ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ನಡೆದಿಲ್ಲ - ಶ್ರೀ ಸತ್ಯಸಾಯಿ ಟ್ರಸ್ಟ್ ಸ್ಪಷ್ಟನೆ

Last Updated 28 ಜೂನ್ 2011, 19:30 IST
ಅಕ್ಷರ ಗಾತ್ರ

ಪುಟ್ಟಪರ್ತಿ: ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ತನ್ನ ಮೇಲಿನ ಎಲ್ಲ ಆರೋಪಗಳನ್ನೂ  ಶ್ರೀ ಸತ್ಯಸಾಯಿ ಕೇಂದ್ರ   ಟ್ರಸ್ಟ್ ಮಂಗಳವಾರ ಸಾರಾಸಗಟಾಗಿ ತಳ್ಳಿಹಾಕಿದೆ.

ಟ್ರಸ್ಟ್‌ನ ಎಲ್ಲ ವ್ಯವಹಾರಗಳು ಪಾರದರ್ಶಕವಾಗಿಯೇ ನಡೆದುಕೊಂಡು ಬರುತ್ತಿವೆ. ಆದ ಕಾರಣ ಟ್ರಸ್ಟ್‌ನ ಮೇಲೆ ನಿಗಾ ಇಡಲು ಆಂಧ್ರ ಸರ್ಕಾರವು ಸಮಿತಿಯೊಂದನ್ನು ರಚಿಸುವ ಅಗತ್ಯವೇ ಇಲ್ಲ. ಟ್ರಸ್ಟ್‌ನ ಆಸ್ತಿ ಸಾಯಿಬಾಬಾ ಅವರಿಗೆ ಸೇರಿರದ ಕಾರಣ ಅವರು ಯಾವುದೇ `ಉಯಿಲು~ ಬರೆದಿಲ್ಲ ಎಂದು ಟ್ರಸ್ಟಿ ಶ್ರೀನಿವಾಸನ್ ಹಾಗೂ ಕಾನೂನು ಸಲಹೆಗಾರ ಎಸ್.ನಾಗಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

`ಈ ವಿಷಯದಲ್ಲಿ ಸಾರ್ವಜನಿಕರ ಆತಂಕ ದೂರ ಮಾಡುವ ಸಲುವಾಗಿ ಟ್ರಸ್ಟ್‌ನ ಕಾರ್ಯಚಟುವಟಿಕೆಗಳು ಹಾಗೂ ಆಸ್ತಿ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ವಿವರ ವರದಿಯೊಂದನ್ನು ಪ್ರಕಟಿಸಲಾಗುತ್ತದೆ. ನಾವು ಯಾವುದಕ್ಕೂ ಹೆದರುತ್ತಿಲ್ಲ. ಸರ್ಕಾರದ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿಯೇ ಉತ್ತರಿಸುತ್ತೇವೆ~ ಎಂದು ಶ್ರೀನಿವಾಸನ್ ಸ್ಪಷ್ಟಪಡಿಸಿದರು.

ಪುಟ್ಟಪರ್ತಿ ಆಶ್ರಮಕ್ಕೆ ಸೇರಿದ್ದು ಎನ್ನಲಾದ 35 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಹಣವನ್ನು ಇತ್ತೀಚೆಗೆ ವಾಹನವೊಂದರಿಂದ ವಶಪಡಿಸಿಕೊಂಡ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ, `ಸತ್ಯಸಾಯಿ ಬಾಬಾ ಸ್ಮಾರಕ `ಮಹಾಸಮಾಧಿ~ ನಿರ್ಮಾಣಕ್ಕೆ ಟ್ರಸ್ಟ್ ಸಮಾಲೋಚಕರೊಬ್ಬರನ್ನು ನೇಮಿಸಿತ್ತು.
 
ಈ ಯೋಜನೆಗಾಗಿ ಭಕ್ತರೊಬ್ಬರು ನೀಡಿದ್ದ ಹಣವನ್ನು ಬೆಂಗಳೂರು ಮೂಲದ ಶಂಕರನಾರಾಯಣ ಕನ್ಸಲ್‌ಟೆನ್ಸಿ ಪ್ರೈವೇಟ್ ಲಿಮಿಟೆಡ್‌ಗೆ ಇದೇ ತಿಂಗಳ 18ರಂದು ಹಸ್ತಾಂತರಿಸಲಾಗಿದೆ.
 
ಅದನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಮಾರ್ಗದಲ್ಲಿ ಕನ್ಸಲ್‌ಟೆನ್ಸಿಗೆ ಸೇರಿದ ವಾಹನವನ್ನು ತಡೆದು ಪೊಲೀಸರು ಹಣವನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೂ ಟ್ರಸ್ಟ್‌ಗೂ ಸಂಬಂಧವಿಲ್ಲ. ಯಾವುದೇ ಟ್ರಸ್ಟಿಯ ಬಳಿ ಈ ಹಣ ಪತ್ತೆಯಾಗಿಲ್ಲ. ಇಷ್ಟಕ್ಕೂ ಹಣ ಪತ್ತೆಯಾದ ವಾಹನವು ಟ್ರಸ್ಟ್‌ಗೆ ಸೇರಿದ್ದಲ್ಲ~ ಎಂದರು.

`ಟ್ರಸ್ಟ್‌ಗೆ ಭಕ್ತಾದಿಗಳು ನೀಡಿದ ಹಣವನ್ನು ಪಾರದರ್ಶಕ ರೀತಿಯಲ್ಲಿ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿದೆ. ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ಒತ್ತಡ ಬರದಿದ್ದರೂ ಈಗಾಗಲೇ ಟ್ರಸ್ಟ್ 9.75 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿದೆ~ ಎಂದು ವಿವರಿಸಿದರು.

`ಟ್ರಸ್ಟ್  ಸದಸ್ಯರ ವಿಶ್ವಾಸಾರ್ಹತೆ ಬಗ್ಗೆ ಯಾವುದೇ ಅನುಮಾನಕ್ಕೆ ಅವಕಾಶವಿಲ್ಲ~ ಎಂದು ಸಮರ್ಥಿಸಿಕೊಂಡ ಕಾನೂನು ಸಲಹೆಗಾರ ನಾಗಾನಂದ, ಆಸ್ಪತ್ರೆ ನಿರ್ದೇಶಕ ಸಫಾಯ ರಾಜೀನಾಮೆ ಕುರಿತಂತೆ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದರು.

`ಬಾಬಾ ಬದುಕಿದ್ದಾಗಲೇ, 80 ವರ್ಷದ  ಸಫಾಯ ರಾಜೀನಾಮೆಗೆ ಮುಂದಾಗಿದ್ದರು. ಆದರೆ ಬಾಬಾ ಮನವಿ ಮೇರೆಗೆ ಅವರು ಮುಂದುವರಿಯಬೇಕಾಯಿತು~ ಎಂದು ವಿವರಿಸಿದರು.

`ಟ್ರಸ್ಟ್ ನಡೆಸುತ್ತಿರುವ ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯವು ಐಎಂಎ ಹಾಗೂ ಯುಜಿಸಿ ನಿಯಮಾವಳಿಗೆ ಬದ್ಧವಾಗಿವೆ. ನಾವು ಉಪನ್ಯಾಸಕರಿಗೆ ಯುಜಿಸಿ ಪ್ರಕಾರವೇ ವೇತನ ನೀಡುತ್ತಿದ್ದೇವೆ. ಅಲ್ಲದೇ ಇಲ್ಲಿನ ಬಹುತೇಕ ವೈದ್ಯರು ಹಾಗೂ ಶಿಕ್ಷಕರು ಸ್ವ ಇಚ್ಛೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ~ ಎಂದು ಹೇಳಿದರು.

ಆಶ್ರಮದ ಮೂಲಗಳ ಪ್ರಕಾರ ಸುಮಾರು 46,000 ಸ್ವಯಂಸೇವಕರು ಇಲ್ಲಿ ವಿವಿಧ ವಿಭಾಗಗಳಲ್ಲಿ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟ್ರಸ್ಟ್ ನಿರಂತರವಾಗಿ ಆರ್‌ಬಿಐ, ಕೇಂದ್ರ ಹಣಕಾಸು ಸಚಿವಾಲಯ, ಆಂಧ್ರ ಸರ್ಕಾರಕ್ಕೆ ವರದಿಗಳನ್ನು ಸಲ್ಲಿಸುತ್ತಾ ಬಂದಿದೆ ಎಂದೂ ನಾಗಾನಂದ ವಿವರಿಸಿದರು.

ರಾಜ್ಯಪಾಲರಿಗೆ ಮಾಹಿತಿ: ಈ ನಡುವೆ, ಆಂಧ್ರ ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಅವರು, ಹಣ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಸತ್ಯಸಾಯಿ ಟ್ರಸ್ಟ್ ಮೇಲೆ ತೆಗೆದುಕೊಂಡ ಕ್ರಮಗಳ  ಬಗ್ಗೆ ರಾಜ್ಯಪಾಲ ಇ.ಎಸ್. ಎಲ್. ನರಸಿಂಹಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
 
ಆಡಳಿತ ನಿರ್ವಹಣೆ ಹಾಗೂ ಹಣಕಾಸು ವ್ಯವಹಾರದ ಬಗ್ಗೆ ವಿವರ ಮಾಹಿತಿ ಕೇಳಿ ಟ್ರಸ್ಟ್‌ನ ಕಾರ್ಯದರ್ಶಿಗೆ ಸರ್ಕಾರ ಬರೆದ ಪತ್ರದ ಬಗ್ಗೆ ರೆಡ್ಡಿ, ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT