ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆ ವಿರುದ್ಧ ಹರಿಹಾಯ್ದ ಅಧ್ಯಕ್ಷೆ

Last Updated 7 ಜೂನ್ 2011, 8:35 IST
ಅಕ್ಷರ ಗಾತ್ರ

ಹರಪನಹಳ್ಳಿ: ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ, ಅರಣ್ಯ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದೀರಿ? ನೀವು ಅರಣ್ಯ ಇಲಾಖೆಯ ಅಧಿಕಾರಿಗಳಾ? ಅಥವಾ ಅಕ್ರಮ ಗಣಿಗಾರಿಕೆಯ ಮಾಲೀಕರಿಂದ ಕಮಿಷನ್ ವಸೂಲಿ ಮಾಡುವ ಏಜೆಂಟರಾ?

-ಇಂತಹದೊಂದು ಪ್ರಶ್ನೆಯ ಮೂಲಕ ಅಧಿಕಾರಿಗಳ ನಡುಕಕ್ಕೆ ಕಾರಣರಾದವರು ತಾ.ಪಂ.ಯ ಅಧ್ಯಕ್ಷೆ ಜಯಮಾಲಾ.

 ಸಂದರ್ಭ: ಸೋಮವಾರ ತಾ.ಪಂ. ರಾಜೀವ್‌ಗಾಂಧಿ ಸಭಾಂಗಣದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ.

ಸಭೆ ಆರಂಭವಾಗುತ್ತಿದ್ದಂತಿಯೇ ಗರಂ ಆಗಿದ್ದಂತೆಯೇ ಕಂಡುಬಂದ ಅಧ್ಯಕ್ಷರು, `ತಾ.ಪಂ.ಗೆ ಒಬ್ಬ ಅಧ್ಯಕ್ಷರು ಇದ್ದಾರೆ. ಅವರಿಗೆ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿಯ ಮಾಹಿತಿ ಕೊಡಬೇಕೆಂಬುದೇ ಬಹುತೇಕ ಅಧಿಕಾರಿಗಳಿಗೆ ಗೊತ್ತಿಲ್ಲವೆ?~ ಎಂದು ತಮ್ಮ ಅಸಮಾಧಾನದ ಹೊಗೆಯನ್ನು ಹೊರ ಹಾಕಿದರು.

ಅರಣ್ಯಾಧಿಕಾರಿ ಮೋಹನ್ ಅವರು ಇಲಾಖೆಯ ಪ್ರಗತಿ ಕುರಿತು ವರದಿ ಮಂಡಿಸುತ್ತಿದ್ದಂತೆಯೇ ಮಧ್ಯೆ ಪ್ರವೇಶಿಸಿದ ಅಧ್ಯಕ್ಷೆ ಜಯಮಾಲಾ, ಬೇವಿನಹಳ್ಳಿ ಸಣ್ಣ ಮತ್ತು ದೊಡ್ಡ ತಾಂಡಾದ ಸುತ್ತಲೂ ಕಾಯ್ದಿಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಅಕ್ರಮ ತಡೆಯಲು ಯಾವ ಮಾನದಂಡ ಉಪಯೋಗಿಸುತ್ತಿದ್ದೀರಿ? ಎಂದು ಕೇಳಿದರು.

ಇದಕ್ಕೆ ಉತ್ತರಿಸಲು ಅಧಿಕಾರಿ ತಡಬಡಿಸಿದರು. ಪ್ರತಿ ತಿಂಗಳು ಕ್ವಾರಿ ಮಾಲೀಕರ ಬಳಿ ಬರ‌್ತೀರಾ. ಅವರು ಕೊಟ್ಟಷ್ಟು ಕಮಿಷನ್ ಪಡೆದು ವಾಪಸಾಗುತ್ತೀರಿ. ನೀವೆ ಹೀಗಾದರೇ, ಅರಣ್ಯ ರಕ್ಷಣೆ ಯಾರಿಂದ? ಜತೆಗೆ, ಗಣಿಗಾರಿಕೆ ನಡೆಯುತ್ತಿರುವುದರಿಂದ ಅರಣ್ಯ ಪ್ರದೇಶದ ಸಮೀಪದ ಜಮೀನುಗಳಲ್ಲಿಯೂ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಮೋಹನ್ ಅವರ ಮೇಲೆ ಅಧ್ಯಕ್ಷೆ ಹರಿಹಾಯ್ದರು.

ಕೃಷಿ ಇಲಾಖೆಯ ಪ್ರಗತಿ ಕುರಿತ ಚರ್ಚೆಯಲ್ಲಿ ವರದಿ ಮಂಡಿಸಿದ ಸಹಾಯಕ ಕೃಷಿ ನಿರ್ದೇಶಕ ಆರ್. ತಿಪ್ಪೇಸ್ವಾಮಿ, ತಾಲ್ಲೂಕಿನಾದ್ಯಂತ ಉತ್ತಮ ಮಳೆ ಸುರಿಯುತ್ತಿದ್ದು, ಬಿತ್ತನೆ ಕಾರ್ಯ ಚುರುಕಾಗಿದೆ. ಬಿತ್ತನೆ ಪ್ರಮಾಣಕ್ಕನುಗುಣವಾಗಿ ಬಿತ್ತನೆ ಬೀಜದ ದಾಸ್ತಾನು ಮಾಡಿ, ವಿತರಣೆ ಮಾಡಲಾಗುತ್ತಿದೆ. ರಸಗೊಬ್ಬರದ ಸಮಸ್ಯೆಯೂ ಇಲ್ಲ. ಸುವರ್ಣಭೂಮಿ ಯೋಜನೆ ಅಡಿ ಸಹಾಯಧನಕ್ಕಾಗಿ ತಾಲ್ಲೂಕಿನಾದ್ಯಂತ ಒಟ್ಟು 13,534 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ಅರ್ಜಿಗಳೇ 11,548ಅರ್ಜಿಗಳು ಎಂದು ಮಾಹಿತಿ ನೀಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿದ್ದೇಶಪ್ಪ ಇಲಾಖೆಯ ಪ್ರಗತಿ ಕುರಿತು, `ಬಾಲಸಂಜೀವಿನಿ~ ಎಂಬ ವಿನೂತನ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಇದರಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಕಲಿಯುತ್ತಿರುವ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ರೂ 50ಸಾವಿರದವರೆಗೆ ವಿವಿಧ ಕಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದು ಬಾಲವಾಡಿಗಳ ಆಪ್ತರಕ್ಷಕ ಇದ್ದಂತೆ ಎಂದು ಬಣ್ಣಿಸಿದರು.

ಶಿಕ್ಷಣ ಇಲಾಖೆಯ ಪ್ರಗತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಎಸ್. ಜತ್ತಿ, ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿ ಲಂಕ್ಯಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು ತಮ್ಮ ಇಲಾಖೆಯ ವರದಿ ಮಂಡಿಸಿದರು.
ಲೋಕೋಪಯೋಗಿ, ಸಮಾಜ ಕಲ್ಯಾಣ, ಅರಣ್ಯ (ಸಾಮಾಜಿಕ ವಲಯ), ಬೆಸ್ಕಾಂ, ತಾಲ್ಲೂಕು ಆರೋಗ್ಯ, ಕಾರ್ಮಿಕ ಸೇರಿದಂತೆ ವಿವಿಧ ಪ್ರಮುಖ ಇಲಾಖೆಗಳ ಮುಖ್ಯಸ್ಥರ ಹಾಜರಾತಿ ಎದ್ದು ಕಾಣುತ್ತಿತ್ತು.

ಅಧ್ಯಕ್ಷೆ ಜಯಮಾಲಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಚನ್ನಪ್ಪ, ಕಾರ್ಯ ನಿರ್ವಹಣಾಧಿಕಾರಿ ಟಿ. ಪಾಂಡ್ಯಪ್ಪ, ವ್ಯವಸ್ಥಾಪಕ ನಾಗೇಂದ್ರಪ್ಪ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT