ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ನಿರ್ಮಾಣ ತೆರವಿಗೆ ಒತ್ತಾಯ

Last Updated 11 ಆಗಸ್ಟ್ 2011, 8:40 IST
ಅಕ್ಷರ ಗಾತ್ರ

ತಿಪಟೂರು: ನಗರದಲ್ಲಿ ಅನುಮತಿ ಉಲ್ಲಂಘಿಸಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳಿಗೆ ತಡೆ ಹಾಕಬೇಕು ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಕೆಲ ಸದಸ್ಯರು ಒತ್ತಾಯಿಸಿದರು.

ಅಧ್ಯಕ್ಷೆ ಸರಸ್ವತಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಬಿ.ಎಚ್. ರಸ್ತೆ ವಿಸ್ತರಣೆ ಸಂದರ್ಭ ಕೈಗೊಂಡ ಕಟ್ಟಡ ತೆರವು ಕ್ರಮ ನ್ಯಾಯನಿಷ್ಠುರವಾಗಿಲ್ಲ ಎಂದು ಸದಸ್ಯರಾದ ಎಂ.ನಾಗರಾಜು ಮತ್ತು ಬಾಗೇಪಲ್ಲಿ ನಟರಾಜು ಆಕ್ಷೇಪ ವ್ಯಕ್ತಪಡಿಸಿದರು.

ಈ ವಿಷಯ ಚರ್ಚೆಗೆ ಬಂದಾಗ ಬಿ.ಎಚ್.ರಸ್ತೆ ಆಸುಪಾಸು ಸೇರಿದಂತೆ ಕೆಲವೆಡೆ ಅನುಮತಿ ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿದ್ದರೂ; ನಗರಸಭೆ ಆಡಳಿತ ಮೌನವಾಗಿದೆ ಎಂಬ ದೂರು ಕೇಳಿಬಂತು.

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪಕ್ಕ ಹಾಸ್ಟೆಲ್‌ಗೆಂದು ಅನುಮತಿ ಪಡೆದು ಕಲ್ಯಾಣ ಮಂಟಪ ನಿರ್ಮಿಸುತ್ತಿದ್ದರೂ ನಗರಸಭೆ ಗಮನಹರಿಸಿಲ್ಲ ಎಂದು ಮಾಜಿ ಅಧ್ಯಕ್ಷ ಎಂ.ಆರ್.ದಿನೇಶ್‌ಕುಮಾರ್ ದೂರಿದರು. ಅಂತಹ ಕಟ್ಟಡಗಳಿಗೆ ಪೌರಾಯುಕ್ತರು ಅಧಿಕಾರ ಬಳಸಿ ತಡೆ ಹಾಕಬೇಕು ಎಂದು ಒತ್ತಾಯಿಸಿದರು.

ನಗರಸಭೆ ಸಭೆಯಲ್ಲಿ ಸದಸ್ಯರು ನಿರ್ಣಯ ಕೈಗೊಂಡು ತಮ್ಮಂದಿಗೆ ಸಹಕರಿಸುವುದಾದರೆ ಅಂತಹ ನಿರ್ಮಾಣ ತೆರವುಗೊಳಿಸಲು ಮುಂದಾಗುವುದಾಗಿ ಎಂದು ಪೌರಾಯುಕ್ತ ಡಾ. ವೆಂಕಟೇಶಯ್ಯ ಸ್ಪಷ್ಟಪಡಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ನಿಗದಿತವಾಗಿ ಸಭೆ ನಡೆಸದೆ ಅಧ್ಯಕ್ಷರು ಸದಸ್ಯರನ್ನು ನಿರ್ಲಕ್ಷ್ಯಿಸಿದ್ದಾರೆ ಎಂದು ಇಸ್ಮಾಯಿಲ್, ಎಂ.ನಾಗರಾಜು ಮತ್ತು ಬಾಗೇಪಲ್ಲಿ ನಟರಾಜು ತಕರಾರು ತೆಗೆದರು.

ಕಳೆದ ಸಭೆಯ ನಡವಳಿಕೆಗಳನ್ನು ಸ್ಥಿರೀಕರಿಸುವ ವಿಷಯ ಚರ್ಚೆಗೆ ಬಂದಾಗ, ಕಳೆದ ವಿಶೇಷ ಸಭೆಯ ಒಂದು ವಿಷಯದ ನಿರ್ಣಯವನ್ನು ತಿರುಚಿ ನಮೂದಿಸಲಾಗಿದೆ ಎಂದು ಸದಸ್ಯ ಎಂ. ನಾಗರಾಜು ತಕರಾರು ಎತ್ತಿದರು. ಈ ವಿಷಯದಲ್ಲಿ ಉಪಾಧ್ಯಕ್ಷ ಮಂಜುನಾಥ್ ಮತ್ತು ನಾಗರಾಜು ನಡುವೆ ಮಾತಿನ ಚಕಮಕಿ ನಡೆಯಿತು.

ನಗರಕ್ಕೆ ಸರಬರಾಜಾಗುವ ಕುಡಿವ ನೀರನ್ನು ಸರಿಯಾಗಿ ಶುದ್ಧೀಕರಿಸುತ್ತಿಲ್ಲ. ಕೆಟ್ಟ ನೀರು ಮನೆಗಳಿಗೆ ಪೂರೈಕೆಯಾಗುತ್ತಿದ್ದು, ನಾಗರಿಕರು ಪ್ರಶ್ನಿಸುತ್ತಿದ್ದಾರೆಂದು ಸದಸ್ಯೆ ಹೂರ್‌ಭಾನು ದೂರಿದರು. ಇದಕ್ಕೆ ಶ್ರಿನಿವಾಸ್ ಮತ್ತಿತರರ ಸದಸ್ಯರು ದನಿಗೂಡಿಸಿದರು.
 

ಗಾಂಧಿನಗರ ಸೇರಿದಂತೆ ನಗರದ ಕೆಲವೆಡೆ ನಾಲ್ಕು ತಿಂಗಳಿಂದ ಕುಡಿಯುವ ನೀರಿನ ಪಂಪ್, ಬೀದಿ ದೀಪ ನಿರ್ವಹಣೆ ಸರಿಯಾಗಿಲ್ಲ ಎಂದು ಇಸ್ಮಾಯಿಲ್ ಆಕ್ಷೇಪಿಸಿದರು. ಹೆದ್ದಾರಿ ವಿಸ್ತರಣೆಗೆ ಸಂಬಂಧಿಸಿ ನಗರದೊಳಗಿನ ವಿದ್ಯುತ್ ಕಂಬ ಸ್ಥಳಾಂತರಿಸಲು ಅಧ್ಯಕ್ಷರ ಅಪ್ಪಣೆ ಮೇರೆಗೆ ಐದು ಲಕ್ಷ ರೂಪಾಯಿಯನ್ನು ಬೆಸ್ಕಾಂಗೆ ಪಾವತಿಸಿರುವ ಬಗ್ಗೆ ಆಡಳಿತ ಪಕ್ಷದ ಸದಸ್ಯ ಎಂ.ಆರ್.ದಿನೇಶ್‌ಕುಮಾರ್ ಆಕ್ಷೇಪ ಎತ್ತಿದರು.
ಉಪಾಧ್ಯಕ್ಷ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಜಶೇಖರ್ ಸಭೆಯಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT