ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮವಾಗಿ ಹಣ ವರ್ಗಾವಣೆ : ಐವರು ಆರೋಪಿಗಳ ಸೆರೆ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕ ಪ್ರಜೆಗಳ ಕ್ರೆಡಿಟ್ ಕಾರ್ಡ್‌ಗಳಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ಅಂತರರಾಷ್ಟ್ರೀಯ ಜಾಲವೊಂದನ್ನು ಭೇದಿಸಿರುವ ಸಿಐಡಿ ಪೊಲೀಸರು ಐದು ಮಂದಿಯನ್ನು ಬಂಧಿಸಿ ನಾಲ್ಕು ಕೋಟಿ ರೂಪಾಯಿ ನಗದು ಸೇರಿ ಹದಿಮೂರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ.

ಬೆಂಗಳೂರಿನ ರೆಜಿನಾ ಸೀಲನ್ (53), ವಿಕ್ಟರ್ ಡಿಸೋಜಾ (52), ಕ್ರಿಸ್ಟಿ ಸೋಲೋಮನ್ (43), ಥಾಮಸ್ ಪಿ.ಜೋಸೆಫ್ (40), ಸೆಲ್ವ ಬಾಬು (40) ಬಂಧಿತರು.

ಐಸಿಐಸಿಐ ಬ್ಯಾಂಕ್ ಖಾತೆಯಲ್ಲಿದ್ದ ಎರಡು ಕೋಟಿ  ಹಣವನ್ನು ಪಡೆಯದಂತೆ ತಡೆ ಹಿಡಿಯಲಾಗಿದೆ, ಇನ್ನೊಂದು ಬ್ಯಾಂಕ್ ಖಾತೆಯಲ್ಲಿದ್ದ ಎರಡು ಕೋಟಿ ರೂಪಾಯಿ ಹಣ ಜಪ್ತಿ ಮಾಡಲಾಗಿದೆ. ಒಂಬತ್ತು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ರ ಮತ್ತು ಮೂರು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 995 ವಿವಿಧ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಅವರು ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದರು. 2010ಜುಲೈ 1ರಿಂದ ಆಗಸ್ಟ್ 10ರ ಒಳಗೆ ಅವರು 15.68 ಕೋಟಿ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡಿದ್ದರು ಎಂದು ಸಿಐಡಿ ಡಿಜಿಪಿ ಶಂಕರ ಬಿದರಿ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಪ್ರಕರಣದ ಪ್ರಮುಖ ಆರೋಪಿ ರೆಜಿನಾ. ವೃದ್ಧರು ಮತ್ತು ಅಂಗವಿಕಲರಿಗೆ ಸಹಾಯ ಮಾಡಲು ಎಂದು ಅವರು ಸಾಲ್ವ್ ರೆಜಿನಾ ಚಾರಿಟಬಲ್ ಟ್ರಸ್ಟ್ ಅನ್ನು 2009ರಲ್ಲಿ ಆರಂಭಿಸಿದ್ದರು. ಈ ಟ್ರಸ್ಟ್‌ಗೆ ವಿದೇಶಿ ದೇಣಿಗೆದಾರರಿಂದ ಹಣ ಪಡೆಯಲು ಅವರು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿದ್ದರು. www.srctrust.org ವೆಬ್‌ಸೈಟ್ ಆರಂಭಿಸಿ ಆ ಮೂಲಕ ಹಣ ಪಡೆಯುತ್ತಿದ್ದರು. ಚೆನ್ನೈನಲ್ಲಿ ವಿಕ್ಯೂಬ್ ಟೆಕ್ನಾಲಜೀಸ್ ಎಂಬ ಕಂಪೆನಿ ನಡೆಸುತ್ತಿರುವ ಸೆಲ್ವ ಬಾಬು ಈ ವೆಬ್‌ಸೈಟ್ ವಿನ್ಯಾಸ ಮಾಡಿದ್ದರು ಎಂದರು.

ಮೊದಲು ಅವರು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್ ಮುಖಾಂತರ ಕ್ರೆಡಿಟ್ ಕಾರ್ಡ್‌ನಿಂದ ದೇಣಿಗೆ ಸಂಗ್ರಹಿಸುತ್ತಿದ್ದರು ಎಂದು ಹೇಳಿದರು.

2009ರಲ್ಲಿ ಅವರು ಹದಿನೈದು ಲಕ್ಷ ಸಂಗ್ರಹಿಸಿದ್ದರು. ಆದರೆ ಕಾರಣಾಂತರಗಳಿಂದ  ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್ ಸೇವೆ ಸ್ಥಗಿತಗೊಳಿಸಿತ್ತು, ಆ ನಂತರ ಅವರು ಐಸಿಐಸಿಐ ಬ್ಯಾಂಕ್ ಮುಖಾಂತರ ಟ್ರಸ್ಟ್‌ಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಆದರೆ ಕ್ರೆಡಿಟ್ ಕಾರ್ಡ್‌ದಾರರು ತಮ್ಮ ಖಾತೆಯಿಂದ ಹಣ ವರ್ಗಾವಣೆ ಆಗುತ್ತಿರುವ ಬಗ್ಗೆ ಬ್ಯಾಂಕ್‌ಗೆ ದೂರು ನೀಡಿದ್ದರು. ಬ್ಯಾಂಕ್ ಸಿಬ್ಬಂದಿ ಸಿಐಡಿಗೆ ದೂರು ನೀಡಿದ್ದರು ಎಂದರು.

ಕ್ರೆಡಿಟ್ ಕಾರ್ಡ್‌ಗಳ ಸಂಖ್ಯೆ ಮತ್ತು ಮಾಹಿತಿಯನ್ನು ಇಂಟರ್‌ನೆಟ್‌ನಲ್ಲಿ ಮಾರಾಟ ಮಾಡುವ ಜಾಲವಿದೆ. ಈ ಜಾಲದ ಮುಖಾಂತರ ಆರೋಪಿಗಳು ಕ್ರೆಡಿಟ್ ಕಾರ್ಡ್ ಸಂಖ್ಯೆ ಮತ್ತಿತರ ಮಾಹಿತಿ ಪಡೆದು ಟ್ರಸ್ಟ್‌ಗೆ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಯಾರೇ ವ್ಯಕ್ತಿ ಇಂಟರ್‌ನೆಟ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡರೆ ಆ ಕಂಪ್ಯೂಟರ್‌ನ ಐಪಿ ಅಡ್ರೆಸ್ ದಾಖಲಾಗುತ್ತದೆ. ಆದರೆ ಐಪಿ ಅಡ್ರೆಸ್ ಗೊತ್ತಾಗದಂತೆ ಮಾಡಲು ಇರುವ ಸಾಫ್ಟ್‌ವೇರ್‌ವೊಂದನ್ನು ಅವರು ಬಳಸುತ್ತಿದ್ದರು. ಅದನ್ನು ಅವರು ಡಿಡಿಡಿ.ಜಿಛಿಞಜಿ.್ಚಟಞ ಮೂಲಕ ಪಡೆದುಕೊಂಡಿದ್ದರು ಎಂದು ಬಿದರಿ ಮಾಹಿತಿ ನೀಡಿದರು.

ರೆಜಿನಾ ಸೀಲನ್ ಎಸ್ಸೆಸ್ಸೆಲ್ಸಿ ವರೆಗೆ ಮಾತ್ರ ಓದಿದ್ದಾರೆ. ಸುಮಾರು ಹದಿನೈದು ವರ್ಷಗಳಿಂದ ಅವರು ಟ್ರಸ್ಟ್ ವ್ಯವಹಾರ ನಡೆಸುತ್ತಿದ್ದರು. ಉಳಿದ ಆರೋಪಿಗಳ ಜತೆ ಸೇರಿ ಬಾರಿ ವಂಚನೆ ನಡೆಸುತ್ತಿದ್ದರು ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ. ಡಿವೈಎಸ್ಪಿ ಟಿ.ವಿ. ಪ್ರಭಾಕರ್, ಇನ್‌ಸ್ಪೆಕ್ಟರ್ ಶರತ್, ತಂತ್ರಜ್ಞ ಮಲ್ಲಿಕಾರ್ಜುನ್, ಕಾನ್‌ಸ್ಟೇಬಲ್ ಎಸ್. ರಮೇಶ್ ಅವರ ತಂಡ ಪ್ರಕರಣವನ್ನು ಪತ್ತೆ ಮಾಡಿದೆ. ಸಿಐಡಿ ಎಡಿಜಿಪಿ ಪ್ರೇಮ್‌ಶಂಕರ ಮೀನಾ, ಡಿಐಜಿ ಮುರುಗನ್, ಎಸ್ಪಿ ಡಾ. ಬಿ.ಎ. ಮಹೇಶ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT