ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರ ಸಾಗಾಟ: ತನಿಖಾ ತಂಡದ ಕಾರ್ಯಾರಂಭ

Last Updated 21 ನವೆಂಬರ್ 2011, 8:50 IST
ಅಕ್ಷರ ಗಾತ್ರ

ವಿರಾಜಪೇಟೆ: ಮರ ವ್ಯಾಪಾರಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಶಾಮಿಲಾಗಿ ನಕಲಿ ಪರವಾನಗಿ ಬಳಸಿ ಕೇರಳಕ್ಕೆ ಬೀಟೆ, ಹಲಸು ಹಾಗೂ ನಂದಿ ಮರದ ನಾಟಾಗಳನ್ನು ಅಕ್ರಮವಾಗಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ತನಿಖಾ ತಂಡ ಕಾರ್ಯಾರಂಭ ಮಾಡಿದೆ.

ಕೊಡಗು ಜಿಲ್ಲೆಯ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ದೂರಿನ ಮೇರೆ ಈಚೆಗೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ತನಿಖಾ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ.  ಬಡಗರ ತಲ್ಲಿಚೇರಿ, ಕಣ್ಣಾನೂರಿನ ವಳಪಟ್ಟಣಂ ಸೇರಿದಂತೆ ವಿವಿಧೆಡೆಗಳಿಗೆ ಅಕ್ರಮವಾಗಿ ನಾಟಾ ಸಾಗಣೆಯಾಗುತ್ತಿದೆ ಎನ್ನುವ ದೂರುಗಳ ಬಗ್ಗೆ ಈ ತಂಡ ತನಿಖೆ ನಡೆಸುತ್ತಿದೆ.

ತನಿಖಾ ತಂಡ ರಾಜ್ಯ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ವಿದ್ಯಾ ಸಾಗರ್ ಹಾಗೂ ಅಪರ ಮುಖ್ಯ ಸಂರಕ್ಷಣಾಧಿಕಾರಿ ರಾಜಪ್ಪ ಅವರುಗಳ ಉಸ್ತುವಾರಿಯಲ್ಲಿ  ತಿತಿಮತಿ ಅರಣ್ಯ ಕಚೇರಿ, ತಿತಿಮತಿ ಮರದ ಡಿಪೋ, ಪೊನ್ನಂಪೇಟೆ ವಲಯ ಅರಣ್ಯ ಕಚೇರಿ, ಕುಟ್ಟ ಹಾಗೂ ತೋಲ್ಪಟ್ಟಿಯ ಫಾರೆಸ್ಟ್ ಚೆಕ್ ಪೋಸ್ಟ್, ಮಾಕುಟ್ಟ ಫಾರೆಸ್ಟ್ ಚೆಕ್ ಪೋಸ್ಟ್ ವಿರಾಜಪೇಟೆ ಅರಣ್ಯ ಕಚೇರಿಗಳ ತನಿಖೆ ನಡೆಸಿದೆ.

ಕೊಡಗಿನಲ್ಲಿ ಅಧಿಕಾರಿಗಳ ತಂಡ ತನಿಖೆ ನಡೆಸಿದ ನಂತರ ಕೇರಳಕ್ಕೆ ತೆರಳಿದ ತಂಡ ಮರದ ಮಿಲ್‌ಗಳಲ್ಲಿ ದಾಖಲೆಗಳ ತಪಾಸಣೆ ಮಾಡಿದೆ. ಅಕ್ರಮವಾಗಿ ಮರಗಳನ್ನು ಸಾಗಿಸಿದ ಎರಡು ಲಾರಿಗಳ ನೋಂದಣಿ ಸಂಖ್ಯೆ ಹಾಗೂ ಇಬ್ಬರು ಚಾಲಕರ ವಿಳಾಸವನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿದೆ. ಬೀಟೆ ಮರ ಹಾಗೂ ಹಲಸಿನ ನಾಟಾಗಳು ಅಧಿಕವಾಗಿ ಕೇರಳಕ್ಕೆ ಸಾಗಾಣಿಕೆಯಾಗಿರುವುದು ತಂಡದ ಈಗಿನ ಮೇಲ್ನೋಟದ ತನಿಖೆಯಿಂದ ಗೊತ್ತಾಗಿದೆ.

ತಿತಿಮತಿ ಅರಣ್ಯ ಕಚೇರಿ ಹಾಗೂ ಪೊನ್ನಂಪೇಟೆ ಅರಣ್ಯ ಕಚೇರಿಯಿಂದ ಪಡೆದ ಪರವಾನಗಿಗಳನ್ನು ತಿದ್ದುಪಡಿ ಮಾಡಲಾಗಿದ್ದು, ಈಗ ಸುಮಾರು 120ಕ್ಕೂ ಅಧಿಕ ನಕಲಿ ಪರವಾನಿಗೆ ಪ್ರತಿಗಳನ್ನು ತನಿಖಾ ತಂಡ ವಶಪಡಿಸಿಕೊಂಡಿದೆ. ಇದೇ ರೀತಿಯಲ್ಲಿ ಇನ್ನು ಅನೇಕ ನಕಲಿ ಪರವಾನಿಗೆ ಇರಬಹುದೆಂದು ಇಲಾಖೆ ಶಂಕಿಸಿದೆ.
 
ಪೊನ್ನಂಪೇಟೆ ಪೊಲೀಸರು ಇದೇ ಪ್ರಕರಣದಲ್ಲಿ ಇಬ್ಬರು ಕುಟ್ಟ ಚೆಕ್‌ಪೋಸ್ಟ್‌ನ ಗಾರ್ಡ್‌ಗಳು, ಇಬ್ಬರು ಫಾರೆಸ್ಟರ್‌ಗಳು ಹಾಗೂ ಒಬ್ಬ ವಲಯ ಅರಣ್ಯ ಅಧಿಕಾರಿ, ಇಬ್ಬರು ಲಾರಿ ಚಾಲಕರು ಹಾಗೂ ಐದು ಮಂದಿ ಮರ ವ್ಯಾಪಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ವಿರಾಜಪೇಟೆ ವಿಭಾಗದ ಅರಣ್ಯ ಅಧಿಕಾರಿ ಕಾಂತರಾಜು ಪೊಲೀಸರಿಗೆ 35ದಿನಗಳ ಹಿಂದೆಯೇ ದೂರು ನೀಡಿದ್ದರು.

ಅರಣ್ಯ ಇಲಾಖೆಯ ಮೂಲದ ಪ್ರಕಾರ ತನಿಖಾ ತಂಡ ಈವರೆಗೆ ನಡೆಸಿದ ಶೋಧನೆಯಲ್ಲಿ ಸುಮಾರು ಮೂರುವರೆ ಕೋಟಿಗೂ ಮಿಕ್ಕಿ ಮರದ ನಾಟಾಗಳು ಕೇರಳಕ್ಕೆ ಸಾಗಾಣಿಕೆಯಾಗಿದ್ದು ಪತ್ತೆಯಾಗಿದೆ.

ಪೊನ್ನಂಪೇಟೆಯ ವಲಯ ಅರಣ್ಯ ಅಧಿಕಾರಿಗೆ ಉತ್ತರ ಕನ್ನಡ ಜಿಲ್ಲೆಯ ಸಿರಾಡಿಗೆ ವರ್ಗವಾಗಿದ್ದರೂ ಈ ಪ್ರಕರಣದಲ್ಲಿ ಶಾಮಿಲಾಗಿರುವ ಹಿನ್ನೆಲೆಯಲ್ಲಿ ಅವರನ್ನು ಇಲ್ಲಿನ ಸೇವೆಯಿಂದ ಬಿಡುಗಡೆ ಮಾಡದೆ ಅಮಾನತುಗೊಳಿಸಲಾಗಿದೆ.

ಅಧಿಕಾರಿಗಳು ಪೊನ್ನಂಪೇಟೆ ಅರಣ್ಯ ಕಚೇರಿ ಹಾಗೂ ವಲಯ ಅಧಿಕಾರಿಯ ಮನೆ ಮೇಲೆಯೂ ದಾಳಿ ನಡೆಸಿ ಕೆಲವು ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT