ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗಲಿಕೆಯ ನೋವಲ್ಲೇ ಸ್ನೇಹವೆಂಬ ಸಂಕೋಲೆ

Last Updated 8 ಆಗಸ್ಟ್ 2011, 5:20 IST
ಅಕ್ಷರ ಗಾತ್ರ

ಬಳ್ಳಾರಿ: ಸ್ನೇಹ ಹರಿವ ನದಿ. ಬೆಟ್ಟದಿಂದ ಇಳಿವ ಬೆಳ್ಳನೆಯ ಝರಿ. ಸ್ನೇಹವೆಂಬ ಹೂಬನ ಸದಾ ನಳನಳಿಸುತ್ತಿರಬೇಕು. ಅಗಲಿಕೆಯ ಅನಿವಾರ್ಯತೆಯಿಂದ ಸ್ನೇಹ ಕೊರಗಬಾರದು, ಸೊರಗ ಬಾರದು. ಸ್ನೇಹ ಹಚ್ಚಹಸಿರಾಗಿರಬೇಕು. ಬೆಚ್ಚನೆಯ ನೆನಪುಗಳು ಕಚಗುಳಿ ಇಡುತ್ತಲೇ ಇರಬೇಕು.

ಆಗಸ್ಟ್ ಮೊದಲ ಭಾನುವಾರ ಜಗತ್ತಿನಾದ್ಯಂತ ಆಚರಿಸಲಾಗುವ ಸ್ನೇಹಿತರ ದಿನವನ್ನು ನಗರದ ಡಾ.ರಾಜಕುಮಾರ್ ಉದ್ಯಾನದಲ್ಲಿ ಕುಳಿತು ಆಚರಿಸುತ್ತಿದ್ದ ಏಳು ಜನ ಯುವತಿಯರ ಮನಸಿನಾಳದ ಮಾತುಗಳಿವು.

ನಗರದ ಇಂಡಿಯನ್ ಸೈನ್ಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಎಂಜಿನಿಯರಿಂಗ್, ಮೆಡಿಕಲ್, ಬಿಬಿಎ, ಬಿಎಸ್‌ಸಿ ಪದವಿ ಪಡೆಯುವುದಕ್ಕೆಂದೇ ರಾಜ್ಯದ ವಿವಿಧ ಪ್ರದೇಶಗಳಿಗೆ ತೆರಳುತ್ತಿರುವ ಆ ಏಳು ಜನ ಸ್ನೇಹಿತೆಯರು ಅನಿವಾರ್ಯ ಕಾರಣಗಳಿಂದ ತಮ್ಮನ್ನು ಭೇಟಿಯಾಗಲು ಸಾಧ್ಯವಾಗದ ಇತರ ಮೂವರು ಆಪ್ತ ಗೆಳತಿಯರನ್ನು ಮಿಸ್ ಮಾಡಿಕೊಂಡು, ಉದ್ಯಾನದ ಕೆರೆಯ ಅಂಗಳದಲ್ಲಿ ಕುಳಿತು ಅರ್ಥಪೂರ್ಣವಾದ ಹರಟೆಯಲ್ಲಿ ತೊಡಗಿದ್ದರು.
ಅವರ ಸ್ನೇಹಕ್ಕೆ ಮಾರು ಹೋಗಿ, ತಾನೂ ಸ್ನೇಹ ಬಯಸಿ ಬಂದಿದ್ದ ಇನ್ನೊಬ್ಬ ಯುವತಿಯೂ ಅಲ್ಲಿದ್ದಳು.
ಇದು ಅವರ ಕೊನೆಯ ಭೇಟಿಯಲ್ಲ. ಅಗಲಿಕೆಯ ಅನಿವಾರ್ಯತೆಯ ನಡುವೆ ಯೂ ಸ್ನೇಹವನ್ನು ಕಾಯ್ದುಕೊಳ್ಳುವ ಉತ್ಕಟತೆ ಅವರದು.

ಪ್ರೇಮಿಗಳು, ಚಿಕ್ಕಚಿಕ್ಕ ಮಕ್ಕಳ ಜತೆ ಬರುವ ದಂಪತಿಯಿಂದ ತುಂಬಿ ತುಳುಕುವ  ಉದ್ಯಾನದಲ್ಲಿ, ತಮ್ಮಲ್ಲಿ ಹುದುಗಿರುವ ನೋವನ್ನು ನುಂಗಿ, ಭವಿಷ್ಯದಲ್ಲಿ ಸ್ನೇಹ ಅಜರಾಮರವಾಗಿ ಇರಲಿ ಎಂಬ ಆಶಯದೊಂದಿಗೆ ಸೇರಿದ್ದ ಆ ಏಳು ಜನ ಯುವತಿಯರಲ್ಲಿನ ಸ್ನೇಹದ ಕುರಿತ ವ್ಯಾಖ್ಯಾನ ಮಾತ್ರ `ಭೇಷ್~ ಎನ್ನುವಷ್ಟು ಅಪ್ಯಾಯಮಾನ.

ಆ ಗುಂಪಿನಲ್ಲಿ ಜಾತಿ- ಮತ, ಮೇಲು- ಕೀಳು, ಬಡವ- ಶ್ರೀಮಂತ ಎಂಬ ಭೇದಭಾವಕ್ಕೆ ಜಾಗವಿಲ್ಲ. ಅಂತೆಯೇ ಅವರೆಲ್ಲರ ಗೆಳೆತನ ನೋಡಿದ ತಕ್ಷಣ `ಸ್ನೇಹಕ್ಕೆ ಬೆಲೆಯನ್ನು ಕಟ್ಟಲಾಗುವುದಿಲ್ಲ~ ಎಂಬ ಮಾತಿಗೆ ಪುಷ್ಟಿ ದೊರೆಯುತ್ತದೆ.

ಎರಡು ವರ್ಷಗಳ ಹಿಂದಿನ ಅವರ ಪರಿಚಯ ಸ್ನೇಹಕ್ಕೆ ತಿರುಗಿದ್ದು, ಪ್ರೇಮಕ್ಕೆ ತಿರುಗಿ ಅಲ್ಲೋಲ- ಕಲ್ಲೋಲ ಸೃಷ್ಟಿಸುವ ಅಪಾಯವೂ ಇಲ್ಲ.

ವಿವಿಧೆಡೆಯಿಂದ ಬಂದು ಇಲ್ಲಿನ ಕಾಲೇಜಿನಲ್ಲಿ ಪಿಯುಸಿ ಓದಿ, ಉತ್ತಮ ಅಂಕ ಗಳಿಸಿ, ಉನ್ನತ ಶಿಕ್ಷಣದ ಕಾರಣ ದೂರವಾಗುತ್ತಿರುವ ಇವರೆಲ್ಲರ ಆ ಭೇಟಿ ಕಣ್ಣೀರ ಹನಿಗಳ ರಭಸಕ್ಕೂ, ನೆನಪುಗಳ ಮಾಧುರ್ಯಕ್ಕೂ, ದೂರವಾಗುವ ನೋವಿಗೂ, ಗಾಢ ಸ್ನೇಹ ನೀಡುವ ಸಹಜ ಖುಷಿಗೂ ಸಾಕ್ಷಿಯಾಯಿತು.

ಇದು ಹರ್ಷಿನಿ, ಅನ್ನಪೂರ್ಣ, ಅರ್ಚನಾ, ಸೌಮ್ಯ, ದಿವ್ಯ, ಕಾವ್ಯ, ನಿಖಿತಾ ಎಂಬ ಏಳು ಜನ ಯುವತಿಯರ ಹಾಗೂ ಅನಿವಾರ್ಯ ಕಾರಣಗಳಿಂದ ಅವರೊಟ್ಟಿಗೆ ಸೇರದ ಚೇತನಾ, ಹಫ್ಸಾ ಹಾಗೂ ಅಮೃತಾ ಅವರ ಸ್ನೇಹದ ಗುಣಗಾನ.

ಇವರೊಂದಿಗೆ ಅಪರ್ಣ ಎಂಬ ಯುವತಿಯೂ ಈ ವಿಶೇಷ ದಿನದ ಆಚರಣೆಯಲ್ಲಿ ಭಾಗವಹಿಸಿದ್ದು, ತಾನೂ ಇದೇ ರೀತಿಯ ಸ್ನೇಹಿತೆಯರನ್ನು ಸಂಪಾದಿಸಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದಳು.

`ನಮ್ಮ ಸ್ನೇಹ ಬಹಳ ಹಳೆಯದೇನಲ್ಲ. ಪಿಯುಸಿಯಲ್ಲಿ ಓದುತ್ತಿರು ವಾಗ, ಒಬ್ಬರ ಭಾವನೆ ಇನ್ನೊಬ್ಬರೊಂದಿಗೆ ಮಿಳಿತವಾಗುತ್ತವೆ ಎಂಬ ಕಾರಣದಿಂದ ಹುಟ್ಟಿಕೊಂಡಿದ್ದು. ಎಲ್ಲರ ಮನಸಲ್ಲೂ ಸ್ನೇಹಕ್ಕೇ ಆದ್ಯತೆ ಎಂಬ ಕಾರಣದಿಂದ ಉಳಿದಿದೆ. ಮುಂದುವರಿ ಯುತ್ತದೆ~ ಎಂಬುದು ಅರ್ಚನಾಳ ಅಂಬೋಣ.

`ಭಾವನೆಗಳನ್ನು ಹಂಚಿಕೊಳ್ಳಲು ಸ್ನೇಹಿತೆಗಿಂತ ಬೇರೆ ವ್ಯಕ್ತಿ ಇಲ್ಲ~ ಎಂಬ ಇರಾದೆ ನಮ್ಮದು. ಒಟ್ಟಿಗೆ ಓಡಾಡಿ ಕೊಂಡಿದ್ದರಿಂದ ಕಾಲೇಜಿನಲ್ಲಿ ಇತರ ರಿಂದ ಛೇಡಿಸಿಕೊಂಡರೂ, 10 ಜನರ ನಮ್ಮ ಗುಂಪು ಎಂದೂ ಅಗಲಿರಲಿಲ್ಲ. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಈಗ ಅಗಲಲೇಬೇಕಾಗಿದೆ. ಆದರೂ ಭವಿಷ್ಯದಲ್ಲಿ ಈ ಸ್ನೇಹದ ಸಹಾಯ ದೊಂದಿಗೆ ಏನನ್ನಾದರೂ ಸಾಧಿಸಬೇಕು ಎಂಬ ಗುರಿ ಇದೆ~ ಎಂದು ತಿಳಿಸುವ ಹರ್ಷಿನಿ, `ನಾವು ಡಾಕ್ಟರ್, ಎಂಜಿನಿ ಯರ್, ಕ್ಲರ್ಕ್ ಏನೇ ಆಗಲಿ. ನಮ್ಮಿಂದ ಈ ಸಮಾಜಕ್ಕೆ ಒಳ್ಳೆಯದನ್ನೇನಾದರೂ ಮಾಡುವ ಬಯಕೆ ಇದೆ. ಇದಕ್ಕೆ ನಮ್ಮೆಲ್ಲರ ಸಮ್ಮತಿಯೂ ಇದೆ~ ಎಂದು ತಿಳಿಸುತ್ತ ಇತರರಿಗೂ ಮಾದರಿ ಆಗುತ್ತಾರೆ.

ಅಮರ ಪ್ರೇಮಿಗಳಾಗಿರುವ ಲೈಲಾ- ಮಜ್ನೂ, ಹೀರ್- ರಾಂಝಾ, ಸಲೀಂ ಅನಾರ್ಕಲಿ, ರೋಮಿಯೊ- ಜ್ಯೂಲಿಯಟ್ ಅವರಂತೆ, ಸ್ನೇಹಕ್ಕಾಗಿಯೇ ಪ್ರಾಣ ತ್ಯಾಗ ಮಾಡಿ ಇತಿಹಾಸದ ಪುಟ ಸೇರಿದವರಿಲ್ಲ. ಆದರೂ, ಸ್ನೇಹ ಪ್ರೀತಿಗಿಂತಲೂ ಶ್ರೇಷ್ಠವಾದದ್ದು. ಗೆಳೆತನ ಎಂಬುದು ಪವಿತ್ರ ಸಂಬಂಧದ ಸಂಕೇತ ಎಂಬುದು ಆ ಗೆಳತಿಯರೆಲ್ಲರ ಅಭಿಪ್ರಾಯ.

“ನಮ್ಮ ಸ್ನೇಹ ಹೆಮ್ಮರವಾಗಿ ಬೆಳೆಯಲು ಕಾರಣಗಳೇ ಇಲ್ಲ. `ಹುಡುಗಿಯರ ಸ್ನೇಹ ಜತೆಗೆ ಇದ್ದಷ್ಟು ಕಾಲ~ ಎಂಬ ನಂಬಿಕೆಗೆ ಅಂಟಿಕೊಂಡವರೂ ನಾವಲ್ಲ. ಈ ಸ್ನೇಹ ಸದಾ ಹೀಗೇ ಹಸಿರಾಗಿರಬೇಕು ಎಂಬ ಆಶಯ ದೊಂದಿಗೇ ನಾವು ಒಂದಷ್ಟು ಯೋಜನೆ ಗಳನ್ನು ರೂಪಿಸಿಕೊಂಡಿದ್ದೇವೆ. ನಮ್ಮ ನಿರ್ಧಾರಗಳೂ ಅಷ್ಟೇ.

ಇತರರಿಗೆ ನೋವು ನೀಡದಂಥವು. ಬೇರೆಯವರು ನಮ್ಮ ನಡುವಿನ ಸಂಬಂಧಕ್ಕೆ ಹುಳಿ ಹಿಂಡುವುದಕ್ಕೆ ನಮ್ಮಲ್ಲಿ ಅವಕಾಶವೇ ಇಲ್ಲ. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು, ಸಮಾಜಕ್ಕೆ ಒಳಿತನ್ನು ಬಯಸುತ್ತ, ಈ ಜನ್ಮ ಸಾರ್ಥಕವಾಗಲು ಏನಾದರೂ ಸಾಧಿಸುವ ಹಟವಿದೆ” ಎಂದು ಹೇಳು ವಾಗ ಅವರ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತ್ತು.

ಇತರರ ಕೆಂಗಣ್ಣಿಗೆ ಗುರಿಯಾಗುವ ಆತಂಕದೊಂದಿಗೇ, ಪಿಸುಮಾತಿನಲ್ಲಿ ತೊಡಗುವ ಅನೇಕ ಜೋಡಿಗಳನ್ನೇ ಕಂಡಿದ್ದ ಆ ಕೆರೆಯ ಅಂಗಳ, ಸ್ನೇಹಿತೆ ಯರ ದಿನದಂದು ಹರ್ಷದ ಹೊನಲಿ ನಲ್ಲಿ ತೇಲಿದವರ ಸಂತಸಕ್ಕೆ ವೇದಿಕೆ ಯಾಯಿತು.

ಅಂದಹಾಗೆ, ಪ್ರೇಮದತ್ತ ಆಕರ್ಷಿತರಾಗಿ, ಚಿಕ್ಕ ವಯಸ್ಸಲ್ಲೇ ಪ್ರೀತಿ- ಪ್ರೇಮದ ಬಲೆಗೆ ಬಿದ್ದು ಬದುಕನ್ನೇ ನರಕ ಆಗಿಸಿಕೊಳ್ಳುವ, ಏನನ್ನೂ ಸಾಧಿಸದೆ ಉಳಿಯುವ ಅದೆಷ್ಟೋ ಯುವತಿಯರ ಮನಃಸ್ಥಿತಿಯ ಬಗ್ಗೆ ಇವರಿಗೆ ಅನುಕಂಪವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT