ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ-ಸಕ್ರಮ ವಿಳಂಬ: ರೈತ ಸಂಘ ಪ್ರತಿಭಟನೆ

Last Updated 28 ಜನವರಿ 2012, 6:35 IST
ಅಕ್ಷರ ಗಾತ್ರ

ಸೊರಬ: ಅಕ್ರಮ ವಿದ್ಯುತ್ ಪಂಪ್‌ಸೆಟ್ ಸಂಪರ್ಕ ಸಕ್ರಮಗೊಳಿಸಲು ಹಣ ಪಾವತಿಸಿ 10 ವರ್ಷ ಕಳೆದರೂ ಸಕ್ರಮ ಪ್ರಕ್ರಿಯೆಗೆ ಮೆಸ್ಕಾಂ ಮುಂದಾಗದೇ ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಕರ್ತರು ಶುಕ್ರವಾರ ಆನವಟ್ಟಿಯಲ್ಲಿ ಪ್ರತಿಭಟನೆ ನಡೆಸಿದರು.

2002ರಿಂದ 10ರ ವರೆಗೆ ನೂರಾರು ರೈತರು ಹಣ ಕಟ್ಟಿದ್ದಾರೆ. ಕುಬಟೂರು ಗ್ರಾಮದ ರೈತರು ಕಳೆದ 4 ವರ್ಷಗಳಿಂದ ಸತತವಾಗಿ ಮನವಿ ಮಾಡುತ್ತಿದ್ದಾರೆ. ಆದರೂ, ಇಲಾಖೆ ಕಾರ್ಯಪ್ರವೃತ್ತ ಆಗಿಲ್ಲ. ಸ್ಥಳೀಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದವರ ಪಟ್ಟಿಯೇ ಸಿಗುತ್ತಿಲ್ಲ. ಈಗ ಪುನಃ ಹೊಸದಾಗಿ ಸಕ್ರಮಕ್ಕೆ ಅರ್ಜಿ ಪಡೆಯುತ್ತಿರುವುದು ಸರ್ಕಾರದ ಹೊಣೆಗೇಡಿತನ ಸೂಚಿಸುತ್ತದೆ ಎಂದರು.

ಕರ್ತವ್ಯಲೋಪ ಎಸಗಿರುವ ಇಲಾಖೆ ತಾಂತ್ರಿಕ ಕಾರಣ ನೀಡುತ್ತಿದೆ. ಆದರೆ, ತಾಂತ್ರಿಕ ಕಾರಣಗಳಿಗೆ ರೈತರು ಹೇಗೆ ಹೊಣೆ ಆಗುತ್ತಾರೆ? ಅವರು ಈ ಹಿಂದೆ ಪಾವತಿಸಿದ ಹಣಕ್ಕೆ ಬೆಲೆಯೇ ಇಲ್ಲವೇ? ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ. ಮಂಜುನಾಥಗೌಡ, ತಾಲ್ಲೂಕು ಅಧ್ಯಕ್ಷ ಬಿ.ವಿ. ಗೌಡ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಇಲಾಖಾ ಅಧಿಕಾರಿಗಳ ಮಧ್ಯೆ ಸ್ಪಂದನೆ ಇಲ್ಲ ಎಂದು ಆರೋಪಿಸಿದ ಅವರು, ಮಾಧ್ಯಮದ ಮೂಲಕವಾದರೂ ಮೇಲಧಿಕಾರಿಗಳು ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು. 
ಸಮೀಪದ ತುಡ್ನೂರು ಗ್ರಾಮದಲ್ಲಿ ರೈತರೊಬ್ಬರ ಜಮೀನಿಗೆ ಅಳವಡಿಸಿರುವ ಪರಿವರ್ತಕ ಆರಂಭದಿಂದಲೂ ಕೆಲಸ ಮಾಡುತ್ತಿಲ್ಲ. ಅವರ ಮನವಿಗೆ ಬೆಲೆ ಸಿಕ್ಕಿಲ್ಲ ಎಂದು ಆರೋಪಿಸಿದರು.

ಸಕ್ರಮಾತಿ ಕುರಿತು ಕಾರ್ಯಪ್ರವೃತ್ತ ಆಗಲು ಫೆ. 4ರವರೆಗೆ ಗಡವು ನೀಡಿ, ತಪ್ಪಿದಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯ ಆಗುತ್ತದೆ ಎಂದು ಎಚ್ಚರಿಸಿದರು. ಉಮೇಶ್ ಪಾಟೀಲ್, ಡಿ. ಶಿವಣ್ಣ, ಈಶ್ವರಪ್ಪ, ಷಫೀಉಲ್ಲಾ, ಮಕ್ಬೂಲ್‌ಸಾಬ್, ಟಿ.ಬಿ. ವೀರಬಸಪ್ಪ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT