ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳು ಸಾಗಾಣಿಕೆ ತಡೆಗೆ ಆಗ್ರಹ

Last Updated 2 ಅಕ್ಟೋಬರ್ 2012, 8:20 IST
ಅಕ್ಷರ ಗಾತ್ರ

ಚಿತ್ರದುರ್ಗ: ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಚಳ್ಳಕೆರೆ ತಾಲ್ಲೂಕಿನ ವೇದಾವತಿ ನದಿ ತೀರದಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಚಳ್ಳಕೆರೆ ಶಾಖೆಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ರೈತ ಮುಖಂಡ ಕೆ.ಪಿ. ಭೂತಯ್ಯ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ಅವರಿಗೆ ಮನವಿ ಸಲ್ಲಿಸಿದರು.

ಚಳ್ಳಕೆರೆ ತಾಲ್ಲೂಕಿನ ನಾರಾಯಣಪುರ, ತೊರೆಬೀರೇನಹಳ್ಳಿ, ಯಲಘಟ್ಟೆ, ಗೊಲ್ಲರಹಟ್ಟಿ, ಕೋನಿಗರ ಹಳ್ಳಿ, ನಲ್ಲೂರಹಳ್ಳಿ ಗ್ರಾಮಗಳಲ್ಲಿ ನಿರಂತರವಾಗಿ ನೂರಾರು ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಆಗುತ್ತಿದೆ. ವೇದಾವತಿ ನದಿ ಮರಳನ್ನು ತೆಗೆಯದಂತೆ ಹೈಕೋರ್ಟ್ ಆದೇಶ ನೀಡಿದ್ದರೂ ಕೂಡಾ ನಿರಾತಂಕವಾಗಿ ಬೆಂಗಳೂರಿಗೆ ಮರಳು ಸಾಗಾಣಿಕೆಯಾಗುತ್ತಿದೆ ಎಂದು ದೂರಿದರು.

ಬಿಜೆಪಿಯ ಚಳ್ಳಕೆರೆ ತಾಲ್ಲೂಕು ಘಟಕದ ಅಧ್ಯಕ್ಷ ಸೋಮಶೇಖರ್ ಮಂಡಿಮಠ್, ಜಿ.ಪಂ. ಸದಸ್ಯ ಜಯಪಾಲಯ್ಯ, ಮೈಲನಹಳ್ಳಿ ನಾಗಣ್ಣ, ತಿಮ್ಮಣ್ಣ ಇತರರು ಲಾರಿಗಳಲ್ಲಿ ಅಕ್ರಮ ಮರಳು ಸಾಗಾಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದೇಶ ಮತ್ತು ರಾಜ್ಯದ ಪ್ರಾಕೃತಿಕ ಸಂಪತ್ತನ್ನು ರಕ್ಷಣೆ ಮಾಡಬೇಕಾದ ಜನಪ್ರತಿನಿಧಿಗಳೇ ಇಂತಹ ದಂಧೆಯಲ್ಲಿ ತೊಡಗಿರುವುದು ವಿಷಾದನೀಯ. ಜತೆಗೆ ಪೊಲೀಸರು ಇವರಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಅಕ್ರಮ ಗಳಿಕೆಯ ಪಾಲುದಾರರಾಗಿದ್ದಾರೆ. ಟ್ರಾಕ್ಟರ್‌ಗಳಲ್ಲಿ ಸಾಗಾಣೆ ಮಾಡುವ ರೈತರನ್ನು ಹಿಡಿದು ದಂಡ ಹಾಕುವ ಇವರು ಲಾರಿಗಳನ್ನು ಏಕೆ ಹಿಡಿಯುವುದಿಲ್ಲ ಎಂದು ಮನವಿಯಲ್ಲಿ ಪ್ರಶ್ನಿಸಿದ್ದಾರೆ.

ಈ ಸಮಸ್ಯೆಯಿಂದ ನದಿ ತೀರದ ಪ್ರದೇಶದಲ್ಲಿನ ರೈತರ ಪಂಪ್‌ಸೆಟ್ ಕಾರ್ಯಗಳು ನಿಂತಿವೆ. ಇದರಿಂದ ಸಾಲ ಮಾಡಿ ಬೆಳೆ ಬೆಳೆಯುವ ರೈತ ಬೀದಿಪಾಲಾಗುವ ಆತಂಕದಲ್ಲಿದ್ದಾನೆ. ಆದ್ದರಿಂದ ತಕ್ಷಣವೇ ಈ ಬಗ್ಗೆ ಪರಿಶೀಲನೆ ನಡೆಸಿ ಅಕ್ರಮ ನಡೆಸುತ್ತಿರುವವರನ್ನು ಹಿಡಿದು, ಮರಳು ಸಾಗಾಣೆಯಾಗದಂತೆ ಬಿಗಿಯಾದ ಕ್ರಮ ಕೈಗೊಳ್ಳಬೇಕು ಎಂದು ಭೂತಯ್ಯ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಸಂಘದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT