ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಡಿಸ್ಕೊಥೆಕ್ ಮೇಲೆ ದಾಳಿ: ನಾಲ್ವರ ಬಂಧನ

Last Updated 6 ಜುಲೈ 2013, 20:19 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸೇಂಟ್‌ಮಾರ್ಕ್ಸ್ ರಸ್ತೆಯಲ್ಲಿರುವ `ಒಎಂಜಿ' ಬಾರ್ ಮತ್ತು ರೆಸ್ಟೋರೆಂಟ್‌ನ ಮೇಲೆ ಶನಿವಾರ ಮಧ್ಯಾಹ್ನ ದಾಳಿ ನಡೆಸಿದ ಕಬ್ಬನ್‌ಪಾರ್ಕ್ ಪೊಲೀಸರು ಪರವಾನಗಿ ಪಡೆಯದೆ ಡಿಸ್ಕೊಥೆಕ್ ನಡೆಸುತ್ತಿದ್ದ ಆರೋಪದ ಮೇಲೆ ಬಾರ್‌ನ ಮಾಲೀಕ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಬಾರ್‌ನ ಮಾಲೀಕ ರವೀಂದ್ರ (36), ವ್ಯವಸ್ಥಾಪಕ ಸುಜಯ್ (32), ಕ್ಯಾಷಿಯರ್ ಹರೀಶ್ (28) ಮತ್ತು ಕಾರ್ಯಕ್ರಮ ವ್ಯವಸ್ಥಾಪಕ ದೀಪು (31) ಬಂಧಿತರು. ಬಾರ್‌ನಲ್ಲಿದ್ದ ಸಂಗೀತದ ಪರಿಕರಗಳು ಹಾಗೂ ರೂ 24 ಸಾವಿರ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

`ರವೀಂದ್ರ ಅವರು ಪರವಾನಗಿ ಪಡೆಯದೆ ಕಾನೂನು ಬಾಹಿರವಾಗಿ ಡಿಸ್ಕೊಥೆಕ್ ನಡೆಸುತ್ತಿದ್ದರು' ಎಂದು ಕೇಂದ್ರ ವಿಭಾಗದ ಡಿಸಿಪಿ ಬಿ.ಆರ್.ರವಿಕಾಂತೇಗೌಡ `ಪ್ರಜಾವಾಣಿ'ಗೆ ತಿಳಿಸಿದರು.

ಸೇಂಟ್‌ಮಾರ್ಕ್ಸ್ ರಸ್ತೆಯಲ್ಲಿ ಗಸ್ತಿನಲ್ಲಿದ್ದ ಠಾಣೆಯ ಕಾನ್‌ಸ್ಟೆಬಲ್ ಕುಮಾರಸ್ವಾಮಿ ಅವರು ಒಎಂಜಿ ಬಾರ್‌ನ ಒಳ ಭಾಗದಿಂದ ಸಂಗೀತದ ಶಬ್ದ ಕೇಳಿ ಬರುತ್ತಿದ್ದನ್ನು ಗಮನಿಸಿ ಒಳ ಹೋಗಿ ನೋಡಿದಾಗ ಯುವತಿಯರು ಅರೆಬರೆ ಬಟ್ಟೆ ತೊಟ್ಟು ನೃತ್ಯ ಮಾಡುತ್ತಿದ್ದದ್ದು ಗೊತ್ತಾಗಿದೆ. ಈ ಬಗ್ಗೆ ಕುಮಾರಸ್ವಾಮಿ ಅವರು ಠಾಣೆಗೆ ಮಾಹಿತಿ ನೀಡಿದರು. ಬಳಿಕ ಬಾರ್‌ನ ಮೇಲೆ ದಾಳಿ ನಡೆಸಲಾಯಿತು. ದಾಳಿ ವೇಳೆ 200ಕ್ಕೂ ಹೆಚ್ಚು ಯುವಕ ಯುವತಿಯರು ಬಾರ್‌ನಲ್ಲಿದ್ದರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ನರ್ತಿಸುವುದು (ಐಪಿಸಿ-294), ಸಾರ್ವಜನಿಕ ಮನರಂಜನಾ ಸ್ಥಳದಲ್ಲಿ ಮದ್ಯಪಾನಕ್ಕೆ ಮತ್ತು ಅನುಚಿತ ವರ್ತನೆಗೆ ಅವಕಾಶ ನೀಡಿದ ಆರೋಪ (ಕರ್ನಾಟಕ ಪೊಲೀಸ್ ಕಾಯ್ದೆಯ 102ನೇ ಸೆಕ್ಷನ್), ಸಾರ್ವಜನಿಕ ಮನರಂಜನಾ ಸ್ಥಳಗಳ ಪರವಾನಗಿ ನಿಯಮ ಉಲ್ಲಂಘಿಸಿ ನೃತ್ಯ ಮತ್ತು ಸಂಗೀತಗೋಷ್ಠಿ ಆಯೋಜಿಸಿದ ಆರೋಪದಡಿ (ಕರ್ನಾಟಕ ಪೊಲೀಸ್ ಕಾಯ್ದೆಯ 103ನೇ ಸೆಕ್ಷನ್) ಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಾಲಿಕೆ ಸದಸ್ಯೆಯ ಪತಿ ಹೆಸರಲ್ಲಿ ಪರವಾನಗಿ
`ಬಿಬಿಎಂಪಿಯ ಈಜಿಪುರ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಸರೋಜಾ ಅವರ ಪತಿ ಪುಟ್ಟವೀರಯ್ಯ ಅವರು ಒಎಂಜಿ ಬಾರ್ ಮತ್ತು ರೆಸ್ಟೋರೆಂಟ್‌ಗೆ ಪರವಾನಗಿ ಪಡೆದುಕೊಂಡಿದ್ದರು. ಆರೋಪಿ ರವೀಂದ್ರ, ಪುಟ್ಟವೀರಯ್ಯ ಅವರಿಗೆ ರೂ 35 ಲಕ್ಷ ಹಣ ಕೊಟ್ಟು ಮೂರು ವರ್ಷದ ಅವಧಿಗೆ ಭೋಗ್ಯಕ್ಕೆ ಪಡೆದುಕೊಂಡು ಈ ದಂಧೆ ನಡೆಸುತ್ತಿದ್ದ' ಎಂದು ಉನ್ನತ ಪೊಲೀಸ್ ಮೂಲಗಳು ಹೇಳಿವೆ.

ಬಾರ್‌ಗೆ ಪರವಾನಗಿ ಪಡೆದಿದ್ದ ಪುಟ್ಟವೀರಯ್ಯ, ರವೀಂದ್ರನಿಗೆ ವಹಿವಾಟು ನಡೆಸಲು ಅವಕಾಶ ಮಾಡಿಕೊಟ್ಟಿರುವುದರಿಂದ ಅವರು ಪರವಾನಗಿ ನಿಯಮ ಉಲ್ಲಂಘಿಸಿದಂತಾಗಿದೆ. ಆದ್ದರಿಂದ ಪುಟ್ಟವೀರಯ್ಯ ಅವರ ಪರವಾನಗಿ ರದ್ದುಪಡಿಸುವಂತೆ ಅಬಕಾರಿ ಇಲಾಖೆಗೆ ಪತ್ರ ಬರೆಯಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾಹಿತಿ ಇರಲಿಲ್ಲ
`ಬಾರ್ ಮತ್ತು ರೆಸ್ಟೋರೆಂಟ್‌ನ ವಹಿವಾಟನ್ನು ರವೀಂದ್ರನಿಗೆ ಮೂರು ತಿಂಗಳ ಹಿಂದೆ ಭೋಗ್ಯಕ್ಕೆ ವಹಿಸಿಕೊಟ್ಟಿದ್ದೆ. ಆತ ಬಾರ್‌ನಲ್ಲಿ ನಡೆಸುತ್ತಿದ್ದ ಅಕ್ರಮ ಚಟುವಟಿಕೆಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಅಲ್ಲದೇ, ಆತ ಒಪ್ಪಂದದ ಪ್ರಕಾರ ಭೋಗ್ಯದ ಹಣ ಸಹ ಕೊಟ್ಟಿರಲ್ಲಿಲ್ಲ' ಎಂದು ಪುಟ್ಟವೀರಯ್ಯ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT