ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಬಂಧನ: ವಕೀಲನಿಗೆ ಜಾಮೀನು ನಕಾರ

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಹಣಕ್ಕಾಗಿ ಪೀಡಿಸಿ ವೃದ್ಧ ಮಹಿಳೆಯೊಬ್ಬರನ್ನು 18 ತಿಂಗಳುಗಳ ಕಾಲ ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡಿರುವ ಆರೋಪ ಹೊತ್ತ ವಕೀಲರೊಬ್ಬರಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ಬುಧವಾರ ನಿರಾಕರಿಸಿದೆ.

ಕಾನೂನು ಸಲಹೆಗಾರರೂ ಆಗಿರುವ ನಗರದ ಎಸ್.ಕೆ.ಪರಮೇಶ್ ಅವರು, ಸುಮಾರು 55 ವರ್ಷದ ಮೀನಾ ಪೈ ಎನ್ನುವವರನ್ನು ಅಕ್ರಮ ಬಂಧನದಲ್ಲಿ ಇರಿಸಿಕೊಂಡು ಹಿಂಸೆ ನೀಡಿರುವ ಆರೋಪ ಎದುರಿಸುತ್ತಿದ್ದಾರೆ.
ಇವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಂಧನ ಭೀತಿಯಿಂದ ಕೋರ್ಟ್ ಮೊರೆ ಹೋಗಿದ್ದರು. ಆದರೆ ಜಾಮೀನಿಗೆ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ನಿರಾಕರಿಸಿದರು.

`ಮೀನಾ ಅವರ ಪತಿ ವಿಜಯ್ ಹಾಗೂ ಪರಮೇಶ್ ಅವರು ಪಾಲುದಾರರಾಗಿ ವ್ಯವಹಾರ ಒಂದರಲ್ಲಿ ತೊಡಗಿದ್ದರು. ಇದರಿಂದ ಮೀನಾ ಅವರ ಮನೆಗೆ ಪರಮೇಶ್ ಅವರು ಹೋಗಿ ಬರುವುದು ಮಾಮೂಲಾಗಿತ್ತು.  ಈ ಹಿನ್ನೆಲೆಯಲ್ಲಿ ಮೀನಾ ಅವರ ಆಸ್ತಿ, ಹಣ ಇತ್ಯಾದಿಗಳ ಬಗ್ಗೆ ಪರಮೇಶ್ ಅವರಿಗೆ ಅರಿವು ಇತ್ತು. ಮೀನಾ ಅವರ ಪತಿ ಅನಾರೋಗ್ಯದಿಂದ 2009ರ ಅಕ್ಟೋಬರ್ ತಿಂಗಳಿನಲ್ಲಿ ಮರಣ ಹೊಂದಿದರು.

ಈ ಸಂದರ್ಭವನ್ನೇ ಬಳಸಿಕೊಂಡ ಪರಮೇಶ್, ಮೀನಾರನ್ನು ಬೆದರಿಸಿ ಅವರ ಬಳಿ ಇದ್ದ ಹಣ ಕಿತ್ತುಕೊಂಡಿದ್ದಾರೆ. ಬ್ಯಾಂಕ್‌ನಲ್ಲಿ ಇರುವ ಹಣಲಪಟಾಯಿಸಲು ಖಾಲಿ ಚೆಕ್‌ಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ವಿಷಯ ಬೇರೆಯವರಿಗೆ ತಿಳಿಸಬಾರದು ಎಂಬ ಕಾರಣಕ್ಕೆ ಅಕ್ರಮ ಬಂಧನದಲ್ಲಿ ಇರಿಸಿ ಹಿಂಸೆ ನೀಡಲಾಗಿದೆ~ ಎನ್ನುವುದು ಆರೋಪ.

`ಪರಮೇಶ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದರೆ ಅವರು ಸಾಕ್ಷ್ಯಾಧಾರನಾಶಪಡಿಸುವ ಸಾಧ್ಯತೆ ಇದ್ದು, ಜಾಮೀನು ನೀಡಬಾರದು~ ಎಂಬ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಎಸ್.ಚಂದ್ರಮೌಳಿ ಅವರ ವಾದ ಮಾನ್ಯ ಮಾಡಿದ ನ್ಯಾಯಮೂರ್ತಿಗಳು ಜಾಮೀನು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT