ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ಜಾತ್ರೆ; ಆಗಲಿಲ್ಲ ಅಕ್ಷಯ ಪಾತ್ರೆ

Last Updated 5 ಫೆಬ್ರುವರಿ 2011, 16:30 IST
ಅಕ್ಷರ ಗಾತ್ರ

ಬೆಂಗಳೂರು: ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿರುವ ಅಕ್ಷರ ಪ್ರೇಮಿಗಳ ಹೊಟ್ಟೆಯ ಹಸಿವು ತಣಿಸಲು ತೆರೆಯಲಾಗಿರುವ ಊಟದ ಕೌಂಟರ್‌ಗಳಲ್ಲಿ ಶುಕ್ರವಾರ ಕಂಡುಬಂದಂತೆಯೇ ಶನಿವಾರವೂ ಗೊಂದಲದ ಸನ್ನಿವೇಶಗಳು ಮುಂದುವರೆದಿತ್ತು.

ಉದಯಭಾನು ಕಲಾ ಸಂಘದ ಮೈದಾನದಲ್ಲಿ ಶನಿವಾರ ಪ್ರತಿನಿಧಿ ಪಾಸ್ ಹೊಂದಿರುವವರಿಗೆ ಮಾತ್ರ ಊಟಕ್ಕೆ ಪ್ರವೇಶ ನೀಡಲಾಗುತ್ತಿತ್ತು. ಇದರಿಂದ ಊಟದ ಕೌಂಟರ್‌ಗಳಲ್ಲಿ ಶುಕ್ರವಾರ ಕಂಡುಬಂದಷ್ಟು ಜನಸಂದಣಿ ಕಂಡುಬರಲಿಲ್ಲ. ಆದರೆ ಪಾಸ್ ಇಲ್ಲದೆ ಬಂದವರನ್ನು ಮೈದಾನದ ಹೊರಗಡೆಯೇ ತಡೆದು ನಿಲ್ಲಿಸಲಾದ ಕಾರಣ ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನಜಂಗುಳಿ ಕಂಡುಬಂದಿತ್ತು.

ಪಾಸ್ ಇರದವರಿಗೂ ಊಟ ಮಾಡಲು ಅವಕಾಶ ಮಾಡಿಕೊಟ್ಟ ಕಾರಣ ಉದಯಭಾನು ಕಲಾಸಂಘದ ಮೈದಾನದಲ್ಲಿ ಶುಕ್ರವಾರ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಖರ್ಚಾಗಿದೆ. ‘20 ಸಾವಿರ ಮಂದಿಗೆ ಊಟಕ್ಕೆ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಆದರೆ ಶುಕ್ರವಾರ ಇಲ್ಲಿ ಊಟ ಮಾಡಿದವರು ಸುಮಾರು 36 ಸಾವಿರ ಮಂದಿ’ ಎಂದು ಅಲ್ಲಿ ಊಟದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವವರು ತಿಳಿಸಿದರು.

ಇದೇ ಪರಿಸ್ಥಿತಿ ಉಳಿದ ಊಟದ ಕೌಂಟರ್‌ಗಳಲ್ಲೂ ಶುಕ್ರವಾರ ಕಂಡುಬಂದಿತ್ತು ಎಂದು ಅವರು ತಿಳಿಸಿದರು.ಪಾಸ್ ಇಲ್ಲದೆಯೇ ಕೌಂಟರ್ ಪ್ರವೇಶಿಸಿದ ವ್ಯಕ್ತಿಯೊಬ್ಬರನ್ನು ಪೊಲೀಸರು ತಡೆದು ಹೊರಗೆ ಕಳಿಸಲು ಅನುವಾದಾಗ ಆ ವ್ಯಕ್ತಿ, ‘ನಾನೊಬ್ಬ ಊಟ ಮಾಡಿದರೆ ಇಲ್ಲಿ ಅನ್ನ ಖರ್ಚಾಗಿ ಹೋಗುತ್ತಾ’ ಎಂದು ಪೊಲೀಸರನ್ನೇ ದಬಾಯಿಸುತ್ತಿದ್ದ ಸನ್ನಿವೇಶವೂ ಕಂಡುಬಂದಿತು.

ಪಾಸ್ ಇದ್ದವರಿಗೆ ಮಾತ್ರ: ಶನಿವಾರ ಈ ಅವ್ಯವಸ್ಥೆಯನ್ನು ಸರಿಪಡಿಸಿ ಕೇವಲ ಪಾಸ್ ಇದ್ದವರಿಗೆ ಮಾತ್ರ ಊಟ ಎಂದು ಬಿಗಿಯಾದ ಕ್ರಮ ತೆಗೆದುಕೊಂಡ ಕಾರಣ ಊಟದ ಕೌಂಟರ್‌ಗಳಲ್ಲಿ ಜನರ ದಟ್ಟಣೆ ಹೆಚ್ಚಿರಲಿಲ್ಲ.ಇದೇ ಸನ್ನಿವೇಶ ಕೋಟೆ ಪ್ರೌಢ ಶಾಲೆಯ ಮೈದಾನದಲ್ಲಿರುವ ಊಟದ ಕೌಂಟರ್‌ನಲ್ಲೂ ಕಂಡುಬಂತು. ಕೆಲವೆಡೆ ಸ್ವಯಂಸೇವಕರೇ ಇರಲಿಲ್ಲ ಎಂದು ಕೆಲವು ಪ್ರತಿನಿಧಿಗಳು ದೂರಿದರು.

ಮಧ್ಯಾಹ್ನ 1.50ರ ನಂತರ ಅಲ್ಲಿ ಎಲ್ಲಿರಗೂ ಊಟ ಮಾಡುವ ಅವಕಾಶ ನೀಡಿದ ಕಾರಣ ಮೈದಾನದ ಹೊರಗೆ ಸ್ವಲ್ಪ ಮಟ್ಟಿಗಿನ ನೂಕುನುಗ್ಗಲು ಉಂಟಾಗಿತ್ತು.

ಪಾಸ್ ಇರದವರಿಗೂ ಊಟ ಮಾಲು ಅವಕಾಶ ಮಾಡಿಕೊಟ್ಟ ಕಾರಣದ ಬಗ್ಗೆ ಪ್ರಶ್ನಿಸಿದಾಗ, ಬಿಬಿಎಂಪಿಯ ಯಡಿಯೂರು ವಾರ್ಡ್‌ನ ಅಧ್ಯಕ್ಷ ಅಶೋಕದಾಸ್ ಅವರು, ‘ಬೆಳಿಗ್ಗೆಯಿಂದ ಕೇವಲ ಪ್ರತಿನಿಧಿಗಳಿಗೆ ಮಾತ್ರ ಊಟ ಮಾಡಲು ಅವಕಾಶ ಮಾಡಿಕೊಟ್ಟಿದ್ದೆವು. ಈಗ ಪ್ರತಿನಿಧಿಗಳಿಗೆಲ್ಲ ಊಟ ಆಗಿದೆ. ಹಾಗಾಗಿ ಪಾಸ್ ಇಲ್ಲದವರನ್ನೂ ಊಟ ಮಾಡಲು ಬಿಟ್ಟಿದ್ದೇವೆ’ ಎಂದರು.

ಮಹಿಳಾ ಸಮಾಜದ ಕೌಂಟರ್‌ನಲ್ಲಿ ಗೊಂದಲ: ಸಮ್ಮೇಳನ ನಡೆಯುತ್ತಿರುವ ಪ್ರಧಾನ ವೇದಿಕೆಯ ಸನಿಹದಲ್ಲೇ ಇರುವ ಮಹಿಳಾ ಸಮಾಜದ ಊಟದ ಕೌಂಟರ್‌ಅನ್ನು ಗಣ್ಯರಿಗೆ ಮತ್ತು ವಿಶೇಷ ಆಹ್ವಾನಿತರಿಗೆ ಮೀಸಲಿಡಲಾಗಿತ್ತು.

ಆದರೆ ಶನಿವಾರ ಇಲ್ಲಿ ಗಣ್ಯರನ್ನು ಮಾತ್ರವಲ್ಲದೆ ಸಾಮಾನ್ಯ ಪ್ರತಿನಿಧಿಗಳಿಗೂ ಊಟ ಮಾಡಲು ಅವಕಾಶ ಮಾಡಿಕೊಟ್ಟ ಕಾರಣ ತೀವ್ರ ಗೊಂದಲ ಸೃಷ್ಟಿಯಾಗಿತ್ತು. ನಿರೀಕ್ಷೆಗೂ ಮೀರಿ ಊಟ ಖಾಲಿಯಾದ ಕಾರಣ ಅನೇಕ ಮಂದಿ ಊಟ ಸಿಗದೆ ಪರದಾಡಿದರು.

ಕೆಲವರಿಗೆ ಅನ್ನ ಸಿಕ್ಕರೆ, ಸಾರು ಸಿಗಲಿಲ್ಲ. ಇನ್ನು ಕೆಲವರಿಗೆ ಸಿಹಿ ಸಿಗಲಿಲ್ಲ. ಅನ್ನವನ್ನು ನೆಲದ ಮೇಲೆ ಚೆಲ್ಲಿದ ದೃಶ್ಯವೂ ಇಲ್ಲಿ ಕಂಡುಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT