ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಂಪುಟ ಅಸ್ತು

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿ ಅನ್ವಯ ಮೂವರು ಐಎಎಸ್, ನಾಲ್ವರು ಐಎಫ್‌ಎಸ್ ಸೇರಿದಂತೆ ಒಟ್ಟು 447 ಮಂದಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಸಚಿವ ಸಂಪುಟ ಸಭೆ ಶುಕ್ರವಾರ ಒಪ್ಪಿಗೆ ನೀಡಿದೆ.

ಲೋಕಾಯುಕ್ತ ವರದಿ ಕುರಿತು ಪರಿಶೀಲಿಸಲು ನೇಮಿಸಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ನೇತೃತ್ವದ ಉನ್ನತಾಧಿಕಾರ ಸಮಿತಿಯ ವರದಿಯನ್ನು ಪೂರ್ಣ ಅಂಗೀಕರಿಸಿರುವ ಸಂಪುಟ ಸಭೆ, ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳ ವಿರುದ್ಧವೂ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದೆ. ಸಂಪುಟ ಸಭೆ ತೀರ್ಮಾನಗಳ ಬಗ್ಗೆ ಸಚಿವ ಎಸ್.ಸುರೇಶ್‌ಕುಮಾರ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಅಕ್ರಮದಲ್ಲಿ ಭಾಗಿಯಾಗಿದ್ದ ಐಎಎಸ್ ಅಧಿಕಾರಿಗಳಾದ ಕೆ.ಎಸ್.ಪ್ರಭಾಕರ್, ಎಂ.ಇ.ಶಿವಲಿಂಗಮೂರ್ತಿ ಮತ್ತು ಗಂಗಾರಾಮ್ ಬಡೇರಿಯಾ ಈ ಮೂವರೂ ಹಿಂದೆ ಗಣಿ ಇಲಾಖೆ ನಿರ್ದೇಶಕರಾಗಿದ್ದು, ಇವರ ವಿರುದ್ಧ ಕ್ರಮಕ್ಕೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಐಎಫ್‌ಎಸ್ ಅಧಿಕಾರಿಗಳಾದ ಮುತ್ತಯ್ಯ, ಶ್ರೀನಿವಾಸುಲು, ಪಿ.ರಾಜಶೇಖರ್ ಮತ್ತು ಎಂ.ಕೆ.ಶುಕ್ಲು ಅವರ ವಿರುದ್ಧ ಕ್ರಮ ಜರುಗಿಸುವ ಪ್ರಕ್ರಿಯೆ ಆರಂಭವಾಗಿದೆ.

ಮುತ್ತಯ್ಯ ಅವರಿಂದಲೇ ಸರ್ಕಾರಕ್ಕೆ 13.53 ಕೋಟಿ ರೂಪಾಯಿ ನಷ್ಟವಾಗಿರುವ ಬಗ್ಗೆ ಲೋಕಾಯುಕ್ತ ವರದಿಯಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಆ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ. ಉಳಿದ ಅಧಿಕಾರಿಗಳ ವಿರುದ್ಧ ಆರೋಪಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿದ್ದು, ವಿವರ ಪಡೆದ ನಂತರ ಅವರ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ವಿವರಿಸಿದರು.

ಒಟ್ಟು 617 ಮಂದಿ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಕುರಿತು ಪರಿಶೀಲಿಸಿದ ಉನ್ನತಾಧಿಕಾರ ಸಮಿತಿ 617ರಲ್ಲಿ 170 ಮಂದಿಯ ವಿವರಗಳು ಪತ್ತೆಯಾಗುತ್ತಿಲ್ಲ.

ವರದಿಯಲ್ಲಿ ಕೆಲವು ಕಡೆ ಹೆಸರು ಇದ್ದರೆ, ಅವರು ಎಲ್ಲಿಯವರು, ಯಾವ ಇಲಾಖೆಗೆ ಸೇರಿದವರು ಎಂಬುದರ ಮಾಹಿತಿ ಇಲ್ಲ. ಕೆಲವು ಕಡೆ ಕೇವಲ ಫಾರೆಸ್ಟರ್ ಎಂದು ಇದೆ. ಇನ್ನೂ ಹಲವು ಕಡೆ ಹುದ್ದೆ ಹೆಸರು ಇದ್ದು, ಸ್ಥಳದ ವಿವರ ಇಲ್ಲ. ಹೀಗಾಗಿ ಇಂತಹ 170 ಹೆಸರುಗಳನ್ನು ಹೊರತುಪಡಿಸಿ, 447 ಮಂದಿಯನ್ನು ಗುರುತಿಸಿದ್ದು, ಅವರ ವಿರುದ್ಧ ಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.ಇದರಲ್ಲಿ ಈಗಾಗಲೇ ವಿವಿಧ ಇಲಾಖೆಗಳಿಗೆ ಸೇರಿದ 182 ಮಂದಿ ವಿರುದ್ಧ ಕ್ರಮ ಜರುಗಿಸಲಾಗಿದೆ. ಉಳಿದ ಸಿಬ್ಬಂದಿ ವಿರುದ್ಧವೂ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು. ಅಧಿಕಾರಿಗಳ ವಿರುದ್ಧ ಕ್ರಮದ ಕುರಿತ ಮಾಹಿತಿ ಅಲ್ಲದೆ, ಗಣಿ ಅಕ್ರಮ ತಡೆಯಲು ಅನೇಕ ಸಲಹೆಗಳನ್ನು ಉನ್ನತಾಧಿಕಾರ ಸಮಿತಿ ನೀಡಿದ್ದು, ಅವೆಲ್ಲವನ್ನೂ ಜಾರಿಗೊಳಿಸಲಾಗುವುದು ಎಂದು ಅವರು ವಿವರಿಸಿದರು.

ಎಸ್‌ಐಟಿ ರಚನೆ:
ಅಕ್ರಮ ಗಣಿಗಾರಿಕೆ, ಪರವಾನಗಿ ದುರುಪಯೋಗ, ಅದಿರು ಸಾಗಣೆ, ರಫ್ತು, ತೆರಿಗೆ ವಂಚನೆ ಇತ್ಯಾದಿ ಅನೇಕ ರೀತಿಯ ಅಕ್ರಮಗಳು ನಡೆದಿದ್ದು, ಅವೆಲ್ಲದರ ತನಿಖೆಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವ ಅಗತ್ಯ ಇದೆ ಎಂದು ಸಮಿತಿ ಸಲಹೆ ನೀಡಿದ್ದು, ಸದ್ಯದಲ್ಲೇ ಆ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದರು.

ಗೃಹ, ಗಣಿ ಮತ್ತು ಭೂ ವಿಜ್ಞಾನ, ವಾಣಿಜ್ಯ, ಅರಣ್ಯ, ಕಂದಾಯ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳನ್ನೂ ಎಸ್‌ಐಟಿ ತಂಡದಲ್ಲಿ ಸೇರಿಸಬೇಕೆನ್ನುವ ಸಲಹೆಯನ್ನೂ ನೀಡಿದ್ದಾರೆ. ಅದಕ್ಕೂ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು.

ಅಧಿಕಾರಿಗಳ ವರದಿಯಲ್ಲಿ ಗಣಿ ಇಲಾಖೆ ದುರ್ಬಲವಾಗಿರುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಒಟ್ಟು 90 ಪರವಾನಗಿಗಳನ್ನು ನಿರ್ವಹಿಸಲು ಕೇವಲ ಒಬ್ಬರು ಉಪ ನಿರ್ದೇಶಕರಿದ್ದಾರೆ. ಅವರ ಬಳಿ ಸಾಕಷ್ಟು ಸಿಬ್ಬಂದಿ  ಇಲ್ಲ.

ಇದು ಕೂಡ ಅಕ್ರಮ ನಡೆಯಲು ಕಾರಣವಾಗಿದ್ದು, ಅದರ ಮೇಲೆ ನಿಯಂತ್ರಣ ಹೇರಬೇಕಾದರೂ ಅಗತ್ಯ ಸಿಬ್ಬಂದಿಯನ್ನು ಒದಗಿಸಬೇಕು. ಗಣಿ ಪರವಾನಗಿಯನ್ನು ಏಕಗವಾಕ್ಷಿ ಪದ್ಧತಿಯಡಿ ವಿತರಿಸುವ ವ್ಯವಸ್ಥೆ ಕೂಡ ಆಗಬೇಕೆನ್ನುವ ಸಲಹೆ ನೀಡಿದೆ ಎಂದು ಸುರೇಶ್‌ಕುಮಾರ್ ವಿವರಿಸಿದರು.

ಅಕ್ರಮ ಗಣಿಗಾರಿಕೆಯಿಂದ ಆದ ನಷ್ಟದ ಐದು ಪಟ್ಟನ್ನು ತಪ್ಪಿತಸ್ಥ ಅಧಿಕಾರಿಗಳಿಂದ ವಸೂಲಿ ಮಾಡಬೇಕೆನ್ನುವ ಶಿಫಾರಸಿನ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಇದಕ್ಕೆ ಕಾನೂನಿನಲ್ಲಿ ಸಮರ್ಥನೆ ಇಲ್ಲ ಎಂದು ಅಧಿಕಾರಿಗಳ ಸಮಿತಿ ಹೇಳಿದೆ. ಹೀಗಾಗಿ ನಷ್ಟ ವಸೂಲಿಗೆ ಪೂರಕವಾಗಿ ಕಾನೂನಿಗೆ ತಿದ್ದುಪಡಿ ಮಾಡಿದ ನಂತರವೇ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

ಜೈರಾಜ್ ಸಮಿತಿ ವರದಿಯನ್ನು ಅಂಗೀಕರಿಸಿದರೆ ಲೋಕಾಯುಕ್ತ ವರದಿ ಅಂಗೀಕರಿಸಿದಂತಾಗುವುದೇ ಎಂಬ ಪ್ರಶ್ನೆಗೆ `ಲೋಕಾಯುಕ್ತ ಕಾಯ್ದೆಯಲ್ಲಿ ಅವರು ಕೊಡುವ ವರದಿಯನ್ನು ಅಂಗೀಕರಿಸುವುದು ಅಥವಾ ತಿರಸ್ಕರಿಸುವ ವಿಚಾರ ಇಲ್ಲ. ವರದಿ ಕೊಟ್ಟ ನಂತರ 90 ದಿನಗಳ ಒಳಗೆ ಕ್ರಮ ತೆಗೆದುಕೊಂಡ ಬಗ್ಗೆ ವರದಿ ನೀಡಬೇಕಾಗಿದೆ. ಆ ಕೆಲಸವನ್ನು ರಾಜ್ಯ ಸರ್ಕಾರ ಈಗ ಮಾಡಲಿದೆ~ ಎಂದು ಸುರೇಶ್‌ಕುಮಾರ್ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT