ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಭೂಸ್ವಾಧೀನ ಯತ್ನ- ದೂರು

Last Updated 5 ಫೆಬ್ರುವರಿ 2011, 6:55 IST
ಅಕ್ಷರ ಗಾತ್ರ

ಮಂಗಳೂರು: ಬಂಟ್ವಾಳ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಿಸುವ ನೆಪದಲ್ಲಿ ಅಕ್ರಮವಾಗಿ ತಮ್ಮ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸಲಾಗುತ್ತಿದೆ ಎಂದು ಬಂಟ್ವಾಳ ತಾಲ್ಲೂಕು ನರಿಕೊಂಬು ಗ್ರಾಮದ ಪಿ.ಎಂ.ಹಾಮದ್ ಬಾವಾ ದೂರಿದ್ದಾರೆ.

ಬಂಟ್ವಾಳ ತಾಲ್ಲೂಕಿನಲ್ಲಿ 85 ಗ್ರಾಮಗಳಿವೆ. ನರಿಕೊಂಬು ಗ್ರಾಮದಲ್ಲಿ ಸರ್ಕಾರಿ ಸ್ಥಳ ಸಾಕಷ್ಟು ಖಾಲಿ ಇದ್ದರೂ, ತಮಗೆ ಮತ್ತು ಕುಟುಂಬಕ್ಕೆ ಸೇರಿದ 4 ಎಕರೆ 72 ಸೆಂಟ್ಸ್ ಸ್ಥಳ ಅಕ್ರಮವಾಗಿ ಸ್ವಾಧೀನ ಪಡಿಸಿಕೊಳ್ಳುವ ಯತ್ನ ನಡೆದಿದೆ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ನಮಗೆ ಸೇರಿದ ಜಮೀನು ‘ಕನ್ವರ್ಷನ್’ ಆಗಿದ್ದರೂ, ಕಮ್ಮಿ ಕ್ರಯಕ್ಕೆ ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಭೂಸ್ವಾಧೀನಕ್ಕೆ ಹೋಗಿದೆ ಎಂಬ ನೆಪ ಹೇಳಿ ಭೂಪರಿವರ್ತನೆ ರದ್ದುಪಡಿಸಿ, ಅಕ್ರಮ ಸ್ವಾಧೀನಕ್ಕೆ ಹೊರಟಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಕೃಷಿ ಮಾರಾಟ ಇಲಾಖೆ, ಕಳೆದ ವರ್ಷದ ಫೆಬ್ರುವರಿ 4ರಂದು ಸರ್ಕಾರಕ್ಕೆ ಪತ್ರ ಬರೆದಿದ್ದು, ಬಂಟ್ವಾಳ ತಾಲ್ಲೂಕು ಎಪಿಎಂಸಿಗೆ ತಾಲ್ಲೂಕಿನಲ್ಲಿ ಸರ್ಕಾರಿ ಭೂಮಿ ಲಭ್ಯವಿದ್ದಲ್ಲಿ ವರದಿ ನೀಡಲು ತಿಳಿಸಿತ್ತು. ಏ. 13ರಂದು ಡಿ.ಸಿ. ಕಚೇರಿಯಿಂದ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಬರೆದ ಪತ್ರದಲ್ಲಿ ನರಿಕೊಂಬು ಗ್ರಾಮದಲ್ಲಿ ಮಾತ್ರ ಸರ್ಕಾರಿ ಭೂಮಿ ಲಭ್ಯವಿಲ್ಲವೆಂದು ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಗೆ ಪತ್ರ ಹೋಗಿತ್ತು. ಆದರೆ ಕಂದಾಯ ಇಲಾಖೆ ಆರ್‌ಟಿಸಿ ಪರಿಶೀಲಿಸಿದಾಗ ನೂರಾರು ಎಕರೆ ಸರ್ಕಾರಿ ಜಮೀನು ನರಿಕೊಂಬು ಹಾಗೂ ಇತರ ಗ್ರಾಮಗಳಲ್ಲಿ ಲಭ್ಯವಿರುವುದು ಗೊತ್ತಾಗಿದೆ ಎಂದು ಅವರು ದಾಖಲೆಗಳನ್ನು ನೀಡಿದರು.

ಈಗಾಗಲೇ ನಾವು ಹೆದ್ದಾರಿ ವಿಸ್ತರಣೆ, ಕೃಷಿ ಕಾರ್ಮಿಕರಿಗಾಗಿ, ದೇವಸ್ಥಾನ, ದೈವಸ್ಥಾನಗಳಿಗೆ ನಮ್ಮ ಕೃಷಿ ಭೂಮಿ ಹೋಗಿದೆ. ಈಗ ಮತ್ತೆ ನಮ್ಮನ್ನೇ ಗುರಿ ಮಾಡಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ನಮ್ಮ ಪಕ್ಕದ ಜಮೀನನ್ನು ರೋಹನ್ ಮೊಂತೆರೊ ಎಂಬುವವರು ಮಂಗಳೂರಿನ ಮೋಟರ್ಸ್‌ ಸಂಸ್ಥೆಗೆ (ಸೆಂಟ್ಸ್ ಒಂದಕ್ಕೆ ರೂ. 1,50,000ದಂತೆ) ಮಾರಿದ್ದಾರೆ. ಆಗ ಯಾರೂ ಆಕ್ಷೇಪಿಸಿಲ್ಲ ಎಂದು ಅವರು ಹೇಳಿದರು.

ದೂರು: ‘ನಮ್ಮ ಗಮನಕ್ಕೆ ತರದೇ ಭೂಮಿಯ ‘ಕನ್ವರ್ಷನ್’ ರದ್ದುಪಡಿಸಿರುವುದನ್ನು ಪ್ರಶ್ನಿಸಿ ನ್ಯಾಯಾಲಯ ಮೊರೆ ಹೋಗಿದ್ದೇನೆ. ಅನ್ಯಾಯವಾಗಿರುವ ಬಗ್ಗೆ ಲೋಕಾಯುಕ್ತಕ್ಕೂ ಅರ್ಜಿ ಸಲ್ಲಿಸಿದ್ದೇನೆ’ ಎಂದು ಹಾಮದ್ ಬಾವಾ ಹೇಳಿದರು.ಅಬೂಬಕ್ಕರ್, ಎಂ.ಯೂಸುಫ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT