ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರಮಾಲೆಯಲಿ ಅಂಕವಿಲ್ಲದ ಪಾಠ

Last Updated 9 ಫೆಬ್ರುವರಿ 2011, 11:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಾರ್ಯಕ್ರಮವಿಡೀ ಅನಿವಾರ್ಯವಾಗಿ ಇಂಗ್ಲಿಷ್‌ನಲ್ಲೇ ನಡೆದಿತ್ತು. ಆದರೆ ಅವರು ಮಾತ್ರ ಅಚ್ಛ ಹಾಗೂ ಸ್ವಚ್ಛ ಕನ್ನಡದಲ್ಲೇ ಮಾತನಾಡಿದರು. ಕನ್ನಡ ವರ್ಣಮಾಲೆಯ ಅಕ್ಷರಗಳಿಂದಲೇ ಮಾತಿನ ಮಾಲೆ ಕಟ್ಟಿದ ಖ್ಯಾತ ವೈದ್ಯೆ, ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ವಿದ್ಯಾರ್ಥಿಗಳಿಗೆ ಉಪದೇಶ ನೀಡಿದರು, ಪೋಷಕರಿಗೆ ಸಲಹೆ ನೀಡಿದರು, ಸಭಿಕರಿಗೆ ಮಾಹಿತಿ ನೀಡಿದರು. ಇವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಯುವತಲೆಮಾರಿನ ಉತ್ಸಾಹದ ಚಿಲುಮೆ, ಸಾಫ್ಟ್‌ವೆರ್ ಎಂಜಿನಿಯರ್ ಬೆಂಗಳೂರಿನ ರಶ್ಮಿ ಕುಲಕರ್ಣಿ ತಮ್ಮ ಭಾಷಣದಲ್ಲಿ ಯಶಸ್ಸಿನ ಹಾದಿಯ ಬಗ್ಗೆ ತಿಳಿಹೇಳಿದರು.

ಅದು ಕಾಲೇಜಿನ ನಗರದ ಚೇತನಾ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ, ನಡೆದದ್ದು ಮಂಗಳವಾರ ಸಂಜೆ. ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಪ್ರಥಮಗಳ ಸಾಧನೆ ಮಾಡಿದ ಬಾಳೇಕುಂದ್ರಿ ಅವರನ್ನು ಪರಿಚಯ ಮಾಡಿದಾಗ ಎದೆತುಂಬಿ ಕರತಾಡನ ಮೊಳಗುತ್ತಿದ್ದ ಸಭಾಂಗಣದಲ್ಲಿ, ಅವರ ಭಾಷಣ ಆರಂಭಗೊಂಡಾಗ ನಿಶ್ಶಬ್ದ ನೆಲೆಸಿತ್ತು.

ಕರ್ನಾಟಕದಲ್ಲಿ ನಡೆಯುವ ಯಾವುದೇ ಸಮಾರಂಭದಲ್ಲಿ ಕನ್ನಡದಲ್ಲೇ ಮಾತನಾಡುವ ರೂಢಿಯನ್ನು ಬೆಳೆಸಿಕೊಂಡಿರುವುದಾಗಿ ಹೇಳಿ ಮಾತು ಆರಂಭಿಸಿದ ಅವರು ಕನ್ನಡ ವರ್ಣಮಾಲೆಯ ಅಕ್ಷರಗಳ ಆಧಾರದಲ್ಲೇ ‘ಪಾಠ’ ಮಾಡಿದರು, ಸಲಹೆ ಹಾಗೂ ಮಾಹಿತಿ ನೀಡಿದರು. ಅವರ ಭಾಷಣದಲ್ಲಿ ವಿಜ್ಞಾನವಿತ್ತು, ವೈದ್ಯಕೀಯ ವಿಷಯವಿತ್ತು, ಕಥೆ-ದೃಷ್ಟಾಂತಗಳಿದ್ದವು. ‘ಅ’ದಿಂದ ಆರಂಭವಾಗುವ ಅಮ್ಮ-ಅಪ್ಪನ ವಿಷಯದಿಂದ ಶುರುವಾದ ಮಾತು ‘ಅಃ’ದ ಅಂತಃಕರದವರೆಗೆ ಸಾಗಿತ್ತು. ಶಿಕ್ಷಣ, ಶಿಸ್ತು, ಶಿಷ್ಟಾಚಾರ, ಇಷ್ಟದ ಕೆಲಸ, ಈಶ್ವರನ ಮೇಲಿನ ನಂಬಿಕೆ, ಉತ್ಸಾಹ...ಹೀಗೆ ಮುಂದುವರಿದ ಭಾಷಣ ಮುಕ್ತಾಯಗೊಂಡಾಗ ಚಪ್ಪಾಳೆಗೆ ಮಿತಿಯೇ ಇರಲಿಲ್ಲ.

ಇದಕ್ಕೂ ಮೊದಲು ಮಾತನಾಡಿದ್ದು ಕಾಲೇಜಿನ ಹಳೆಯ ವಿದ್ಯಾರ್ಥಿ, ಸಾಧಕಿ ರಶ್ಮಿ ಕುಲಕರ್ಣಿ. ಕಲಿತ ಕಾಲೇಜಿಗೆ ಅತಿಥಿಯಾಗಿ ಆಗಮಿಸಲು ಸಾಧ್ಯವಾದ ಬಗ್ಗೆ ರೋಮಾಂಚನಗೊಂಡಿದ್ದ ಅವರು ಹೆತ್ತವರು, ಅಧ್ಯಾಪಕರು ಮುಂತಾದವರ ಸಹಾಯ- ಸಹಕಾರವನ್ನು ನೆನಪಿಸಿಕೊಂಡು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಚನ್ನಬಸವ ಜ್ಯೋತಿ (ಶಟಲ್ ಬ್ಯಾಡ್ಮಿಂಟನ್ ಆಟಗಾರ), ಶಾರೂಖ್ ಶೇಖ್ (ಸಿಇಟಿಯಲ್ಲಿ ಆರನೇ ರ್ಯಾಂಕ್), ಶಿವಾನಂದ ಕೋವಳ್ಳಿ (ಕಾಮೆಡ್-ಕೆ ಸಿಇಟಿಯಲ್ಲಿ ನಾಲ್ಕನೇ ರ್ಯಾಂಕ್), ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ  ಭಾಗ್ಶಶ್ರೀ ಪುರಾಣಿಕ್, ರಾಮಚಂದ್ರ ಕುಲಕರ್ಣಿ, ಅವರನ್ನು ಹಾಗೂ ಸುಲೇಮಾನ್ ನದಾಫ್ ಮತ್ತು ದೀಪ್ತಿ ಅಣ್ಣಿಗೇರಿ ಅವರ ತಾಯಂದಿರನ್ನು ಸನ್ಮಾನಿಸಲಾಯಿತು.

ದ್ಯಾವಪ್ಪನವರ ವಳಸಂಗ ಶಿಕ್ಷಣ ಅಕಾಡೆಮಿಯ ಅಧ್ಯಕ್ಷ ಪ್ರೊ. ಜಿ.ವಿ. ವಳಸಂಗ, ಕಾರ್ಯದರ್ಶಿ ಪ್ರೊ. ಎಂ.ಎಚ್. ದ್ಯಾವಪ್ಪನವರ, ಆಡಳಿತಾಧಿಕಾರಿ ಎನ್.ಎಚ್. ಹಿರೇಗೌಡರ , ಶೈಕ್ಷಣಿಕ ಸಲಹೆಗಾರ ಡಾ. ಎಂ.ವಿ. ಕುಂದಗೋಳ, ಚೇತನಾ ಕಾಲೇಜಿನ ಪ್ರಾಂಶುಪಾಲ ಡಾ.ಇ.ವಿ. ಹುಡೇದ, ಸಚೇತನಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸುಜಾತಾ ದಡೂತಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಅಭಿಷೇಕ ಪಾಟೀಲ, ಅಂಜುಂ ಕವಳಿಕಾಯಿ, ಸಚಿನ್ ಸರಸಂಬಿ, ರಾಧಿಕಾ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು. ಶಕ್ತಿದೇವಿ ಹಾಗೂ ಶ್ರುತಿ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ರಾಧಿಕಾ ದೇಸಾಯಿ ಮತ್ತು ತಂಡ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT