ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆ ವರದಿ : 28ರಿಂದ ಕೇಂದ್ರ ಉನ್ನತ ಸಮಿತಿ ವಿಚಾರಣೆ

Last Updated 24 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ಸುಪ್ರೀಂಕೋರ್ಟ್ ನೇಮಿಸಿದ್ದ ಜಂಟಿ ಸಮಿತಿ ತನಿಖೆ ನಡೆಸಿ, ಸಲ್ಲಿಸಿರುವ ವರದಿಗೆ ಸಂಬಂಧಿಸಿದಂತೆ ವಿವಿಧ ಗಣಿ ಕಂಪೆನಿಗಳು ಸಲ್ಲಿಸಿರುವ ಆಕ್ಷೇಪಣೆಗಳ ಬಗ್ಗೆ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಸೋಮವಾರದಿಂದ ವಿಚಾರಣೆ ನಡೆಸಲಿದೆ.

ಗಣಿ ಕಂಪೆನಿಗಳು ಮತ್ತು ಗಣಿ ಗುತ್ತಿಗೆದಾರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಸೋಮವಾರ ಆರಂಭವಾಗಲಿದ್ದು, ಡಿಸೆಂಬರ್ 1ರವರೆಗೂ ನಡೆಯಲಿದೆ. ನವದೆಹಲಿಯ ಚಾಣಕ್ಯಪುರಿಯಲ್ಲಿರುವ ಸಿಇಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ವಿಚಾರಣೆಗೆ ಹಾಜರಾಗುವಂತೆ ರಾಜ್ಯ ಸರ್ಕಾರ ಹಾಗೂ ಅರ್ಜಿದಾರರಿಗೆ ಸಿಇಸಿ ನೋಟಿಸ್ ಜಾರಿಮಾಡಿದೆ.

ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿ ಲೋಕಾಯುಕ್ತರು ಸಲ್ಲಿಸಿದ್ದ ಮೊದಲ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, 99 ಗಣಿಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿಇಸಿಗೆ ಆದೇಶಿಸಿತ್ತು. ನಂತರ ಬಳ್ಳಾರಿಯ ಮತ್ತಷ್ಟು ಗಣಿಗಳ ತನಿಖೆಗೂ ಆದೇಶ ಹೊರಬೀಳುವುದರೊಂದಿಗೆ ಈ ಸಂಖ್ಯೆ 125 ದಾಟಿತ್ತು. ಕೆಲ ದಿನಗಳ ಬಳಿಕ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ ಅಕ್ರಮ ಗಣಿಗಾರಿಕೆಯ ಬಗ್ಗೆಯೂ ಸಮಾಜ ಪರಿವರ್ತನಾ ಸಮುದಾಯ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಎರಡೂ ಜಿಲ್ಲೆಗಳ 60ಕ್ಕೂ ಹೆಚ್ಚು ಗಣಿಗಳ ಬಗ್ಗೆಯೂ ತನಿಖೆಗೆ ಕೋರ್ಟ್ ಆದೇಶ ನೀಡಿತ್ತು.

ಸಿಇಸಿ ಅಧ್ಯಕ್ಷ ಪಿ.ವಿ.ಜಯಕೃಷ್ಣನ್ ಮತ್ತು ಅವರ ಪ್ರತಿನಿಧಿಗಳು, ರಾಜ್ಯ ಅರಣ್ಯ ಇಲಾಖೆಯ ಪ್ರತಿನಿಧಿಯಾಗಿದ್ದ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ದೀಪಕ್ ಶರ್ಮ, ಲೋಕಾಯುಕ್ತದ ಪ್ರತಿನಿಧಿಯಾಗಿದ್ದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಯು.ವಿ.ಸಿಂಗ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಎಚ್.ಆರ್.ಶ್ರೀನಿವಾಸ್ ಅವರನ್ನೊಳಗೊಂಡ ಜಂಟಿ ಸಮಿತಿ ಮೂರೂ ಜಿಲ್ಲೆಗಳ ಗಣಿ ಪ್ರದೇಶಗಳ ಸರ್ವೆ, ಸ್ಥಳ ತನಿಖೆ ಮತ್ತು ದಾಖಲೆಗಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು. ಗಣಿ ಕಂಪೆನಿಗಳ ಪ್ರತಿನಿಧಿಗಳ ಹಾಜರಿಯಲ್ಲೇ ತನಿಖೆ ನಡೆಸಲಾಗಿತ್ತು.

ಅಕ್ರಮ ಗಣಿಗಾರಿಕೆ ನಡೆದಿರುವ ಗಣಿಗಳ ಗುತ್ತಿಗೆ ರದ್ದು ಮಾಡುವುದು, ಅಕ್ರಮವಾಗಿ ತೆಗೆದ ಅದಿರಿನ ಮಾರುಕಟ್ಟೆ ಮೌಲ್ಯದ ಐದುಪಟ್ಟು ದಂಡ ವಸೂಲಿ ಮಾಡುವುದು, ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಮತ್ತಿತರ ಕ್ರಮಗಳನ್ನು ಕೈಗೊಳ್ಳುವಂತೆ ಜಂಟಿ ಸಮಿತಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿತ್ತು. ವರದಿಯ ಶಿಫಾರಸುಗಳ ಬಗ್ಗೆ ಆಕ್ಷೇಪಣೆಗಳಿದ್ದರೆ ಸಿಇಸಿಗೆ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತ್ತು.

ಹಲವು ಕಂಪೆನಿಗಳು ಸಿಇಸಿಗೆ ಆಕ್ಷೇಪಣೆ ಸಲ್ಲಿಸಿವೆ. ಸೋಮವಾರದಿಂದ ಗುರುವಾರದವರೆಗೆ ಈ ಬಗ್ಗೆ ವಿಚಾರಣೆ ನಡೆಯಲಿದೆ. ಗಣಿ ಕಂಪೆನಿಗಳ ಪ್ರತಿನಿಧಿಗಳು, ರಾಜ್ಯ ಸರ್ಕಾರದ ಪ್ರತಿನಿಧಿಗಳು ಈ ವಿಚಾರಣೆಯಲ್ಲಿ ಪಾಲ್ಗೊಳ್ಳುವರು. ವಿಚಾರಣೆಯ ಬಳಿಕ ಸಿಇಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸುವ ವರದಿ ಆಧಾರದಲ್ಲೇ ಈ ಗಣಿ ಗುತ್ತಿಗೆಗಳ ಭವಿಷ್ಯ ನಿರ್ಧಾರವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT