ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯವಿದ್ದಷ್ಟೇ ಅದಿರು ಬಗೆಯಲು ಶಿಫಾರಸು

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಅಭಿವೃದ್ಧಿಗೆ ಅಡ್ಡಿಯಾಗದಂತೆ, ಪರಿಸರಕ್ಕೂ ಧಕ್ಕೆಯಾಗದಂತೆ ಎರಡರ ನಡುವೆ ಸಮತೋಲನ ಸಾಧ್ಯವಾಗುವಂತೆ ಗಣಿಗಾರಿಕೆ ಚಟುವಟಿಕೆ ಸೀಮಿತಗೊಳಿಸಿ, ವೈಜ್ಞಾನಿಕ ಮತ್ತು ಆಧುನಿಕ ವಿಧಾನಗಳ ಮೂಲಕ ಅದಿರು ಹೊರತೆಗೆಯಲು ಅನುಮತಿ ನೀಡಬೇಕೆಂದು `ಭಾರತೀಯ ಪರಿಸರ ಮತ್ತು ಶಿಕ್ಷಣ ಸಂಶೋಧನಾ ಮಂಡಳಿ~ (ಐಸಿಎಫ್‌ಆರ್‌ಇ) ಮಹತ್ವದ ಶಿಫಾರಸು ಮಾಡಿದೆ.

ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸರ ಹಾನಿ ಕುರಿತು ಅಧ್ಯಯನ ಮಾಡಿರುವ ಡಾ. ವಿ.ಕೆ. ಬಹುಗುಣ ನೇತೃತ್ವದ ಪರಿಸರ ಮತ್ತು ಶಿಕ್ಷಣ ಮಂಡಳಿ ಕರ್ನಾಟಕ ಒಳಗೊಂಡಂತೆ ದೇಶದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಅದಿರು ತೆಗೆಯಲು ಅನುಮತಿ ನೀಡಬೇಕೆಂದು ಶಿಫಾರಸು ಮಾಡಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯಿಂದ ಪರಿಸರದ ಮೇಲೆ ಆಗಿರುವ ಹಾನಿ ಕುರಿತು ಮೊದಲು ವರದಿ ಸಲ್ಲಿಸಿರುವ ಮಂಡಳಿ, ಈಗ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆ ಉಂಟು ಮಾಡಿರುವ ಪರಿಣಾಮ ಕುರಿತು ಸಮಗ್ರವಾಗಿ ಅಧ್ಯಯನ ನಡೆಸಿ ಸುದೀರ್ಘ ವರದಿ ಸಲ್ಲಿಸಿದೆ. ಲಾಭದ ಆಸೆಯಿಂದ ನೀತಿ- ನಿಯಮ ಉಲ್ಲಂಘಿಸಿ ಯದ್ವಾತದ್ವ ಗಣಿಗಾರಿಕೆ ನಡೆಸಲಾಗಿದೆ. ಅರಣ್ಯ ಪ್ರದೇಶ ಅತಿಕ್ರಮಣ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಿದೆ.

ಪರಿಸರ ಮತ್ತು ಶಿಕ್ಷಣ ಸಂಶೋಧನಾ ಮಂಡಳಿ ವರದಿ ಈಗ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಅರಣ್ಯ ಪೀಠದ ಮುಂದಿದೆ. ಪರಿಸರಕ್ಕೆ ಹೆಚ್ಚು ಹಾನಿಯಾಗದ, ಸಾಮಾಜಿಕವಾಗಿ ಒಪ್ಪಿಗೆಯಾಗುವ, ಆರ್ಥಿಕ, ತಾಂತ್ರಿಕ ಹಾಗೂ ಆಡಳಿತಾತ್ಮಕವಾಗಿ ಕಾರ್ಯಸಾಧುವಾಗುವ ರೀತಿಯಲ್ಲಿ ಗಣಿಗಾರಿಕೆ ನಡೆಸಬೇಕು ಎಂದು ಮಂಡಳಿ ಸಲಹೆ ಮಾಡಿದೆ.

ರಾಜ್ಯಕ್ಕೆ ಪ್ರತಿ ವರ್ಷ ಅಗತ್ಯವಿರುವ 30ದಶಲಕ್ಷ ಟನ್ ಅದಿರು ಮಾತ್ರ ಹೊರತೆಗೆಯಲು ಅನುಮತಿ ನೀಡಬೇಕು. ಬಳ್ಳಾರಿಯಲ್ಲಿ 25 ದಶ ಲಕ್ಷ ಟನ್, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ಐದು ಲಕ್ಷ ಟನ್ ಕಬ್ಬಿಣದ ಅದಿರು ಹೊರ ತೆಗೆಯಲು ಅವಕಾಶ ಕೊಡಬೇಕು ಎಂದು ಶಿಫಾರಸು ಮಾಡಲಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆ ಅದರಲ್ಲೂ ಚೀನಾದಲ್ಲಿ ಕಬ್ಬಿಣದ ಅದಿರಿಗೆ ಬೇಡಿಕೆ ತೀವ್ರವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ ಬಳ್ಳಾರಿಯಂತೆ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಯದ್ವಾತದ್ವವಾಗಿ ಗಣಿಗಾರಿಕೆ ನಡೆಸಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 2000-01ರಲ್ಲಿ 0.21 ದಶಲಕ್ಷ ಟನ್ ಅದಿರು ಹೊರ ತೆಗೆದಿದ್ದರೆ, 2010- 11ರಲ್ಲಿ 12.49 ದಶಲಕ್ಷ ಟನ್ ಅದಿರು ಹೊರತೆಗೆಯಲಾಗಿದೆ. ಬಳ್ಳಾರಿಯಲ್ಲಿ 2007-08ನೇ ಸಾಲಿನಲ್ಲಿ 41.5 ದಶಲಕ್ಷ ಟನ್ ತೆಗೆಯಲಾಗಿದೆ.

ಇದೇ ಅವಧಿಯಲ್ಲಿ ತುಮಕೂರು ಜಿಲ್ಲೆಯಲ್ಲಿ 0.072 ದಶಲಕ್ಷ ಟನ್‌ನಿಂದ 2.003 ದಶಲಕ್ಷ ಟನ್ ಅದಿರು ತೆಗೆಯಲಾಗಿದೆ. ಗಣಿಗಳ ಮಾಲೀಕರು ಮಾಡಿರುವ ಮನವಿ, ಒದಗಿಸಿರುವ ಮಾಹಿತಿ ಆಧರಿಸಿ ಇಂಡಿಯನ್ ಬ್ಯುರೋ ಆಫ್ ಮೈನ್ಸ್ ಹೆಚ್ಚು ಅದಿರು ತೆಗೆಯಲು ಒಪ್ಪಿಗೆ ನೀಡಿದೆ. ಆದರೆ, ಅಧಿಕ ಪ್ರಮಾಣದ ಅದಿರು ಹೊರತೆಗೆಯಲು ಅನುಮತಿ ನೀಡುವ ಮುನ್ನ ಪ್ರತಿ ಗಣಿಗಳಲ್ಲಿ ಲಭ್ಯವಿರುವ ಅದಿರು ನಿಕ್ಷೇಪ ಮತ್ತು ಕೈಗೊಂಡಿರುವ ಪರಿಸರ ಸಂರಕ್ಷಣಾ ಕ್ರಮಗಳನ್ನು ಕುರಿತು ಐಬಿಎಂ ಸ್ವತಂತ್ರವಾದ ಸಮೀಕ್ಷೆ ಕೈಗೊಳ್ಳಬೇಕು ಎಂದು ಬಹುಗುಣ ನೇತೃತ್ವದ ಮಂಡಳಿ ಹೇಳಿದೆ.

ಕರ್ನಾಟಕವೂ ಸೇರಿದಂತೆ ದೇಶದ ವಿವಿಧೆಡೆ ಲಭ್ಯವಿರುವ ಖನಿಜ ಸಂಪತ್ತಿನ ನಕ್ಷೆ ತಯಾರಿಸಬೇಕು. ಮುಂದಿನ 50 ವರ್ಷಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಅದಿರು ಹೊರತೆಗೆಯಲು ಅನುಮತಿ ನೀಡಬೇಕು. ಆಧುನಿಕ ಯಂತ್ರೋಪಕರಣ, ಪರಿಣಿತರನ್ನು ಈ ಕೆಲಸಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸುರಕ್ಷತಾ ವಲಯದಲ್ಲಿ ಗಣಿಗಾರಿಕೆ ಅನುಮತಿ ನೀಡುವ ಮಹಾನಿರ್ದೇಶಕರು ಗಣಿ ಸುರಕ್ಷತೆ ಅವರಿಗೆ ನೀಡಿರುವ ಅಧಿಕಾರ ಕುರಿತು ಪುನರ್‌ಪರಿಶೀಲಿಸಬೇಕು.

ಈ ಕಚೇರಿಯ ಅಧಿಕಾರಿಗಳು ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಗಣಿಗಾರಿಕೆ ಪ್ರದೇಶಗಳ ಸುರಕ್ಷತಾ ವಲಯದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇಂಥ ತೀರ್ಮಾನಗಳಿಂದಾಗಿ ಪರಿಸರ ನಾಶವಾಗಿದೆ ಎಂದು ವರದಿಯಲ್ಲಿ ದೂರಲಾಗಿದೆ.

ಉಕ್ಕು ಸಚಿವಾಲಯದ ಕಾರ್ಯದರ್ಶಿ ಶರ್ಮ ನೇತೃತ್ವದ ಸಮಿತಿ ಸರ್ಕಾರಕ್ಕೆ ಮಾಡಿರುವ ಶಿಫಾರಸಿನಂತೆ ಬಹುಗುಣ ಸಮಿತಿಯೂ ಪಶ್ಚಿಮ ಘಟ್ಟದಲ್ಲಿ ಲಭ್ಯವಿರುವ ಅದಿರನ್ನು ನೆಲದಾಳದ ತಂತ್ರಜ್ಞಾನ ಬಳಸಿ ಅತ್ಯಾಧುನಿಕ ವಿಧಾನದಲ್ಲಿ ಹೊರ ತೆಗೆಯಲು ಚಿಂತಿಸಬೇಕು ಎಂದೂ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT