ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಕಲ್ಲು ಗಣಿಗಾರಿಕೆ: ಕಾಂಗ್ರೆಸ್ ಪ್ರತಿಭಟನೆ

Last Updated 24 ಫೆಬ್ರುವರಿ 2012, 10:25 IST
ಅಕ್ಷರ ಗಾತ್ರ

ಸೋಮವಾರಪೇಟೆ: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಮದಲಾಪುರ ಹಾಗೂ ಹೊಸಳ್ಳಿ ಗ್ರಾಮದ ಸುತ್ತಮುತ್ತ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಹಾಗೂ ಬಂಡೆ ಮೇಲಿರುವ ದೇವಾಲಯವನ್ನು ಧ್ವಂಸಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿ  ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸ್ಥಳೀಯ ಗ್ರಾಮಸ್ಥರು ಗಣಿ ಪ್ರದೇಶಕ್ಕೆ ಬುಧವಾರ ಸಂಜೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ ಲೋಕೇಶ್, ಕಾವೇರಿ ರೈತ ಹೋರಾಟ ಸಮಿತಿಯ ಅಧ್ಯಕ್ಷ          ಜಿ.ಎಲ್. ನಾರಾಯಣ, ಬೀರದೇವರ ಸಮಿತಿ ಕಾರ್ಯದರ್ಶಿ ಪರಮಶಿವ, ಉಪಾಧ್ಯಕ್ಷ ವೇದಮೂರ್ತಿ ನೇತೃತ್ವದಲ್ಲಿ ಪ್ರತಿಭಟನಾಕಾರರು ಗವಿ ದೇವಾಲಯದ ಮುಂದೆ ಧರಣಿ ಕುಳಿತು ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

`ಕೊಡಗನ್ನು ಆಳುತ್ತಿದ್ದ ಹಾಲೇರಿ ವಂಶಸ್ಥರ ಕಾಲದಲ್ಲಿಯೇ ಇಲ್ಲಿನ ಬೃಹದಾಕಾರದ ಕಲ್ಲು ಬಂಡೆಯೊಳಗಿರುವ ಮುನೇಶ್ವರ ಗವಿದೇವಾಲಯದಲ್ಲಿ ಪೂಜೆಗಳು ನಡೆಯುತ್ತಿತ್ತು. 1956 ತನಕ ಕೊಡಗು ರಾಜ್ಯದಲ್ಲಿ ನಮ್ಮ ತಂದೆ ಜೆ.ಎಂ. ಲಿಂಗರಾಜಯ್ಯ ಶಾಸಕರಾಗಿದ್ದರು. ಅಂದು ಕೂಡ ಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಗು ತ್ತಿತ್ತು~ ಎಂದು ಜಿ.ಎಲ್.ನಾರಾಯಣ ಹೇಳಿದರು.

ಕಳೆದ ಮೂರು ವರ್ಷಗಳಿಂದ ಗಣಿಗಾರಿಕೆ ನೆಪದಲ್ಲಿ ದೇವಾಲಯ ದ್ವಂಸ ಮಾಡುವ ಹುನ್ನಾರ ನಡೆಯುತ್ತಿದೆ. ಈ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಮುಂದುವರಿದರೆ ಸ್ಥಳೀಯ ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಗಣಿಗಾರಿಕೆ ಪ್ರದೇಶದಲ್ಲಿ ಅಹೋರಾತ್ರಿ ಧರಣಿ ನಡೆಸಿ ಪ್ರತಿಭಟಿಸಲಾಗುತ್ತದೆ ಎಂದು ಎಚ್ಚರಿಸಿದರು.

ಯಲಕನೂರು ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಕಳೆದ ಒಂದು ವರ್ಷದಿಂದ ಹೋರಾಟ ನಡೆಯುತ್ತಿದೆ. ಕೇವಲ ಒಂದೂವರೆ ಎಕರೆ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಪಡೆದು ಹತ್ತಾರು ಕಡೆ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಡೆಸಲಾಗುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಆರೋಪಿಸಿದರು.

ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗಣಿ ಸಂಪತ್ತಿನ ಲೂಟಿಯನ್ನು ತಡೆಹಿಡಿಯುವಂತೆ ಶಾಸಕ ರಂಜನ್, ಜಿಲ್ಲಾಧಿಕಾರಿ ಹಾಗೂ ಡಿಎಫ್‌ಒಗೆ ದೂರು ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಶಾಸಕರ ಮೌನ ಎಲ್ಲರಲ್ಲಿಯೂ ಸಂಶಯ ಮೂಡಿಸಿದೆ ಎಂದರು.

ಪರವಾನಗಿ ಪಡೆದಿರುವ ಗಣಿಗಾರಿಕೆ ವಿರುದ್ಧ ನಮ್ಮ ಹೋರಾಟವಿಲ್ಲ. ಆದರೆ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಜಿಲ್ಲಾಡಳಿತ 8 ದಿನಗಳ ಒಳಗೆ ತಡೆಯಬೇಕು. ಇಲ್ಲವಾದರೆ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಲೋಕೇಶ್ ಎಚ್ಚರಿಸಿದರು.

ಫೆ. 25 ರಂದು ಸಂಸದ ಎಚ್.ವಿಶ್ವನಾಥ್ ಕಲ್ಲು ಗಣಿಗಾರಿಕೆ ನಡೆಯತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ ಪರೀಶಿಲನೆ ಮಾಡಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT