ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಕರಪತ್ರ ಮುದ್ರಣಕ್ಕೆ ಜೈಲು!

Last Updated 10 ಏಪ್ರಿಲ್ 2013, 19:43 IST
ಅಕ್ಷರ ಗಾತ್ರ

ದಾವಣಗೆರೆ: ಐದು ವರ್ಷದ ನಂತರ ಮತ್ತೆ ಚುನಾವಣೆ ಬಂದಿದೆ. ರಾಜಕೀಯ ಪಕ್ಷದವರನ್ನು ಹಿಡಿದುಕೊಂಡು, ಮುದ್ರಣ ಕೆಲಸಗಳನ್ನು ಹೆಚ್ಚಾಗಿ ಪಡೆದು ಒಂದಷ್ಟು ಹಣ ಗಳಿಸಿಕೊಳ್ಳೋಣ ಎಂದು ಯೋಜಿಸುತ್ತಿರುವ ಮುದ್ರಕರೇ, ಪ್ರಿಟಿಂಗ್ ಪ್ರೆಸ್ ಮಾಲೀಕರೇ ಸ್ವಲ್ಪ ಇತ್ತ ಗಮನಿಸಿ. ಅನುಮತಿ ಇಲ್ಲದೇ, ಕರಪತ್ರ ಮೊದಲಾದ ಪ್ರಚಾರ ಸಾಮಗ್ರಿ  ಮುದ್ರಿಸಿದರೆ, ಅಭ್ಯರ್ಥಿಗಳೊಂದಿಗೆ  ಜೈಲುವಾಸ ಅನುಭವಿಸಬೇಕಾದೀತು!

- ಹೌದು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಇಂಥದೊಂದು ಕಠಿಣ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ.

ಅಬ್ಬರದ ಪ್ರಚಾರಕ್ಕೆ ಹಾಗೂ ನಗರ, ಪಟ್ಟಣದ ಅಂದಗೆಡಿಸುವ ಫಲಕಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಪ್ರಚಾರ ಸಾಮಗ್ರಿಗಳನ್ನು ಮನಸೋ ಇಚ್ಛೆ ಮುದ್ರಿಸಿ ಅಥವಾ ಸಿದ್ಧಪಡಿಸಿ ವಿತರಣೆ ಮಾಡುವುದಕ್ಕೆ ನಿರ್ಬಂಧ ವಿಧಿಸಿದೆ.

ಆಯೋಗದ ನಿರ್ದೇಶನವೇನು?: ಹಿಂದಿನ ಚುನಾವಣೆಗಳಲ್ಲಿ, ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದವರು ನಿರ್ಬಂಧವಿಲ್ಲದೇ ಎಷ್ಟು ಬೇಕಾದರೂ ಕರಪತ್ರ, ಭಿತ್ತಿಪತ್ರಗಳನ್ನು ಮುದ್ರಿಸಿ ವಿತರಿಸಬಹುದಿತ್ತು. ಕಟೌಟ್, ಬ್ಯಾನರ್‌ಗಳಲ್ಲಿ ಮಿಂಚಬಹುದಿತ್ತು. ಮತದಾರರ ಮೇಲೆ ವಿವಿಧ ರೀತಿಯಲ್ಲಿ ಆಮಿಷಗಳ `ಪ್ರಯೋಗ' ಮಾಡಬಹುದಿತ್ತು.

ಆದರೆ, ಈ ಬಾರಿ ಇದಕ್ಕೆಲ್ಲ `ತಡೆ' ಬೀಳಲಿದೆ. ವಿಧಾನಸಭೆ ಚುನಾವಣೆ ಮುಗಿಯುವವರೆಗೂ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಟೌಟ್ ಹಾಗೂ ಬ್ಯಾನರ್‌ಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಚುನಾವಣಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ, ಯಾವುದೇ ರೀತಿಯ ಬ್ಯಾನರ್, ಬಂಟಿಂಗ್ಸ್ ಅಥವಾ ಕಟೌಟ್‌ಗಳನ್ನು ಹಾಕಬಾರದು. ನೀತಿಸಂಹಿತೆ ಉಲ್ಲಂಘಿಸಬಾರದು ಎಂದು ಸೂಚಿಸಿ ಎಲ್ಲಾ ರಾಜಕೀಯ ಪಕ್ಷಗಳ ಜಿಲ್ಲಾಮಟ್ಟದ ಮುಖ್ಯಸ್ಥರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಜಿಲ್ಲಾಡಳಿತದಿಂದ ಪತ್ರ ಬರೆಯಲಾಗಿದೆ.

ಹಾಗೊಂದು ವೇಳೆ, ನೀತಿಸಂಹಿತೆ ಉಲ್ಲಂಘಿಸಿದಲ್ಲಿ ಸಂಬಂಧಿಸಿದ ಸಿಬ್ಬಂದಿ ಕಟೌಟ್, ಬ್ಯಾನರ್ ತೆರೆವುಗೊಳಿಸಿ ಶಿಸ್ತು ಕ್ರಮ ಕೈಗೊಳ್ಳುತ್ತಾರೆ. ಇದರಿಂದ ಆಗುವ ನಷ್ಟಕ್ಕೆ ಆಡಳಿತ ಹೊಣೆಯಾಗುವುದಿಲ್ಲವೆಂದು ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ವಿಭಾಗದ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.

ಲೆಕ್ಕಪತ್ರ ಇಡಬೇಕು: ಉಳಿದಂತೆ, ಕರಪತ್ರ ಅಥವಾ ಭಿತ್ತಿಪತ್ರಗಳನ್ನು ಮುದ್ರಿಸಿ ವಿತರಿಸುವುದಕ್ಕೆ ಅವಕಾಶವಿದೆ. ಒಬ್ಬ ಅಭ್ಯರ್ಥಿಗೆ ರೂ 16 ಲಕ್ಷದವರೆಗೆ ಚುನಾವಣಾ ವೆಚ್ಚ ಮಿತಿ ನಿಗದಿಪಡಿಸಲಾಗಿದೆ. ಈ ಮಿತಿ ಮೀರಬಾರದು. ಮಿತಿಯೊಳಗೆ ಎಷ್ಟು ಕರಪತ್ರಗಳನ್ನು ಬೇಕಾದರೂ ಮುದ್ರಿಸಿಕೊಳ್ಳಬಹುದು. ಆದರೆ, ಇದಕ್ಕೆ ಸಂಬಂಧಿಸಿದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೊಸದಾಗಿ ರಚಿಸಿರುವ ಮಾಧ್ಯಮ ಪ್ರಮಾಣಪತ್ರ ಮತ್ತು ನಿರ್ವಹಣಾ ಸಮಿತಿಯಿಂದ (ಎಂಸಿಎಂಸಿ) ಅನುಮತಿ ಪಡೆಯಬೇಕು.

ಖರ್ಚಿಗೆ ಸಂಬಂಧಿಸಿದ ಸಮರ್ಪಕ ದಾಖಲೆಗಳನ್ನು ಸಂಗ್ರಹಿಸಿಡಬೇಕು. ಯಾವುದೇ ರಾಜಕೀಯ ಪಕ್ಷದವರು, ಕರಪತ್ರಗಳನ್ನು ಮುದ್ರಿಸಲು ಜಿಲ್ಲಾಡಳಿತದಿಂದ ಅನುಮತಿ ಪಡೆದಿರುವ ಬಗ್ಗೆ `ಅನುಮತಿ ಪತ್ರ' ಪ್ರಸ್ತುತಪಡಿಸಿದರೆ ಮಾತ್ರ ಮುದ್ರಕರು ಕರಪತ್ರ ಮುದ್ರಿಸಿಕೊಡಬೇಕು. ಇದರೊಂದಿಗೆ, ಘೋಷಣಾಪತ್ರದ ನಮೂನೆಯೊಂದನ್ನು (ಇದನ್ನು ಅಭ್ಯರ್ಥಿ ಜಿಲ್ಲಾಧಿಕಾರಿ ಕಚೇರಿಯಿಂದ ತರಬೇಕು) ಮುದ್ರಕರು ಭರ್ತಿ ಮಾಡಿ, ಮುದ್ರಿಸಿದ ಮೂರು ಕರಪತ್ರ ಹಾಗೂ ಇತರ ದಾಖಲೆಗಳನ್ನು ಸಮಿತಿಗೆ ಸಲ್ಲಿಸಬೇಕು (ಎಂಸಿಎಂಸಿ). ಲೆಕ್ಕಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಜಿಲ್ಲಾಡಳಿತಕ್ಕೆ ನೀಡಬೇಕು.

ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಇಲ್ಲದೇ, ಪ್ರಚಾರ ಸಾಮಗ್ರಿ ಮುದ್ರಿಸಿದರೆ ಅಂತಹ ಮುದ್ರಕರು ಹಾಗೂ ಅಭ್ಯರ್ಥಿಗೆ 6 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಈ ಸಂಬಂಧವಾಗಿ, ಮುದ್ರಕರು, ಪ್ರಿಟಿಂಗ್ ಪ್ರೆಸ್, ಫ್ಲೆಕ್ಸ್- ಬ್ಯಾನರ್ ಮುದ್ರಿಸುವರಿಗೆ ಜಿಲ್ಲಾಡಳಿತದಿಂದ ಪತ್ರ ಬರೆದು ಸೂಚಿಸಲಾಗಿದೆ. ಮನಬಂದಂತೆ ಚುನಾವಣಾ ಪ್ರಚಾರದ ಸಾಮಗ್ರಿ ಮುದ್ರಿಸುವಂತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

ವಾಹಿನಿಗಳ ಮೇಲೂ `ಕಣ್ಗಾವಲು'!
ರಾಜಕೀಯ ಪಕ್ಷದವರು, ಅಭ್ಯರ್ಥಿಗಳು ವಾಹಿನಿಗಳಲ್ಲಿ (ಸ್ಥಳೀಯ ವಾಹಿನಿಗಳು ಸೇರಿ) ಮತಪ್ರಚಾರ ನಡೆಸುವುದು ಸಾಮಾನ್ಯವಾಗಿ ಕಂಡುಬರುತ್ತದೆ.

ಇದೀಗ, ಹೀಗೆ ಮತಯಾಚನೆಗೆ ಸಂಬಂಧಿಸಿದ ವಿಚಾರ ಪ್ರಸಾರ ಮಾಡುವುದಕ್ಕೆ ಸ್ಥಳೀಯ ವಾಹಿನಿಗಳು `ಮಾಧ್ಯಮ ಪ್ರಮಾಣಪತ್ರ ಮತ್ತು ನಿರ್ವಹಣಾ ಸಮಿತಿ'ಯಿಂದ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ, ನೀತಿಸಂಹಿತೆ ಉಲ್ಲಂಘಿಸಿದಂತಾಗುತ್ತದೆ ಎಂದು ಆಯೋಗ ಹೇಳಿದೆ.

ಈ ಹಿನ್ನೆಲೆಯಲ್ಲಿ, ಸಮಿತಿಯು ವಾಹಿನಿಗಳು ಪ್ರಸಾರ ಮಾಡುವ ಕಾರ್ಯಕ್ರಮಗಳನ್ನು `ರೆಕಾರ್ಡ್' ಮಾಡುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT