ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮುರಮ್ ಸಾಗಾಟ!

ಶಹಾಪುರ: ವಿಭೂತಿಹಳ್ಳಿ ಅರಣ್ಯ ಪ್ರದೇಶ
Last Updated 17 ಜನವರಿ 2013, 9:48 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನ ವಿಭೂತಿಹಳ್ಳಿ ಗ್ರಾಮದ ಬಳಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಅಕ್ರಮವಾಗಿ ಮುರಮ್ (ಗಡಸು ಮಣ್ಣು) ಸಾಗಾಟ ನಡೆದಿದೆ. ನಿಸರ್ಗದ ಸಂಪತ್ತು ಕೊಳ್ಳೆ ಹೊಡೆಯುತ್ತಿದ್ದರು ಅರಣ್ಯ ಇಲಾಖೆ ಮಾತ್ರ ಜಾಣ ಕಿವುಡತನ ಪ್ರದರ್ಶಿಸುತ್ತಿದೆ ಎಂದು ರಾಷ್ಟ್ರೀಯ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಎದುರುಮನೆ ಆರೋಪಿಸಿದ್ದಾರೆ.

ಗ್ರಾಮಕ್ಕೆ ಹೊಂದಿಕೊಂಡಂತೆ ವಿಶಾಲವಾದ ಅರಣ್ಯ ಜಮೀನು ಇದೆ. ಕೆಲ ಗುತ್ತಿಗೆದಾರರು ರಸ್ತೆ ನಿರ್ಮಾಣಕ್ಕಾಗಿ ಗಡಸು ಆದ ಮರಮು ತೆಗೆದುಕೊಂಡು ತೆರಳುತ್ತಿದ್ದಾರೆ. ದಿನಾಲು ನೂರಾರು ಟಿಪ್ಪರ ಮೂಲಕ ಮರಮು ಸಾಗಾಟ ನಡೆಸಿದ್ದಾರೆ. ಜೆ.ಸಿ.ಬಿ ಮೂಲಕ ಅರಣ್ಯ ಭೂಮಿಯನ್ನು ಕೊರೆದು ನಾಶ ಮಾಡುತ್ತಿದ್ದಾರೆ. ಕಾಯ್ದಿಟ್ಟ ಅರಣ್ಯ ಪ್ರದೇಶವೆಂದು ನಾಮಫಲಕ ಹಾಕಿದ ಪ್ರದೇಶದಲ್ಲಿ ಅಕ್ರಮ ನಡೆದಿದೆ ಎಂದು ಅವರು ದೂರಿದ್ದಾರೆ.
ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಜಮೀನುಗಳಿಗೆ ಒದಗಿಸಲಾದ ಹೊಲಗಾಲುವೆ ಹಾಳಾಗಿವೆ. ಇದರಿಂದ ಕಾಲುವೆ ನೀರು ನಂಬಿ ಬದುಕುತ್ತಿರುವ ರೈತರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಮರಮು ಟಿಪ್ಪರಿನಲ್ಲಿ ತುಂಬಿಕೊಂಡು ಸಾಗುತ್ತಿದ್ದರಿಂದ  ಅದರ ಧೂಳು ಹೊಲದ ಬಿತ್ತನೆ ಮಾಡಿದ ಶೇಂಗಾ ಬೆಳೆಗೆ ಕುತ್ತು ಬಂದಿದೆ. ಇದರಿಂದ ಇಡೀ ಪ್ರದೇಶ ಧೂಳಿನಿಂದ ತುಂಬಿಕೊಂಡಿದ್ದು ಪರಿಸರಕ್ಕೂ ಕುತ್ತು ಬಂದಿದೆ. ಅಕ್ರಮವಾಗಿ ಮರಳು ಸಾಗಾಟದಿಂದ ರೋಷಿ ಹೋಗಿದ್ದ ಜನತೆ ಈಗ ನಿಸರ್ಗದ ಅರಣ್ಯ ಸಂಪತ್ತು ಲೂಟಿ ನಡೆಯುತ್ತಲಿದೆ. ಅರಣ್ಯ ಪ್ರದೇಶಕ್ಕೆ ಕಾಲಿಟ್ಟರೆ ಉದ್ದನೆಯ ತಗ್ಗು ಪ್ರದೇಶ ಹಾಗೂ ಲಕ್ಷಾವಧಿ ಮೌಲ್ಯದ ಮರಮು ಸಾಗಾಟವಾಗಿರುವುದು ಕಣ್ಣಿಗೆ ರಾಚುತ್ತಲಿದೆ. ಪ್ರತ್ಯೇಕವಾದ ಅರಣ್ಯ ಇಲಾಖೆ ಅಧಿಕಾರಿ ನೇರವಾಗಿ ಪ್ರತಿ ಟಿಪ್ಪರಿಗೆ ಇಂತಿಷ್ಟು ಹಫ್ತಾ ವಸೂಲಿ ನಡೆಸಿದ್ದಾರೆ.

ರಾಜ್ಯ ಹೆದ್ದಾರಿಯ ಮೇಲೆ ಅಕ್ರಮವಾಗಿ ಮರಮು ಸಾಗುತ್ತಿದ್ದರು ಕೂಡಾ ಪೊಲೀಸರು ಮಾತ್ರ ಗಾಢ ನಿದ್ದೆಯಲ್ಲಿದ್ದಾರೆ. ನಿರಂತರವಾಗಿ ಅರಣ್ಯ ಸಂಪತ್ತು, ನಿಸರ್ಗದ ಸಂಪತ್ತು ಉಸುಕು  ಲೂಟಿ ನಡೆಯುತ್ತಲಿದೆ. ದಿಟ್ಟ ಕ್ರಮವನ್ನು ತೆಗೆದುಕೊಂಡು ಅದನ್ನು ಮಟ್ಟ ಹಾಕುವ ದಕ್ಷ ಅಧಿಕಾರಿ ತಾಲ್ಲೂಕಿನಲ್ಲಿ ಇಲ್ಲವಾಗಿದೆ. ಸ್ಥಳೀಯ ಪ್ರಭಾವಿ ರಾಜಕೀಯ ಮುಖಂಡರು ನೇರವಾಗಿ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಪ್ರಾಂತ ರೈತ ಸಂಘದ ಕಾರ್ಯದರ್ಶಿ ಸಿದ್ದಯ್ಯ ಹಿರೇಮಠ ಆರೋಪಿಸಿದ್ದಾರೆ.

ಅರಣ್ಯ ಇಲಾಖೆಯ ಉನ್ನತಾಧಿಕಾರಿ ವಿಭೂತಿಹಳ್ಳಿ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಖುದ್ದಾಗಿ ಭೇಟಿ ನೀಡಿ ಅರಣ್ಯ ಸಂಪತ್ತು ಲೂ
ಟಿಗೆ ಅವಕಾಶ ನೀಡಿದ ಭ್ರಷ್ಟ ಅರಣ್ಯ ಅಧಿಕಾರಿಯ ವಿರುದ್ಧ ತಕ್ಷಣ ಕ್ರಮ ತೆಗೆದುಕೊಂಡು ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಸಿದ್ದಯ್ಯ ಪ್ರಾದೇಶಿಕ ಅರಣ್ಯ ಅಧಿಕಾರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT