ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ಜಾತ್ರೆಗೆ ಜಾನಪದ ರಂಗು

Last Updated 14 ಫೆಬ್ರುವರಿ 2012, 9:55 IST
ಅಕ್ಷರ ಗಾತ್ರ

ಹೊಳೆನರಸೀಪುರ: ಪಟ್ಟಣದಲ್ಲಿ ಸಂತೆಯ ದಿನವಾದ ಸೋಮವಾರ ಅಕ್ಷರ ಜಾತ್ರೆಯೇ ನಡೆಯಿತು. ಎಲ್ಲಿ ನೋಡಿದರಲ್ಲಿ ಕನ್ನಡ ಬಾವುಟ, ಸಮ್ಮೇಳನಕ್ಕೆ ಶುಭ ಕೋರುವ ದೊಡ್ಡ ದೊಡ್ಡ ಫ್ಲೆಕ್ಸ್‌ಗಳು.
 
ತಳಿರು ತೋರಣಗಳಿಂದ ಸಿಂಗರಿಸಿದ ರಸ್ತೆಗಳು. ಸಾಹಿತ್ಯ ಸಮ್ಮೇಳನದ ಬಗ್ಗೆ ಅರಿವಿಲ್ಲದ ಗ್ರಾಮೀಣ ಭಾಗದ ಜನರು ಇದೇನು ಜಾತ್ರೆಯೇ ಎನ್ನುವಂತಹ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ದೊಡ್ಡ ದೊಡ್ಡ ಗೊಂಬೆ ಕುಣಿತ, ಡೊಳ್ಳುಕುಣಿತ, ಪೂಜಾ ಕುಣಿತ, ಕರಡಿ ವಾದ್ಯ, ಕನ್ನಡ ನಾಡಿನ ಹಿರಿಮೆ ಸಾರುವ ಸ್ತಬ್ಧ ಚಿತ್ರಗಳು, ಅಲಂಕೃತ ಮಂಟಪದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ.
 
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಗಣ್ಯರು, ಹಿರಿ-ಕಿರಿಯ ಅಧಿಕಾರಿಗಳು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಜತೆಗೆ ಸ್ವಯಂ ಪ್ರೇರಿತರಾಗಿ ಬಂದ ಸಾರ್ವಜನಿಕರು. ಎಲ್ಲರೂ ಸೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ನಡೆಯಿತು.

ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ 3ನೇ ತಾಲ್ಲೂಕು ಕನ್ನಡ ಸಮ್ಮೇಳನಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಾಷ್ಟ್ರ ಧ್ಜಜಾರೋಹಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉದಯರವಿ ಕನ್ನಡ ದ್ವಜ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ವೆಂಕಟಸ್ವಾಮಿ ಕನ್ನಡ ಧ್ವಜಾರೋಹಣ ನಡೆಸಿದ ನಂತರ ಗೌಡರು, ವೇದಿಕೆಯಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡ ಕಾರ್ಯ ಕ್ರಮಗಳು ನಡೆಯಬೇಕು.
 

ನಮ್ಮ ಕ್ಷೇತ್ರದಲ್ಲಿ ಸಮ್ಮೇಳನ ನಡೆಯುತ್ತಿರುವುದು ನನಗೆ ಹೆಮ್ಮೆಯ ವಿಷಯ. ಇಲ್ಲೂ ಜನರು ಸಮ್ಮೇಳನ ನಡೆಸುವಷ್ಟು ಜಾಗೃತರಾಗಿದ್ದಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ ಎಂದರು.
ಡಾ.ಕೆ.ಸಿ. ಮರಿಯಪ್ಪ ಅವರನ್ನು ಸಮ್ಮೇಳನಾಧ್ಯ ಕ್ಷರನ್ನಾಗಿ ಮಾಡಿರುವುದು ಸಂತಸದ ವಿಷಯ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೆಂಕಟಸ್ವಾಮಿ ಅವರು ನನಗೆ ಚಿರಪರಿಚಿತರು.
 
ಇಂತಹ ಕಾರ್ಯಕ್ರಮ ಪಕ್ಷಾತೀತವಾಗಿರಬೇಕು. ಇಲ್ಲಿ ಹಾಡುವ ನಾಡಗೀತೆ, ರೈತಗೀತೆ ನಾಡಿನ ಶ್ರೀಮಂತಿಕೆ ನೆನಪಿಸಿ ಮನಸ್ಸಿಗೆ ಮುದ ನೀಡುತ್ತವೆ ಎಂದು ಹೇಳಿದರು. `ನಮ್ಮ ಜಿಲ್ಲೆಯವರೇ ಆದ ನಲ್ಲೂರು ಪ್ರಸಾದ್ ಅವರು ರಾಜ್ಯಾಧ್ಯಕ್ಷರಾಗಿ ಉತ್ತಮ ಕೆಲಸಮಾಡಿದ್ದಾರೆ ಎಂದು ಪ್ರಶಂಸಿದರು.

ಸಮ್ಮೇಳನದ ನೆನಪಿಗಾಗಿ ಪ್ರೊ. ಎಂ.ಬಿ. ಇರ್ಷಾದ್ ಸಂಪಾದಕತ್ವದಲ್ಲಿ ಮೂಡಿಬಂದಿರುವ `ಹೇಮಸಂಪದ~ ಸಂಚಿಕೆಯನ್ನು ಶಾಸಕ ಎಚ್.ಡಿ. ರೇವಣ್ಣ ಬಿಡುಗಡೆ ಮಾಡಿದರು. ತಾಲ್ಲೂಕು ಭಾರತ ಜ್ಞಾನ ವಿಜ್ಞಾನ ಸಮಿತಿಯವರು ಹಾಡಿದ ನಾಡಗೀತೆ, ರೈತ ಗೀತೆ, ಕನ್ನಡ ಗೀತೆಗಳು, ಸರ್ಕಾರಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ನಡೆಸಿ ಸ್ವಾಗತ ನೃತ್ಯ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT