ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ಜಾತ್ರೆಯಲ್ಲಿ ಕುಬುಸದ ಖಣ ಉಡುಗೊರೆ

Last Updated 6 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ವಿಜಾಪುರ: ರಂಗುರಂಗಿನ ಗುಳೇದಗುಡ್ಡ ಖ್ಯಾತಿಯ ಕುಬುಸದ ಖಣ. ಅರಿಸಿನ-ಕುಂಕುಮ, ತಾಯಿ ಬೇರು, ಅಡಿಕೆ-ಧಾನ್ಯ ಒಳಗೊಂಡ ಉಡಿ ತುಂಬುವ ಸಾಮಗ್ರಿ. ಮುಡಿಯಲೊಂದು ಕೆಂಗುಲಾಬಿ...

ಇದು ಯಾವುದೋ ಸೀಮಂತ ಕಾರ್ಯಕ್ರಮದ ಸಾಮಗ್ರಿಗಳ ಪಟ್ಟಿ ಅಲ್ಲ. ವಿಜಾಪುರದ ಅಕ್ಷರ ಜಾತ್ರೆಗೆ  ಆಗಮಿಸಲಿರುವ ಮಹಿಳಾ ಪ್ರತಿನಿಧಿಗಳಿಗೆ ದೊರೆಯಲಿರುವ ಉಡುಗೊರೆ!

ಚೀನಾ ಯುದ್ಧದ ನಂತರ ದೇಶದ ಆರ್ಥಿಕ ಸುಭದ್ರತೆಗಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಚಿನ್ನದಲ್ಲಿ ತೂಗಿದ್ದರು ಈ `ಬರದ' ನಾಡಿನ ಜನ. ಈಗ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಲಿರುವ ಮಹಿಳಾ ಪ್ರತಿನಿಧಿಗಳಿಗೂ ವಿಶೇಷ ಆತಿಥ್ಯ ಒದಗಿಸಲು ಸಮಿತಿಯವರು ಮುಂದಾಗಿದ್ದಾರೆ.

`ಸಾಹಿತ್ಯ ಸಮ್ಮೇಳನ ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಇದರಲ್ಲಿ ಪಾಲ್ಗೊಳ್ಳಲಿರುವ ನೋಂದಾಯಿತ ಪ್ರತಿನಿಧಿಗಳಿಗೆ ತಮ್ಮ ತವರಿಗೆ ಬಂದ ಅನುಭವ ಆಗಬೇಕು. ಇಲ್ಲಿ ಇರುವಷ್ಟು ದಿನ ಅವರು ಖುಷಿಯಾಗಿರಬೇಕು. ಅದಕ್ಕಾಗಿಯೇ ಅವರಿಗೆ ಈ ಸಾಂಪ್ರದಾಯಿಕ ಸ್ವಾಗತ' ಎನ್ನುತ್ತಾರೆ ಸಮ್ಮೇಳನದ ಮಹಿಳಾ ಸಮಿತಿಯ ಅಧ್ಯಕ್ಷೆ, ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ.ಮೀನಾ ಚಂದಾವರಕರ.

`ರೂ 250 ಶುಲ್ಕ ಸಂದಾಯ ಮಾಡಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ ಮಹಿಳಾ ಪ್ರತಿನಿಧಿಗಳಿಗೆ ಈ ಉಡುಗೊರೆ ನೀಡಲಾಗುವುದು. 700 ಜನ ಮಹಿಳಾ ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ತಲಾ  ರೂ 100 ದರದಂತೆ ಗುಣಮಟ್ಟದ ಗುಳೇದಗುಡ್ಡದ ಕುಬುಸದ 750 ಖಣ ಖರೀದಿಸಿದ್ದೇವೆ.  ಹೊಸ ವಿನ್ಯಾಸ-ವಿಭಿನ್ನ ಬಣ್ಣಗಳ ಈ ಖಣಗಳು ಒಂದು ಮೀಟರ್ ಅಳತೆ ಹೊಂದಿವೆ. ಬೇರೆ ಬಟ್ಟೆ ತೇಪೆ ಹಚ್ಚುವ ತೊಂದರೆ ಇಲ್ಲ. ಎಷ್ಟೇ ದೃಢಕಾಯದವರಿದ್ದರೂ ಅವರು ಕುಬುಸ ಹೊಲಿಸಿಕೊಂಡು ತೊಟ್ಟುಕೊಳ್ಳಬಹುದು' ಎಂದು ನಕ್ಕರು ಅವರು.

ರಂಗೋಲಿ: `ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಸಾಗಲಿರುವ ಮಾರ್ಗದಲ್ಲಿ, ಸಮ್ಮೇಳನ ನಡೆಯಲಿರುವ ಸೈನಿಕ ಶಾಲೆಯ ದ್ವಾರಗಳಲ್ಲಿ, ಪ್ರಧಾನ ವೇದಿಕೆಯ ಮುಂಭಾಗದಲ್ಲಿ ರಂಗೋಲಿ ಬಿಡಿಸಲು ನಿರ್ಧರಿಸಲಾಗಿದೆ. 

ಮಹಿಳಾ ಸಮಿತಿಯವರು 700 ಕೆ.ಜಿ. ರಂಗೋಲಿ, ಬಣ್ಣ ತರಿಸಿಟ್ಟುಕೊಂಡಿದ್ದಾರೆ' ಎಂಬುದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ, ಸಮ್ಮೇಳನದ ವೇದಿಕೆ ಅಲಂಕಾರ ಸಮಿತಿ ಅಧ್ಯಕ್ಷೆ ಗಂಗೂಬಾಯಿ ಮಾನಕರ ಅವರ ವಿವರಣೆ.

`ಮಹಿಳಾ ವಿವಿಯ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು, ನಗರದ ಮಹಿಳಾ ಹಾಗೂ ಸ್ವಯಂ ಸೇವಾ ಸಂಸ್ಥೆಗಳವರು ಸೇರಿ ಇದೇ 9ರಂದು ಬೆಳಿಗ್ಗೆ 5ರಿಂದ 8ರ ವರೆಗೆ ಈ ರಂಗೋಲಿ ಬಿಡಿಸಲಿದ್ದಾರೆ. ಇದಲ್ಲದೇ ಸೋಲಾಪುರದ 16 ಜನ ರಂಗೋಲಿ ಪರಿಣತರು ಇಲ್ಲಿಯ ಪ್ರಮುಖ ವೃತ್ತಗಳಲ್ಲಿ ಬೃಹತ್ ರಂಗೋಲಿ ಬಿಡಿಸಲಿದ್ದಾರೆ' ಎಂದು ಮಾನಕರ ಹೇಳಿದರು.

`ಮಹಿಳಾ ಪ್ರತಿನಿಧಿಗಳಿಗೆ ಅಗತ್ಯ ಮಾಹಿತಿ ನೀಡಿ ಅವರಿಗೆ ಸಹಾಯ ಮಾಡಲು ಮಹಿಳಾ ಸ್ವಯಂ ಸೇವಕಿಯರು ಮುಂದೆ ಬಂದಿದ್ದಾರೆ. ಕುಬುಸದ ಖಣ ಸೇರಿದಂತೆ ಉಡಿ ತುಂಬುವ ಸಾಮಗ್ರಿಗಳನ್ನು ನೋಂದಣಿ ಕೇಂದ್ರದಲ್ಲಿಯೇ ಅವರಿಗೆ ವಿತರಿಸುತ್ತೇವೆ. ಈ ನೋಂದಣಿ ಕೇಂದ್ರದ ನಿರ್ವಹಣೆಗೆ ಉಜ್ವಲ ಸ್ವಯಂ ಸೇವಾ ಸಂಸ್ಥೆಯ ಮಲ್ಲಮ್ಮ ಯಾಳವಾರ ಮುಂದೆ ಬಂದಿದ್ದಾರೆ' ಎನ್ನುತ್ತಾರೆ ತಹಶೀಲ್ದಾರ ರಾಜಶ್ರೀ ಜೈನಾಪುರ.

ಮಹಿಳಾ ವಿ.ವಿ ಆತಿಥ್ಯ: `ಸಮ್ಮೇಳನದ ಮಹಿಳಾ ಪ್ರತಿನಿಧಿಗಳ ವಾಸ್ತವ್ಯಕ್ಕಾಗಿ ಮಹಿಳಾ ವಿವಿಯ ತೊರವಿ ಆವರಣದಲ್ಲಿರುವ 300 ಹಾಸಿಗೆ ಸಾಮರ್ಥ್ಯದ ವಿದ್ಯಾರ್ಥಿನಿಯರ ವಸತಿ ನಿಲಯ ಹಾಗೂ ಜಿಲ್ಲಾಧಿಕಾರಿಗಳ ನಿವಾಸದ ಪಕ್ಕದಲ್ಲಿರುವ ಆದಿಲ್‌ಶಾಹಿ ವಸತಿ ನಿಲಯದಲ್ಲಿ 50 ಜನರಿಗೆ ಅವಕಾಶ ಕಲ್ಪಿಸಿದ್ದೇವೆ. ಅವರ ಸಂಚಾರಕ್ಕೆ ವಿವಿಯ ಎರಡು ಬಸ್ ವ್ಯವಸ್ಥೆ ಮಾಡಿದ್ದು, ಸ್ನಾನಕ್ಕೆ ಬಿಸಿ ನೀರು- 24 ಗಂಟೆಗಳ ಕಾಲವೂ ನೀರಿನ ವ್ಯವಸ್ಥೆ ಕಲ್ಪಿಸಿದ್ದೇವೆ' ಎಂದು ಕುಲಪತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT