ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಂಡ ಕರ್ನಾಟಕ: ಪರಿಷತ್ತಿನಲ್ಲಿ ವಾಗ್ವಾದ

Last Updated 4 ಡಿಸೆಂಬರ್ 2013, 8:32 IST
ಅಕ್ಷರ ಗಾತ್ರ

ಸುವರ್ಣ ಸೌಧ (ಬೆಳಗಾವಿ): ಉತ್ತರ-ದಕ್ಷಿಣ, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಇತ್ಯಾದಿ ಭೇದ ಮಾಡದೆ ಅಖಂಡ ಕರ್ನಾಟಕದ ಬಗ್ಗೆ ಅಭಿಮಾನ ಹೊಂದುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂಬ ವಾದ ಮಂಡಿಸುತ್ತ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ವಾಗ್ವಾದಕ್ಕಿಳಿದ ಪ್ರಸಂಗಕ್ಕೆ ವಿಧಾನ ಪರಿಷತ್ ಮಂಗಳವಾರ ಸಾಕ್ಷಿಯಾಯಿತು.

ಕೃಷ್ಣಾ ನ್ಯಾಯ ಮಂಡಳಿ ತೀರ್ಪಿನ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಕುರಿತು ಸಲಹೆ ನೀಡುವ ಸಂದರ್ಭದಲ್ಲಿ ಈ ವಿಷಯ ವನ್ನು  ಎಳೆದು ತಂದದ್ದು ಜೆಡಿಎಸ್ ನ ಎಂ.ಸಿ.ನಾಣಯ್ಯ.

ನಿಯಮ ೬೮ರ ಅಡಿ ವಿಷಯ ಪ್ರಸ್ತಾಪಿಸಿದ ಅವರು ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ಹೆಚ್ಚಿಸುವ ಮತ್ತು ಇದಕ್ಕೆ ಸಂಬಂಧಿಸಿ ಜನರಿಗೆ ಪುನರ್ವಸತಿ ಕಲ್ಪಿಸುವ ಸಂದರ್ಭದಲ್ಲಿ ಹಣ ಪೋಲಾಗಲು ಬಿಡಬಾರದು ಎಂದು ಹೇಳಿದರು. ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಹಣವನ್ನು ನುಂಗುವ ವಿಷಯದಲ್ಲಿ ಮಾತನಾಡಿ ರಾಜ್ಯದ ಹಿತ ಕಾಪಾಡಬೇಕಾದ ರಾಜಕಾರಣಿಗಳು ಇಂದು ರಾಜ್ಯ ಒಡೆಯುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ, ಕೆಲವರು ನೀಡುವ ಹೇಳಿಕೆಗಳು ಇದನ್ನು ಸೂಚಿಸುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜಕೀಯ ತೀಟೆ ತೀರಿಸಿಕೊಳ್ಳಲು, ಕುರ್ಚಿಯನ್ನು ಗಿಟ್ಟಿಸಿಕೊಳ್ಳಲು ರಾಜ್ಯ ವಿಭಜನೆಯ ಹೇಳಿಕೆ ನೀಡುವವರನ್ನು ದೂರ ಇರಿಸಿ ಸಮಗ್ರ ಕರ್ನಾಟಕ ಕಲ್ಪನೆ ನಮ್ಮಲ್ಲಿ ಒಡಮೂಡಬೇಕು. ಈ ಕುರಿತು ಎಲ್ಲ ಪಕ್ಷಗಳ ಹಿರಿಯರು ಚಿಂತನೆ ನಡೆಸಬೇಕು, ನಿಮ್ಮ ನಿಮ್ಮ ಪಕ್ಷದಲ್ಲಿರುವ ಪ್ರತ್ಯೇಕತಾವಾದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಶಿಸಿದರು.

ಮಧ್ಯ ಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಡಿ.ವಿ. ಸದಾನಂದಗೌಡ ಅವರು ತಾವು ಮುಖ್ಯಮಂತ್ರಿ ಆಗಿದ್ದಾಗ ಬೆಳಗಾವಿ ನಗರ ಪಾಲಿಕೆಯಲ್ಲಿ ಶಿವಸೇನೆ ಧ್ವಜ ಹಾರಿಸಿದವರ ವಿರುದ್ಧ ಕ್ರಮ ಕೈಗೊಂಡಿದ್ದಾಗಿಯೂ ಕಳೆದ ಬಾರಿ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಒಡೆಯುವ ಮಾತುಗಳನ್ನಾಡಿದ ತಮ್ಮ ಪಕ್ಷದವರ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿ ರುವುದಾಗಿಯೂ ತಿಳಿಸಿದರು.

ಈ ಬಾರಿಯೂ ಅದೇ ವ್ಯಕ್ತಿ ಮತ್ತೆ ಇಂಥ ಮಾತುಗಳನ್ನಾಡಿದ್ದು ಅದರ ಬಗ್ಗೆ ಗಂಭೀರ ಚರ್ಚೆ ಪಕ್ಷದೊಳಗೆ ಆಗಿದೆ ಎಂದರು.

ಸಭಾನಾಯಕ ಎಸ್.ಆರ್. ಪಾಟೀಲ ಮಾತನಾಡಿ ರಾಜ್ಯವನ್ನು ಪ್ರತ್ಯೇಕವಾಗಿ ನೋಡುವ ಭಾವನೆ ಎಲ್ಲರ ಮನಸ್ಸಿನಿಂದ ಇಲ್ಲವಾಗಬೇಕು ಎಂದರು. ಈ ಸಂದರ್ಭದಲ್ಲಿ ಬಿಜೆಪಿಯ ಕೆ.ಬಿ.ಶಾಣಪ್ಪ ಅವರು ಮಧ್ಯಪ್ರವೇಶಿಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಎದ್ದು ನಿಂತು ವಿರೋಧ ವ್ಯಕ್ತಪಡಿಸಿದರು. ತಕ್ಷಣ ಸದನದಲ್ಲಿ ಗದ್ದಲವಾಯಿತು. ಯಾರು ಏನು ಹೇಳುತ್ತಿದ್ದಾರೆ ಎಂದು ತಿಳಿಯ ದಾಯಿತು. ಸುಮಾರು ಹತ್ತು ನಿಮಿಷಗಳ ಶ್ರಮದ ನಂತರ ಸದನವನ್ನು ಸುಸ್ಥಿತಿಗೆ ತಂದ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಈ ವಿಷಯದ ಕುರಿತ ಚರ್ಚಗೆ ಮುಂದೆ ಅವಕಾಶವಿಲ್ಲ ಎಂದು ಹೇಳಿ ವಾಗ್ವಾದಕ್ಕೆ ತೆರೆ ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT