ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಂಡ ಕರ್ನಾಟಕ ಉಳಿಯಬೇಕು: ಸಿದ್ದೇಶ್ವರ ಶ್ರೀ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೈಸೂರು:  `ಉತ್ತರ, ದಕ್ಷಿಣ ಎನ್ನುವ ಭಾವನೆ ಮರೆಯಾಗುವಂತೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವ ಮೂಲಕ ಅಖಂಡ ಕರ್ನಾಟಕದ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕು~ ಎಂದು ವಿಜಾಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಮಂಗಳವಾರ ನಾಡಿನ ಜನತೆಗೆ ಕರೆ ನೀಡಿದರು.

ಚಾಮುಂಡಿಬೆಟ್ಟದಲ್ಲಿ 402 ನೇ ದಸರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿ ಉತ್ತರ, ದಕ್ಷಿಣ ಕರ್ನಾಟಕದವರು ಎನ್ನುವ ಭಾವನೆ ಇರಬಾರದು. ಕನ್ನಡಿಗರ ಹೃದಯದಲ್ಲಿ ಇಂಥ ಭಾವನೆ ಇದ್ದರೆ ಅದನ್ನು ತೊಡೆದುಹಾಕಬೇಕು. ಉತ್ತರ ಮತ್ತು ದಕ್ಷಿಣ ಕರ್ನಾಟಕದವರು ಪರಸ್ಪರ ಪ್ರೀತಿಸುತ್ತಾ, ಕಷ್ಟ ಸುಖಗಳಿಗೆ ಆಗಬೇಕು. ಇಂಥ ಮನಸ್ಥಿತಿಯನ್ನು ಎಲ್ಲರೂ ಪಡೆಯಬೇಕು ಎಂದು ಆಶಿಸಿದರು.

ಸುಂದರ ರಾಜ್ಯ: ಕರ್ನಾಟಕ ಭವ್ಯ ಪರಂಪರೆಯನ್ನು ಹೊಂದಿದೆ. ಕರುನಾಡು ವಿಶ್ವದ ಲಕ್ಷ್ಯವನ್ನು ತನ್ನತ್ತ ಸೆಳೆದಿದೆ. ಮಹಾರಾಜರು, ಅನುಭಾವಿಗಳು, ಶ್ರೇಷ್ಠ ಚಿಂತಕರು ಇಲ್ಲಿ ಆಗಿ ಹೋಗಿದ್ದಾರೆ.  ಕನ್ನಡಿಗರು ಒಳ್ಳೆಯ ಹೃದಯವನ್ನು ಹೊಂದಿದ್ದಾರೆ. ಇಂಥ ರಾಜ್ಯ ಸ್ವರ್ಗಕ್ಕೆ ಸಮ ಎಂದು ಕೊಂಡಾಡಿದರು.

ನಮ್ಮಲ್ಲಿರುವ ಕಲಾ ಮತ್ತು ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಪರಿಚಯಿಸುವ ಸಲುವಾಗಿ ದಸರಾ ಮಹೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ನಮ್ಮ ನಾಡಿಗೆ ದೇಶ, ವಿದೇಶಗಳಿಂದ ಜನಬರಬೇಕು. ನಮ್ಮ ವೈಭವವನ್ನು ಕಂಡು ಆನಂದಿಸಬೇಕು. ಹೊರಗಿನವರನ್ನು ಆಹ್ವಾನಿಸಿ ಆತಿಥ್ಯವನ್ನು ನೀಡಬೇಕು, ಅವರು ಸ್ವೀಕರಿಸಬೇಕು ಎಂದು ಹೇಳಿದರು.

ನಿಸರ್ಗ ಕಾಪಾಡಿ: ನಮ್ಮದು ಸಮೃದ್ಧ, ಸೌಂದರ್ಯಭರಿತ ನಿಸರ್ಗ. ನಿಸರ್ಗ ರಕ್ಷಣೆ ಎಲ್ಲರ ಮೊದಲ ಆದ್ಯತೆಯಾಗಬೇಕು. ನಿಸರ್ಗವೇ ಸಂಪತ್ತು ಎಂದು ಹೆಮ್ಮೆ ಪಡಬೇಕು. ಒಂದು ಮರವನ್ನು ಕಡಿದರೆ, ಹತ್ತು ಮರಗಳನ್ನು ಬೆಳೆಸಬೇಕು. ಒಂದೂ ಪಕ್ಷಿಯನ್ನು ಕೊಲ್ಲದೆ ನೂರು ಗೂಡು ಕಟ್ಟುವಂತೆ ಮಾಡಬೇಕು ಎಂದರು.
ಮಣ್ಣಲ್ಲಿ ಬಿದ್ದ ಬೀಜಕ್ಕೆ ನಾಲ್ಕು ಹನಿ ನೀರು ಕೊಟ್ಟರೆ ಅದು 10 ವರ್ಷಗಳಲ್ಲಿ ವಿಶಾಲ ವೃಕ್ಷವಾಗಿ ಬೆಳೆದು ಹಣ್ಣು ನೀಡುತ್ತದೆ. ರೈತರು ಬೀಜವಿದ್ದಂತೆ. ಅವರ ಬಳಿ ಭೂಮಿ ಇದೆ, ನೀರು ಕೊಡಿ. ಅವರು ಕನ್ನಡ ನಾಡು ಸುಫಲವನ್ನಾಗಿಸುವ ಉಮೇದಿನಲ್ಲಿದ್ದಾರೆ ಎಂದು ಹೇಳಿದರು.

ಸೂಜಿಗಲ್ಲಿನಂತೆ ಸೆಳೆದ ~ಮೌನಿ ಸಂತ~
402 ನೇ ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚು ಗಮನ ಸೆಳೆದಿದ್ದು, ವಿಜಾಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ.

ತಮ್ಮ ಸರಳ ನಡೆ, ನುಡಿಯಿಂದಲೇ ಎಲ್ಲರನ್ನೂ ಸೂಜಿಗಲ್ಲಿನಂತೆ ತಮ್ಮತ್ತ ಸೆಳೆದುಕೊಳ್ಳುವ ವ್ಯಕ್ತಿತ್ವ ಹೊಂದಿರುವ ಇವರನ್ನು ಕಣ್ತುಂಬಿಕೊಳ್ಳಲು ಹಾಗೂ ಪ್ರವಚನವನ್ನು ಕೇಳಲು ಜನರು ಕಾತುರರಾಗಿದ್ದರು. ಶ್ವೇತವರ್ಣದ ಖಾದಿ ಜುಬ್ಬ, ಪಂಚೆ, ಕುತ್ತಿಗೆಗೆ ಟವೆಲ್ ಕಟ್ಟಿಕೊಂಡಿದ್ದ ಸಿದ್ದೇಶ್ವರ ಸ್ವಾಮೀಜಿ ವೇದಿಕೆಗೆ ಕೊನೆಯವರಾಗಿ ಬಂದರು. ನಾಡಗೀತೆ ಹಾಡಲು ಬಂದಿದ್ದ ಗಾಯಕ, ಗಾಯಕಿಯರು, ವಾದ್ಯಗೋಷ್ಠಿಯವರಿಗೆ ನಮಸ್ಕರಿಸಿದರು.

ಭರ್ತಿ 25 ನಿಮಿಷಗಳು ಎಂದಿನ ಪ್ರವಚನಧಾಟಿಯಲ್ಲೇ ಉದ್ಘಾಟನಾ ಭಾಷಣ ಮಾಡಿದರು. ನಂತರ ದಸರಾ ಮಹೋತ್ಸವ ಸಮಿತಿ ಸನ್ಮಾನಿಸಲು ಮುಂದಾದಾಗ ನಯವಾಗಿಯೇ ನಿರಾಕರಿಸಿದರು.

ನಂತರ `ಮೌನಿ ಸಂತ~ರಂತೆ ತಮ್ಮಪಾಡಿಗೆ ತಾವು ಕುಳಿತರು. ಇವರ ಎಡಕ್ಕೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಲಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಕುಳಿತಿದ್ದರು.

ಪತ್ನಿಗೆ ಪೇಟ ತೊಡಿಸಿದ ಶೆಟ್ಟರ್
ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎ.ರಾಮದಾಸ್ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಗೌರವಿಸಿದರು. ಬಳಿಕ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಮೂಲಕ ಪತ್ನಿ ಶಿಲ್ಪಾ ಜಗದೀಶ ಶೆಟ್ಟರ್ ಅವರಿಗೆ ಮೈಸೂರು ಪೇಟ ತೊಡಿಸಿ, ಹೂ ಮಾಲೆ ಹಾಕಿಸಿದ್ದು ಗಮನ ಸೆಳೆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT