ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ಜಾತ್ರೆಗೆ ಸಜ್ಜಾಗಿದೆ ಕೃಷ್ಣಗಿರಿ

Last Updated 25 ಫೆಬ್ರುವರಿ 2011, 19:15 IST
ಅಕ್ಷರ ಗಾತ್ರ

ಕುಷ್ಟಗಿ: ಕನ್ನಡದ ಸಾಂಸ್ಕೃತಿಕ ಪರಂಪರೆಯ ನೆಲೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶನಿವಾರದಿಂದ ಎರಡು ದಿನಗಳವರೆಗೆ ನಡೆಯಲಿರುವ ಕೊಪ್ಪಳ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪಟ್ಟಣ ಸಜ್ಜಾಗಿದೆ.

ಟೆಂಗುಂಟಿ ರಸ್ತೆಯಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮೈದಾನದಲ್ಲಿ ಸಮ್ಮೇಳನಕ್ಕಾಗಿ ನಿರ್ಮಿಸಿರುವ ಭವ್ಯ ಸಭಾಂಗಣಕ್ಕೆ ಕಲಾವಿದರು ಅಂತಿಮ ಸ್ಪರ್ಶ ನೀಡುತ್ತಿದ್ದುದನ್ನು ಶುಕ್ರವಾರ ಸಂಜೆ ರಾಜ್ಯ ಕಸಾಪ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರ ಪ್ರಸಾದ್ ಪರಿಶೀಲನೆ ನಡೆಸಿದರು.

ಬೆಳಿಗ್ಗೆ 8.30ಕ್ಕೆ ಸಮ್ಮೇಳನಾಂಗಣದ ಬಳಿ ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮೂಲಕ ಅಕ್ಷರ ಜಾತ್ರೆಗೆ ಚಾಲನೆ ದೊರೆಯಲಿದೆ. ಜನಪದ, ಇತರೆ ಸಾಂಪ್ರದಾಯಕ ಕಲಾವೈಭವದೊಂದಿಗೆ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ಬೆಳಿಗ್ಗೆ 9 ಗಂಟೆಗೆ ಆರಂಭಗೊಳ್ಳಲಿದ್ದು ಸಮ್ಮೇಳನಾಧ್ಯಕ್ಷ ಡಾ.ಬಸವರಾಜ ಸಬರದ  ಮಾತ್ರ ಅಲಂಕೃತ ವಾಹನ ಏರದೇ ಇತರರೊಂದಿಗೆ ಮೆರವಣಿಗೆ ಮುಂದೆ ಹೆಜ್ಜೆ ಹಾಕಲು ನಿರ್ಧರಿಸಿರುವುದು ವಿಶೇಷ.

ಪೂಜ್ಯ ಡಾ.ಚಂದ್ರಶೇಖರ ಸ್ವಾಮೀಜಿ ಹೆಸರಿನ ಸಮ್ಮೇಳನ ಮಂಟಪ, ಡಾ.ದೇವೇಂದ್ರಕುಮಾರ ಹಕಾರಿ ಹೆಸರಿನ ವೇದಿಕೆಗಳನ್ನು ನಿರ್ಮಿಸಲಾಗಿದ್ದು ಪೂಜ್ಯ ದೊಡ್ಡಬಸವಾಚಾರ್ಯ ಸ್ವಾಮೀಜಿ,  ಡಾ.ಪುಟ್ಟರಾಜ ಗವಾಯಿ, ಭಾರತರತ್ನ ಭೀಮಸೇನ ಜೋಷಿ, ಎಂ.ಪಿ.ಪ್ರಕಾಶ್ ಹಾಗೂ ಹನುಮಂತರಾವ ಬಂಡಿ ಅವರುಗಳ ಹೆಸರಿನ ಪಂಚ ಮಹಾದ್ವಾರಗಳು ಸಮ್ಮೇಳನಕ್ಕೆ ಬರುವವರನ್ನು ಸ್ವಾಗತಿಸುತ್ತಿವೆ.

ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಬೆಳಿಗ್ಗೆ 11 ಗಂಟೆಗೆ ಸಮ್ಮೇಳನದ ಉದ್ಘಾಟನೆ ನೆರವೇರಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಪಂಚಾಕ್ಷರಿ ಹಿರೇಮಠ ಅವರ ನುಡಿನಮನದ ನಂತರ ಸಮ್ಮೇಳನಾಧ್ಯಕ್ಷ ಡಾ.ಬಸವರಾಜ ಸಬರದ ಭಾಷಣ ಮಾಡುವರು.

ಸಮ್ಮೇಳನದ ಸಂದರ್ಭದಲ್ಲಿ ಪುಸ್ತಕ ಮಾರಾಟಕ್ಕಾಗಿಯೇ 19 ಮಳಿಗೆಗಳನ್ನು ತೆರೆಯಲಾಗಿದೆ. ಅತಿಥಿಗಳ ಹಸಿವು ತಣಿಸಲು ಭಾಣಸಿಗರು ವಿವಿಧ ತಿಂಡಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಆಧುನಿಕ ವ್ಯವಸ್ಥೆಯುಳ್ಳ ಮಾಧ್ಯಮ ಕೇಂದ್ರ ತೆರೆಯಲಾಗಿದೆ. ಸದ್ಯ ಆಗಿರುವ ತಯಾರಿ ಗಮನಿಸಿದರೆ ಪಟ್ಟಣದಲ್ಲಿ ಬೇರೆ ಸ್ಥಳದಲ್ಲಿ ಇಷ್ಟೊಂದು ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸುವುದು ಸಾಧ್ಯವಾಗುತ್ತಿರಲಿಲ್ಲ ಎನಿಸುತ್ತದೆ. ಆದರೆ ಸಮ್ಮೇಳನದ ಜಾಗ ದೂರ ಎಂಬ ಜನರ ಆರೋಪದಿಂದ ದೂರ ಉಳಿಯುವ ನಿಟ್ಟಿನಲ್ಲಿ ಸಂಘಟಕರು ಸಾಕಷ್ಟು ಮುಂಜಾಗ್ರತೆ ವಹಿಸಿರುವುದು ಕಂಡುಬಂದಿದೆ. ಬಸ್‌ನಿಲ್ದಾಣ ಮತ್ತಿತರೆ ಕಡೆಗಳಿಂದ ಜನರನ್ನು ಕರೆದೊಯ್ಯಲು ಖಾಸಗಿ ಹಾಗೂ ಸಾರಿಗೆ ಸಂಸ್ಥೆ ಬಸ್‌ಗಳನ್ನು ಸಜ್ಜುಗೊಳಿಸಲಾಗಿದೆ.

ದಿನಕ್ಕೆ ನಾಲ್ಕರಂತೆ ಎಂಟು ಗೋಷ್ಠಿಗಳನ್ನು ಇಟ್ಟುಕೊಳ್ಳಲಾಗಿದ್ದು ಜಿಲ್ಲೆಯ ಸಂಸ್ಕೃತಿ ಮತ್ತು ಸಾಮಾಜಿಕ ಸ್ಥಿತಿಗತಿ ವಿಷಯ ಸೇರಿದಂತೆ ನಾಡಿನ ನೆಲ, ಜಲ, ಸಾಹಿತ್ಯ, ಸಾಮಾಜಿಕ, ರಾಜಕೀಯ, ಕೃಷಿ, ಸಮೂಹ ಮಾಧ್ಯಮ, ಸಾಂಸ್ಕೃತಿಕ ಪರಂಪರೆ, ಸವಾಲುಗಳ ಮೇಲೆ ಬೆಳಕು ಚೆಲ್ಲುವ ವಿಷಯಗಳನ್ನು ಆಯ್ಕೆ ಮಾಡಲಾಗಿದೆ. ರಾತ್ರಿ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಈ ಹೊತ್ತಿನಲ್ಲಿ ವೇದಿಕೆ ಭರ್ತಿಯಾಗುವಷ್ಟು ಜನ ಅಲ್ಲಿ ಉಳಿಯಲಿಕ್ಕಿಲ್ಲ ಎಂಬ ಅನುಮಾನವೂ ವ್ಯಕ್ತವಾಗಿದೆ.

ಸಮ್ಮೆಳನದ ಅಂಗವಾಗಿ ಬಂದೋಬಸ್ತ್ ವ್ಯವಸ್ಥೆಗೆ ಪರಸ್ಥಳದಿಂದ ಸುಮಾರು ಐದು ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಸಿದ್ಧರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT