಬಡಾವಣೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡವನ್ನು ನಿಯಮಬಾಹಿರವಾಗಿ ನಿರ್ಮಿಸಲಾಗುತ್ತಿದೆ. ಈ ಕಟ್ಟಡಕ್ಕೆ ಸೆಟ್ ಬ್ಯಾಕ್ ಬಿಟ್ಟಿಲ್ಲ. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಲಿ.
-ಪ್ರದೀಪ್ ಫಾಲಾಕ್ಷ

ನಿಯಮ ಗಾಳಿಗೆ ತೂರಿ ಕಟ್ಟಡ ನಿರ್ಮಾಣ
ರಾಜರಾಜೇಶ್ವರಿ ನಗರದ ವಸತಿ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡವೊಂದನ್ನು ನಿಯಮಗಳನ್ನು ಗಾಳಿಗೆ ತೂರಿ ನಿರ್ಮಿಸಲಾಗಿದೆ. ಈ ಕಟ್ಟಡದ ಬಳಿ ವಾಹನ ನಿಲುಗಡೆಗೆ ಅವಕಾಶವೇ ಇಲ್ಲ. ವಸತಿ ಬಡಾವಣೆಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅದು ಹೇಗೆ ಬಿಬಿಎಂಪಿ ಅನುಮತಿ ನೀಡುತ್ತಿದೆಯೋ ನನಗೆ ಅರ್ಥವಾಗುತ್ತಿಲ್ಲ. ರಸ್ತೆಯ ಅಗಲ ಕೂಡ 12 ಮೀಟರ್‌ಗಳಿಗಿಂತ ಕಡಿಮೆಯಿದೆ. ಈ ಸಂಬಂಧ ಬಿಬಿಎಂಪಿಯ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಗಮನಸೆಳೆದಿದ್ದೇನೆ. ಇದುವರೆಗೆ ಏನೂ ಪ್ರಯೋಜನವಾಗಿಲ್ಲ.
-ಅರುಣ್‌ಕುಮಾರ್ ಟಿ. ಗೌಡ

ಹೆಚ್ಚುವರಿ ಅಕ್ರಮ ಮಹಡಿ ನಿರ್ಮಾಣ
ಬನಶಂಕರಿ ಮೂರನೇ ಹಂತ ಮೂರನೇ ಬ್ಲಾಕ್‌ನ ಕೆಂಪೇಗೌಡ ಬಡಾವಣೆಯಲ್ಲಿ ವ್ಯಕ್ತಿಯೊಬ್ಬರು ಮೊದಲು ನೆಲಮಹಡಿ ಜತೆಗೆ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಿದ್ದರು. ಇದೀಗ ಮತ್ತೊಂದು ಅಂತಸ್ತನ್ನು ಅಕ್ರಮವಾಗಿ ನಿರ್ಮಿಸುತ್ತಿದ್ದಾರೆ.

ಇದನ್ನು ಸ್ಥಳೀಯ ಬಿಬಿಎಂಪಿ ಅಧಿಕಾರಿ ಏಕೆ ಪ್ರಶ್ನಿಸುತ್ತಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರು ಅಧಿಕಾರಿಗಳ ತಂಡವೊಂದನ್ನು ಸ್ಥಳಕ್ಕೆ ಕಳಿಸಿ ಕೆಲಸ ನಿಲ್ಲಿಸಲಿ. ದಯವಿಟ್ಟು ನಮ್ಮ ಹೆಸರು ಪ್ರಕಟಿಸಬೇಡಿ ಅಥವಾ ಬಹಿರಂಗಪಡಿಸಬೇಡಿ.
ಹೆಸರು ಬೇಡ

ಉದ್ಯಾನ ಅತಿಕ್ರಮಣ

ಗವಿ ಗಂಗಾಧರ ದೇವಸ್ಥಾನದ ಪಕ್ಕದಲ್ಲಿರುವ ಪೀಠವೊಂದು ಹಿಂಭಾಗದ ಉದ್ಯಾನ ಜಾಗವನ್ನು ಅತಿಕ್ರಮಿಸಿದೆ. ಪರಿಶೀಲಿಸಿ,
ಹೆಸರು ಬೇಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT