ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗಟಹಳ್ಳಿಯಲ್ಲಿ ಸ್ಮಶಾನವೇ ಇಲ್ಲ ಅಕಟಕಟಾ!

Last Updated 17 ಅಕ್ಟೋಬರ್ 2012, 9:15 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನ ಪುಟ್ಟ ಗ್ರಾಮ ಅಗಟಹಳ್ಳಿಯಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ಕುಡಿಯುವ ನೀರು ಹಾಗೂ ಸ್ಮಶಾನ ಇಲ್ಲದಿರುವುದು ಈ ಗ್ರಾಮಸ್ಥರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳು.

ತಟ್ಟೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ  ಗ್ರಾಮವು ಗ್ರಾಮ ಪಂಚಾಯಿತಿ ಕೇಂದ್ರದಿಂದ ಕೇವಲ 2 ಕಿ.ಮೀ. ದೂರದಲ್ಲಿದೆ. ಸುಮಾರು 500 ಜನಸಂಖ್ಯೆ ಇದ್ದು, ಬಹುಪಾಲು ಜನ ಕೃಷಿ ಅವಲಂಬಿತರು.

ಸಿ.ಎಚ್.ವಿಜಯಶಂಕರ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಈ ಗ್ರಾಮಕ್ಕೆ `ಗ್ರಾಮ್ ಸಡಕ್~ ಯೋಜನೆಯಲ್ಲಿ ರಸ್ತೆ ನಿರ್ಮಿಸಿದ್ದಾರೆ. ಇದನ್ನು ಹೊರತುಪಡಿಸಿ ಯಾವುದೇ ಅಭಿವೃದ್ಧಿ ಕಾಮಗಾರಿ ಈವರೆಗೂ ಆಗಿಲ್ಲ.

ಗ್ರಾಮದಲ್ಲಿ 3 ಬೀದಿಗಳಿವೆ. ಯಾವ ಬೀದಿಗೂ ಚರಂಡಿ ಇಲ್ಲ. ಮನೆಯ ದ್ರವತ್ಯಾಜ್ಯ ರಸ್ತೆಯ ಮೇಲೆಯೇ ಹರಿಯುತ್ತದೆ. ಮಳೆ ಬಂದರಂತೂ ಇಲ್ಲಿನ ರಸ್ತೆಗಳೇ ಕೆರೆಯಾಗಿ ಮಾರ್ಪಡುತ್ತವೆ. ಮಳೆ ನೀರು ಹರಿದುಹೋಗಲು ಮಾರ್ಗವಿಲ್ಲದೆ; ಮನೆಗಳಿಗೇ ನುಗ್ಗುತ್ತದೆ.

ಈ ಸಮಸ್ಯೆಯನ್ನು ಗ್ರಾಮಕ್ಕೆ ಬಂದುಹೋಗುವ ಎಲ್ಲ ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದಾರೆ ಇಲ್ಲಿನ ಜನ. ಯಾರೂ ಇವರ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ. ಗ್ರಾಮದಲ್ಲಿ ಕಡಿಮೆ ಜನಸಂಖ್ಯೆ ಇರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅಲ್ಪ ಮೊತ್ತದ ಅನುದಾನ ಸಾಕಾಗುತ್ತದೆ. ಆದರೆ, ಈ ಭಾಗದ ಜನಪ್ರತಿನಿಧಿ ಗಳು, ಗ್ರಾಮ ಪಂಚಾಯಿತಿ ಮನಸ್ಸು ಮಾಡಿಲ್ಲ ಎಂದು ದೂರುತ್ತಾರೆ ಯುವಕ ರಾಜು.

ಸಾಮಾನ್ಯವಾಗಿ ಎಲ್ಲ ಗ್ರಾಮಗಳು ಅನುಭವಿಸುವಂತೆ ಅಗಟಹಳ್ಳಿಗೂ ಕುಡಿಯುವ ನೀರಿನ ಸಮಸ್ಯೆ ಇದೆ. ಈಗ ದೊರೆಯುತ್ತಿರುವ ನೀರು ಮಲಿನವಾಗಿದ್ದು, ಗ್ರಾಮಸ್ಥರು ಪದೇಪದೇ ರೋಗಗಳಿಂದ ಕಷ್ಟ ಅನುಭವಿಸುತ್ತಿದ್ದಾರೆ.

ಗ್ರಾಮದ ಅರಳಿ ಮರದ ಬಳಿ ಒಂದು ಕೊಳವೆಬಾವಿ ಕೊರೆದು 30 ವರ್ಷ ಮೀರಿದೆ. ಇದುವರೆಗೂ ಅದನ್ನು ದುರಸ್ತಿ ಮಾಡಿಸಿಲ್ಲ. ಸದ್ಯ ಇದೇ ಕೊಳವೆಬಾವಿ ಇಡೀ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಆಗುತ್ತದೆ. ಆದರೆ, ಇದರಿಂದ ಪಡೆಯುವ ನೀರು ಸಂಪೂರ್ಣ ಮಾಲಿನ್ಯದಿಂದ ಕೂಡಿದೆ.

ಈ ಬಗ್ಗೆ ಕಂದಾಯ ಇಲಾಖೆ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದು ವರ್ಷ ಕಳೆದರೂ ಕೊಳವೆಬಾವಿ ದುರಸ್ತಿ ಮಾಡಿಸಿಲ್ಲ. ಗ್ರಾಮದೊಳಗೆ ಇರುವ ಮೂರು ಕೊಳವೆಬಾವಿಗಳಲ್ಲಿ ಇದರಲ್ಲಿ ಮಾತ್ರ ಸರಿಯಾಗಿ ನೀರು ಬರುತ್ತದೆ. ಆದರೆ, ಮಲಿನ ನೀರನ್ನು ಕುಡಿಯುವುದು ಗ್ರಾಮಸ್ಥರಿಗೆ ಬಂದ ಅನಿವಾರ್ಯತೆ.

ಬರ ಪರಿಹಾರ ಕಾಮಗಾರಿಯಲ್ಲಿ ಈ ಕೊಳವೆಬಾವಿ ಶುಚಿಗೊಳಿಸುವುದಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಒಂದು ಬರಗಾಲ, ಒಂದು ಮಳೆಗಾಲ, ಬೇಸಿಗೆ ದಾಟಿ ಮತ್ತೆ ಮಳೆಗಾಲ ಬಂದಿದೆ. ಅಧಿಕಾರಿಗಳು ಈವರೆಗೂ ಇತ್ತ ಸುಳಿದಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಶವ ಸಂಸ್ಕಾರಕ್ಕೆ ಸಂಬಂಧಿಗಳ ಪರದಾಟ
ಅಗಟಹಳ್ಳಿ ಗ್ರಾಮದಲ್ಲಿ ಸ್ಮಶಾನವೇ ಇಲ್ಲ! ಗ್ರಾಮದಲ್ಲಿ ಯಾರಾದರು ಮೃತಪಟ್ಟರೆ ಅವರವರ ಹೊಲಗಳಲ್ಲಿ ಹೂಳಲಾಗುತ್ತಿದೆ. ಹೊಲ ಇಲ್ಲದವರ ಪರಿಸ್ಥಿತಿ ಹೇಳತೀರದು. ಈ ಸಮಸ್ಯೆಯನ್ನು ನೀಗಿಸುವುದು ಗ್ರಾಮಸ್ಥರ ಮೊದಲ ಬೇಡಿಕೆ.
 
ಗ್ರಾಮದ ಸುತ್ತ ಸರ್ಕಾರಿ ಜಾಗ ಸಾಕಷ್ಟಿದೆ. ಇದನ್ನು ಸರ್ವೆ ಮಾಡಿಸಿ ಸ್ಮಶಾನಕ್ಕೆ ಮೀಸಲಿಡಬೇಕು ಎಂದು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅವರ ಶವ ಸಂಸ್ಕಾರಕ್ಕಾಗಿ ಪರದಾಡುವ ಸ್ಥಿತಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT