ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳು ಸಾಗಾಟದ ಮೇಲೆ ದಾಳಿ

Last Updated 18 ಏಪ್ರಿಲ್ 2011, 9:05 IST
ಅಕ್ಷರ ಗಾತ್ರ

ರಾಮದುರ್ಗ: ಮಲಪ್ರಭಾ ನದಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮರಳು ಅಡ್ಡೆಗಳ ಮೇಲೆ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರ ದಾಳಿ ನಡೆಸಿ ಅಕ್ರಮ ಮರಳು ಎತ್ತುತ್ತಿದ್ದ ಸುಮಾರು 26 ಯಾಂತ್ರೀಕೃತ ದೋಣಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಶಾಸಕ ಅಶೋಕ ಪಟ್ಟಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಕ್ರಮ ಮರಳು ದಂಧೆಯಲ್ಲಿ ಶಾಸಕ ಅಶೋಕ ಪಟ್ಟಣ ಅವರು ತೆರೆಮರೆಯಲ್ಲಿ ಸಹಾಯ ಮಾಡಿ ಮಾಮೂಲು ತೆಗೆದುಕೊಳ್ಳುತ್ತಿದ್ದಾರೆ ಎಂಬ ದಟ್ಟವಾದ ವದಂತಿಯನ್ನು ಆಧರಿಸಿ ಸಿನಿಮಿಯ ರೀತಿಯಲ್ಲಿ ಶಾಸಕರು ಅಧಿಕಾರಿಗಳನ್ನು ಕರೆದೊಯ್ದು ದಾಳಿ ನಡೆಸಿದರು.
 

ನದಿ ಪಕ್ಕದ ರೈತರಿಗೆ ಅಕ್ರಮ ಮರಳು ದಂಧೆಕೋರರು ತೀವ್ರ ತೊಂದರೆಗಳನ್ನು ನೀಡುತ್ತ ಬೆದರಿಕೆ ಹಾಕುತ್ತಿದ್ದಾರೆ. ಮರಳು ಎತ್ತುವುದರಿಂದ ನದಿ ಪಕ್ಕದ ರೈತರಿಗೆ ಸಾಕಷ್ಟು ಕಷ್ಟಗಳು ಎದುರಾಗುತ್ತಿವೆ. ಆಳವಾಗಿ ಅಗೆದಿರುವ ಗುಂಡಿಗಳಲ್ಲಿ ಮಕ್ಕಳು, ದನಕರುಗಳು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ತಾಲ್ಲೂಕಿನ ಶಾಸಕರು ನಮ್ಮ ಪಕ್ಷದವರು, ತಹಸೀಲ್ದಾರರು ನಮ್ಮ ಜಾತಿಯವರು, ಪೊಲೀಸರು ನಾವು ಹೇಳಿದಂತೆ ಕೇಳುತ್ತಾರೆ. ಬೇಕಾದಲ್ಲಿ ಹೋದರೂ ನಿಮ್ಮ ಬೇಳೆ ಬೇಯಿವುದಿಲ್ಲ. ಬಾಯಿ ಮುಚ್ಚಿಕೊಂಡು ಇರಬೇಕು. ಇಲ್ಲದಿದ್ದರೆ ಜೋಕೆ’ ಎಂದು ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಾಸಕರ ಆಪ್ತರ ಹೆಸರುಗಳನ್ನು ಬಹಿರಂಗ ಪಡಿಸಿದಾಗ ಅಶೋಕ ಪಟ್ಟಣ ಅವರು ತಬ್ಬಿಬ್ಬಾದರು.
 

ರಾಮದುರ್ಗ ತಾಲ್ಲೂಕಿನ ‘ಆಸರೆ’ ಮನೆಗಳ ನಿರ್ಮಾಣಕ್ಕಾಗಿ ಮರಳು ಎತ್ತಲು ಭೂಸೇನಾ ನಿಗಮವು ಪರವಾನಗಿ ನೀಡಿದೆ ಎಂದು ಮರಳು ಸಾಗಾಟಗಾರರೊಬ್ಬರು ಶಾಸಕರಿಗೆ ತಿಳಿಸಿದಾಗ ಮನೆ ನಿರ್ಮಿಸಲು ಮರಳು ಬೇಕೋ ಅಥವಾ ಮರಳು ಮಾರಾಟ ಮಾಡಿ ಮನೆ ನಿರ್ಮಿಸುತ್ತಿರೋ ಗೊತ್ತಾಗುತ್ತಿಲ್ಲ. ಭೂಸೇನಾ ನಿಗಮವು ಮರಳು ಖರೀದಿಸಿ ಮನೆಗಳ ನಿರ್ಮಾಣ ಮಾಡಲಿ ಎಂದು ಪಟ್ಟಣ ಹೇಳಿದರು.
 

ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೇ ಸುಮಾರು 26 ಯಾಂತ್ರೀಕೃತ ದೋಣಿಗಳನ್ನು ಬಳಸಿ ಅಕ್ರಮ ಮರಳು ದಂಧೆ ನಡೆಸಲಾಗುತ್ತಿದೆ. ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಸುಮಾರು 35 ಯಾಂತ್ರೀಕೃತ ದೋಣಿಗಳು ಮರಳು ಎತ್ತುತ್ತಿವೆ. ಅವುಗಳನ್ನು ಶುಕ್ರವಾರದ ವೇಳೆಗೆ ತೆರವುಗೊಳಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ತಲುಪಲಿದೆ ಎಂದು ಶಾಸಕರು ಅಧಿಕಾರಿಗಳಿಗೆ ತಾಕೀತು ಮಾಡಿದರು.
 

ಸ್ಥಳದಿಂದಲೇ ಜಿಲ್ಲಾಧಿಕಾರಿ ಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಶಾಸಕರು, ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ದಂಧೆ ನಿಲ್ಲಿಸುವಂತೆ ಕೋರಿದರು.
 

ಅಕ್ರಮ ಮರಳು ದಂಧೆಕೋರರು ಗ್ರಾಮಸ್ಥರಿಗೆ ಹಣದ ಆಮಿಷವೊಡ್ಡಿ ಇಲ್ಲವೇ ಬೆದರಿಕೆ ಹಾಕಿ ಕಾರ್ಯ ಸಾಧಿಸಿಕೊಳ್ಳುತ್ತಿದ್ದಾರೆ. ಅಕ್ರಮ ಮರಳು ದಂಧೆ ತಡೆಗೆ ಮುಂದಾಗುವ ಗ್ರಾಮಸ್ಥರಿಗೆ ಬೆದರಿಕೆಗಳು ಬಂದರೆ ಪೊಲೀಸರು ಸೂಕ್ತ ರಕ್ಷಣೆ ನೀಡಬೇಕೆಂದು ಶಾಸಕರು ತಿಳಿಸಿದರು.ದಾಳಿಯ ಸಮಯದಲ್ಲಿ ತಹಸೀಲ್ದಾರ ಗೀತಾ ಕೌಲಗಿ, ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ರಮೇಶ ಮತ್ತು ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT