ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ದಾಸೋಹ: ಸಿಲಿಂಡರ್ ನಾಪತ್ತೆ

Last Updated 16 ಫೆಬ್ರುವರಿ 2013, 10:09 IST
ಅಕ್ಷರ ಗಾತ್ರ

ದೇವದುರ್ಗ: ಅಕ್ಷರ ದಾಸೋಹ ಯೋಜನೆಯ ಮಧ್ಯಾಹ್ನದ ಬಿಸಿ ಊಟ ತಯಾರಿಕೆಗಾಗಿ ಸರ್ಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಸರ್ಕಾರಿ ಶಾಲೆಗಳಿಗೆ ಅಡುಗೆ ಅನಿಲ ನೀಡಲಾಗಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೆಲವು ಶಾಲೆಗಳಲ್ಲಿ ಅಡುಗೆ ಅನಿಲ ನಾಪತ್ತೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಬೆಳಗಾದರೆ ಕಟ್ಟಿಗೆ ಒಲೆ ಮೇಲೆ ಅಡುಗೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊಗೆ ರಹಿತ ಅಡುಗೆ ಯೋಜನೆ ಅಡಿಯಲ್ಲಿ ಸರ್ಕಾರ ಅಕ್ಷರ ದಾಸೋಹ ಯೋಜನೆಯಲ್ಲಿ ಕಟ್ಟೆಗೆ ಒಲೆಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಅಡುಗೆ ಅನಿಲ ಮತ್ತು ಒಲೆಗಳನ್ನು ನೀಡುವ ಜೊತೆಗೆ ಅದರ ನಿರ್ವಹಣೆಯನ್ನು ಸಂಬಂಧಿಸಿದ ಮುಖ್ಯ ಅಡುಗೆದಾರರಿಗೆ ಮತ್ತು ಎಸ್‌ಡಿಎಂಸಿಗೆ ವಹಿಸಿಕೊಡಲಾಗಿದೆ.

ವಿಶೇಷ: ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮದಿಂದಲೇ ಕಳೆದ ಹತ್ತು ವರ್ಷದ ಹಿಂದೆ ಯೋಜನೆ  ರಾಜ್ಯದಲ್ಲಿ ಜಾರಿಗೊಂಡಿರುವುದು ವಿಶೇಷ. ಶಾಲೆಗಳಲ್ಲಿನ ಮಕ್ಕಳ ದಾಖಲಾತಿಗೆ ತಕ್ಕಂತೆ ಅಡುಗೆ ಅನಿಲ ಮತ್ತು ಒಲೆ ನೀಡಲು ಇಲಾಖೆಯ ನಿರ್ದೇಶನದಂತೆ ಬಹುತೇಕ ಶಾಲೆಗಳಿಗೆ ವಿತರಣೆ ಮಾಡಲಾಗಿದ್ದರೂ ಕೆಲವು ಶಾಲೆಗಳಲ್ಲಿ ಅಡುಗೆ ಅನಿಲ ಮತ್ತು ಒಲೆ ನಾಪತ್ತೆಯಾಗಿರುವುದು ಕಂಡು ಬಂದಿದೆ. ನಾಪತ್ತೆಯಾದ ಅಡುಗೆ ಅನಿಲ ಸಂಬಂಧಿಸಿದ ಶಾಲೆಯ ಮುಖ್ಯಗುರು ಅಥವಾ ಎಸ್‌ಡಿಎಂಸಿ ಪದಾಧಿಕಾರಿಗಳ ಮನೆಯಲ್ಲಿ ಇರುವುದು ಶಂಕೆ ವ್ಯಕ್ತವಾಗಿದೆ.

ಬಿಸಿ ಊಟದ ಅಡುಗೆಯಲ್ಲಿ ಮಕ್ಕಳಲ್ಲಿ ಪೌಷ್ಟಿಕ ಅಂಶವನ್ನು ಹೆಚ್ಚಿಸಲು ತರಕಾರಿ ಸೇರಿದಂಥೆ ಇತರ ಪೌಷ್ಟಿಕ ಗುಣಗಳನ್ನು ಹೊಂದಿರುವ ಪದಾರ್ಥಗಳನ್ನು ಬಳಕೆ ಮಾಡಲು ಇಲಾಖೆಯಿಂದ ನಿರ್ದೇಶನ ಇದೆ. ಕೆಲವು ಶಾಲೆಗಳಲ್ಲಿ ವಾರಗಟ್ಟಲೇ ಬಿಸಿ ಊಟ ಸ್ಥಗಿತಗೊಂಡರೂ ತಾಲ್ಲೂಕಿಲ್ಲಿ ಯಾರೊಬ್ಬರೂ ಕೇಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆದ ಉದಾಹರಣೆಗಳು ಇವೆ.

ಅಡುಗೆ ಅನಿಲ ಸೇರಿದಂತೆ ಬಿಸಿ ಊಟಕ್ಕಾಗಿಯೇ ಪ್ರತಿ ತಿಂಗಳು ತಾಲ್ಲೂಕಿನಲ್ಲಿ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಲಕ್ಷಗಟ್ಟಲೇ ಹಣ ಖರ್ಚು ಮಾಡುತ್ತಿರುವ ಬಗ್ಗೆಇಲಾಖೆ ಸರ್ಕಾರಕ್ಕೆ ನೀಡಿದ ವರದಿಯಿಂದ ತಿಳಿದುಬಂದಿದ್ದು, ಸರಿಯಾದ ನಿರ್ವಹಣೆ ಇಲ್ಲದ ಕಾರಣ ತಾಲ್ಲೂಕಿನ ಎಷ್ಟೊ ಶಾಲೆಗಳಲ್ಲಿ ಪ್ರತಿನಿತ್ಯ ಸರಿಯಾದ ಸಮಯಕ್ಕೆ ಮಕ್ಕಳಿಗೆ ಬಿಸಿ ಊಟ ನೀಡುವುದು ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಇದೆ.

ಎಷ್ಟೊ ಶಾಲೆಗಳಿಗೆ ಇಂದಿಗೂ ಅಡುಗೆ ಅನಿಲ ಮತ್ತು ಆಹಾರ ಧಾನ್ಯಗಳು ಸರಿಯಾಗಿ ವಿತರಣೆ ಆಗದೆ ಇರುವುದು ಮತ್ತು ಆಹಾರ ಧಾನ್ಯ ವಿತರಣೆಯಾದರೂ ಮಕ್ಕಳ ದಾಖಲಾತಿಗೆ ತಕ್ಕಂತೆ ಇರುವುದಿಲ್ಲ ಎಂಬ ಆರೋಪ ಕೆಲವು ಶಾಲೆಯ ಮುಖ್ಯ ಅಡುಗೆದಾರರ ದೂರುಗಳು ಇದ್ದು, ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆ ಬೆಳಗಾದರೆ ಶಾಲೆಗಳಲ್ಲಿ ಸರಿಯಾಗಿ ಅನುಷ್ಠಾನಗೊಳ್ಳದೆ ಇರುವುದು ದುರದೃಷ್ಟ ಅನ್ನುವಂತಿದೆ.

ಉಲ್ಲಂಘನೆ: ಯೋಜನೆಯ ಪ್ರಕಾರ ಅಡುಗೆ ಅನಿಲ ದಾಸ್ತನು ಏಜೆನ್ಸಿ ಪಡೆದವರು ಶಾಲೆಯವರೆಗೂ ಹೋಗಿ ಅಡುಗೆ ಅನಿಲ ನೀಡಬೇಕಾಗಿರುವ ಜವಾಬ್ದಾರಿ ಇದ್ದರೂ ಸಂಬಂಧಿಸಿದವರ ನಿರ್ಲಕ್ಷ್ಯದಿಂದಾಗಿ ಕೇಳುವವರು ಇಲ್ಲದಂತಾಗಿದೆ.

ವ್ಯವಸ್ಥಿತ ಖರ್ಚು: ಅಡುಗೆ ಅನಿಲ ಭರ್ತಿಗಾಗಿ ಇಲಾಖೆ ನೀಡಲಾಗುವ ಹಣ ಮಾತ್ರ ವ್ಯವಸ್ಥಿತವಾಗಿ ಖರ್ಚು ಬಿದ್ದರೂ ಬೆಳಗಾದರೆ ಕೆಲವು ಶಾಲೆಗಳಲ್ಲಿ ಕಟ್ಟೆಗೆ ಒಲೆ ಮುಂದೆ ಕುಳಿತು ಅಡುಗೆ ಮಾಡಿ ಮಕ್ಕಳಿಗೆ ಹಾಕುವುದು ಮಾತ್ರ ತಪ್ಪುತ್ತಿಲ್ಲ.

ಕಳೆದ 2009-10ನೇ ಸಾಲಿನಲ್ಲಿ ತಾಲ್ಲೂಕಿನ 120 ಶಾಲೆಗಳಿಗೆ ತಲಾ 4 ಸಾವಿರ ರೂಪಾಯಿಯಂಥೆ ಅಡುಗೆ ಅನಿಲದ ಒಲೆ (ಸ್ಟೋವ್)ಯನ್ನು ಖರೀದಿಗಾಗಿ ತಾಲ್ಲೂಕಿನ ಅಕ್ಷರ ದಾಸೋಹ ಇಲಾಖೆಗೆ 4.80.000 ರೂಪಾಯಿ ನೀಡಲಾಗಿತ್ತು. ಕಳಪೆ ಒಲೆಗಳನ್ನು ನೀಡಿರುವುದರಿಂದ ಕೆಲವು ಶಾಲೆಗಳಲ್ಲಿ ವರ್ಷ ಕಳೆಯುವ ಮೊದಲೇ ಒಲೆ ತುಕ್ಕು ಹಿಡಿದು ಬಿದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT