ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆಗೆ ಎಂಎಂಎಲ್ ಅಧಿಕಾರಿಗಳ ಸಹಾಯ: ಅರ್ಜಿ ವಜಾ

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿರುವ ಆರೋಪ ಹೊತ್ತ ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್) ಕಂಪೆನಿಯ ಮಾಜಿ ಅಧಿಕಾರಿಗಳ ವಿರುದ್ಧದ ತನಿಖೆಯನ್ನು ಮುಂದುವರಿಸಲು ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.

ತಮ್ಮ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಸಲ್ಲಿಸಿರುವ ಖಾಸಗಿ ಮೊಕದ್ದಮೆ ಹಾಗೂ ಅದರ ಅನ್ವಯ ಲೋಕಾಯುಕ್ತ ವಿಶೇಷ ಕೋರ್ಟ್ ನೀಡಿರುವ ನಿರ್ದೇಶನದ ಮೇರೆಗೆ ನಡೆಯುತ್ತಿರುವ ತನಿಖೆಯ ರದ್ದತಿಗೆ ಕೋರಿ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್. ಆನಂದ ವಜಾ ಮಾಡಿದ್ದಾರೆ.

ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಡಾ.ಡಿ.ಎಸ್.ಅಶ್ವತ್ಥ ಹಾಗೂ ಉಪಪ್ರಧಾನ ವ್ಯವಸ್ಥಾಪಕರಾಗಿದ್ದ (ಉತ್ಪಾದನೆ) ಕೆ.ಶ್ರೀನಿವಾಸ್ ಮತ್ತು ಶಂಕರಲಿಂಗಯ್ಯ ಅವರ ವಿರುದ್ಧ ಈಗ ತನಿಖೆ ಮುಂದುವರಿಯಲಿದೆ.

`ಲೋಕಾಯುಕ್ತರು ನೀಡಿರುವ ವರದಿಯನ್ನು ಆಧರಿಸಿ ದೂರು ದಾಖಲಾಗಿದೆ. ಆರೋಪಗಳು ನಿರಾಧಾರ ಎಂದು ಹೇಳಲಾಗದು. ಅಧಿಕಾರಿಗಳ ತೇಜೋವಧೆ ಮಾಡುವ ನಿಟ್ಟಿನಲ್ಲಿ ಈ ದೂರು ದಾಖಲಾಗಿದೆ ಎಂಬುದಾಗಿಯೂ ಹೇಳುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಪರಿಶೀಲಿಸಲು ತನಿಖೆ ಮುಂದುವರಿಯುವ ಅಗತ್ಯ ಇದೆ~ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಗಳೇನು? 2003ರಿಂದ 2005ರವರೆಗಿನ ಅವಧಿಯಲ್ಲಿ ಎಂಎಂಎಲ್ ಕಂಪೆನಿಯ ಕೆಲವೊಂದು ಕಾಮಗಾರಿಗಳನ್ನು ಗುತ್ತಿಗೆಗೆ ನೀಡುವಾಗ ಹಾಗೂ ಇತರ ಕಂಪೆನಿಗಳ ಜೊತೆಗೆ ಒಪ್ಪಂದ ಮಾಡುವ ಸಂದರ್ಭದಲ್ಲಿ ಅವ್ಯವಹಾರ ಎಸಗಿರುವ ಆರೋಪ ಅಶ್ವತ್ಥ ಹಾಗೂ ಶ್ರೀನಿವಾಸ್ ಅವರ ಮೇಲಿದೆ.
 
ಈ ಮೂಲಕ ಅಕ್ರಮ ಗಣಿಗಾರಿಕೆ ನಡೆಸಲು ಕೆಲವು ಕಂಪೆನಿಗಳಿಗೆ ನೆರವು ನೀಡಿ ಸರ್ಕಾರಕ್ಕೆ ಕ್ರಮವಾಗಿ 95.23 ಕೋಟಿ ಹಾಗೂ 14.83 ಕೋಟಿ ರೂಪಾಯಿ ನಷ್ಟ ಮಾಡಿರುವುದಾಗಿ ಆರೋಪಿಸಲಾಗಿದೆ.

2005-06ನೇ ಸಾಲಿನಲ್ಲಿ `ಮುಕುಂದ ಅಂಡ್ ಕುಲಕರ್ಣಿ ಸ್ಟೀಲ್ ಇಂಡಸ್ಟ್ರಿ~ಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಅದಿರನ್ನು ಕಡಿಮೆ ಬೆಲೆಗೆ ಮಾರಿ ಬೊಕ್ಕಸಕ್ಕೆ 63.38 ಕೋಟಿ ರೂಪಾಯಿ ನಷ್ಟ ಉಂಟು ಮಾಡಿರುವ ಆರೋಪ ಶಂಕರಲಿಂಗಯ್ಯ ಅವರ ವಿರುದ್ಧ ಇದೆ.

ಎಂಎಂಎಲ್ ಕಂಪೆನಿ ಮೂಲಕ ಅಕ್ರಮ ಗಣಿಗಾರಿಕೆ ನಡೆಸಲು ಖಾಸಗಿ ಕಂಪೆನಿಗಳಿಗೆ ಅನುಕೂಲ ಮಾಡಿಕೊಟ್ಟಿರುವ ಆರೋಪದಿಂದ ಎಸ್.ಎಂ. ಕೃಷ್ಣ ಅವರನ್ನು ಕಳೆದ ತಿಂಗಳು ಹೈಕೋರ್ಟ್ ಮುಕ್ತಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT