ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗುಳಿನ ಮೇಲೆ ನಾಳಿನ ಭವಿಷ್ಯ!

Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ಭಾರತೀಯ ಸಂಸ್ಕೃತಿಯಲ್ಲಿ ಅನ್ನಕ್ಕೆ ಇನ್ನಿಲ್ಲದ ಮಹತ್ವ. `ಅನ್ನ ದೇವರು' ಎಂದವರು ನಾವು. ಅನ್ನಪೂರ್ಣೇಶ್ವರಿಯ ಪರಿಕಲ್ಪನೆ ನಮ್ಮಲ್ಲಿದೆ. ಹೀಗಾಗಿಯೇ ದೇಶದ ಹಲವಾರು ತೀರ್ಥಕ್ಷೇತ್ರಗಳಲ್ಲಿ ಅನ್ನ ದಾಸೋಹ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.

ಕಲ್ಯಾಣ ಕ್ರಾಂತಿಯ ರೂವಾರಿ ಬಸವಣ್ಣನವರು ಕೂಡ ದಾಸೋಹಕ್ಕಾಗಿ ಮಹಾಮನೆಯನ್ನು ಕಟ್ಟಿಸಿದ್ದರು, ಜನರ ಲೌಕಿಕ ಹಾಗೂ ಆಧ್ಯಾತ್ಮಿಕ ಹಸಿವುಗಳೆರಡನ್ನೂ ತಣಿಸಲು ಯತ್ನಿಸಿದ್ದರು. ನಾವು ಚಿಕ್ಕವರಿದ್ದಾಗ ಅನ್ನವನ್ನು ಚೆಲ್ಲಬಾರದೆಂದು ಎಚ್ಚರಿಸಲಾಗುತ್ತಿತ್ತು. ಒಂದು ವೇಳೆ ಆಹಾರ ಪದಾರ್ಥಗಳು ನೆಲದ ಮೇಲೆ ಬಿದ್ದರೆ ಅದನ್ನು ಎತ್ತಿಕೊಂಡು ಕಣ್ಣಿಗೊತ್ತಿಕೊಳ್ಳುವ ಸಂಪ್ರದಾಯ ನಮ್ಮಲ್ಲಿತ್ತು. ಆದರೆ ಇಂದು?

ಮದುವೆ, ಮುಂಜಿ, ಹಬ್ಬ ಮತ್ತಿತರೆ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉಣ ಬಡಿಸುವ ಐದನೇ ಒಂದು ಭಾಗದಷ್ಟು ಆಹಾರವನ್ನು ತಿನ್ನದೆ ವ್ಯರ್ಥ ಮಾಡಲಾಗುತ್ತಿದೆ. ಇದು ನಮ್ಮ ದೇಶದ ಆಹಾರ ಮಂತ್ರಿಗಳ ಹೇಳಿಕೆ. ನಮ್ಮಲ್ಲಿ ಮದುವೆ ಊಟವೆಂದರೆ ಭೂರಿ ಭೋೀಜನವೆಂದೇ ಭಾವಿಸಲಾಗುತ್ತಿದೆ. ಪ್ರತಿ ನಿತ್ಯ ನಮ್ಮ ದೇಶದಲ್ಲಿ ಮದುವೆ ಸೇರಿದಂತೆ ಸುಮಾರು ಒಂದು ಲಕ್ಷ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮಗಳಲ್ಲಿ ಪೋಲಾಗುವ ಆಹಾರ ಪದಾರ್ಥಗಳಿಂದ ಆಯಾ ಭಾಗದಲ್ಲಿನ ಹಸಿದವರ ಹೊಟ್ಟೆ ತುಂಬಿಸಲು ಸಾಧ್ಯವಿದೆ. ಬೆಂಗಳೂರು ಮತ್ತು ಮುಂಬೈ ರೀತಿಯ ನಗರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪೋಲು ಮಾಡುವ ಆಹಾರದಿಂದ ಆಯಾ ನಗರಗಳ ಕೊಳೆಗೇರಿ ಪ್ರದೇಶಗಳ ಇಡೀ ಸಮುದಾಯಕ್ಕೆ ಊಟ ಹಾಕಬಹುದು.

ಆಹಾರದ ಕೊರತೆ, ಶಿಶು ಅಪೌಷ್ಟಿಕತೆಯ ಪೋಷಣೆ ಹಾಗೂ ಶಿಶು ಮರಣ ಸಂಬಂಧಿತ ವಿಷಯಗಳ ಬಗ್ಗೆ ಅಧ್ಯಯನ ಮಾಡುವ ಅಂತರರಾಷ್ಟ್ರೀಯ `ಆಹಾರ ನೀತಿ ಸಂಶೋಧನಾ ಸಂಸ್ಥೆ'ಯು (IFPRI)2010ರಲ್ಲಿ ಜಾಗತಿಕ ಹಸಿವಿನ ಸೂಚ್ಯಂಕ ಹೊರತಂದಿದೆ. ಈ ಪಟ್ಟಿಯಲ್ಲಿನ 84 ರಾಷ್ಟ್ರಗಳಲ್ಲಿ ಭಾರತದ ಸ್ಥಾನ 67ನೆಯದು. ಪರಿಸ್ಥಿತಿ ಹೀಗಿದ್ದರೂ ನಾವು ಆಹಾರವನ್ನು ಪೋಲು ಮಾಡುವ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಹೊಟ್ಟೆ ತುಂಬಿಸಿಕೊಳ್ಳಲು ಆಹಾರವಿಲ್ಲದೆ ಒಂದು ಹೊತ್ತಿನ ಊಟ ಮಾಡುವವರು ಒಂದೆಡೆ, ಮೋಜಿಗಾಗಿ ತಿಂದು ತೇಗುವವರು ಮತ್ತೊಂದೆಡೆ!

ಆಹಾರವನ್ನು ಪೋಲು ಮಾಡುವುದರಿಂದ ಆರ್ಥಿಕ ಅಪವ್ಯಯ ಮಾತ್ರವೇ ಆಗುವುದಿಲ್ಲ. ಅದು ಪರಿಸರದ ಮೇಲೆ ಕೂಡ ಗಂಭೀರ ದುಷ್ಪರಿಣಾಮ ಉಂಟು ಮಾಡುತ್ತದೆ. ಆಹಾರವನ್ನು ಪೋಲು ಮಾಡುವುದರಿಂದ ಆಹಾರ ಉತ್ಪಾದನೆಗೆ ಬಳಸುವ ರಾಸಾಯನಿಕ ಗೊಬ್ಬರ, ನೀರು ಹಾಗೂ ಪಿಡುಗುನಾಶಕಗಳನ್ನು ವ್ಯರ್ಥವಾಗಿ ಬಳಸಿದಂತಾಗುತ್ತದೆ. ಆಹಾರ ಸಾಗಾಣಿಕೆಗೆ ಬಳಸಿದ ಇಂಧನ ಕೂಡ ಅಪವ್ಯಯವೇ. ಚೆಲ್ಲಿದ ಆಹಾರ ಪದಾರ್ಥಗಳಿಂದ ಮತ್ತೊಂದು ಅಪಾಯವೂ ಇದೆ.

ಈ ಆಹಾರ ಕೊಳೆಯುವೆಡೆ ಮೀಥೇನ್ ಅನಿಲ ಹೆಚ್ಚು ಉತ್ಪಾದನೆ ಆಗುತ್ತದೆ. ಇದರ ಮೂಲಕ ಹವಾಮಾನ ಬದಲಾವಣೆಗೆ ಕಾರಣವಾದ ಹಾನಿಕಾರಕ ಅನಿಲವೊಂದು ವಾತಾವರಣ ಸೇರಲು ನಾವು ಕಾರಣವಾಗುತ್ತಿದ್ದೇವೆ. ಮೀಥೇನ್ ಅನಿಲವು `ಹಸಿರು ಮನೆ' ಪರಿಣಾಮ ಉಂಟು ಮಾಡುವಲ್ಲಿ ಇಂಗಾಲಕ್ಕೂ 23 ಪಟ್ಟು ಅಧಿಕ ಸಾಮರ್ಥ್ಯ ಹೊಂದಿದೆ ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ನಾವು ವ್ಯರ್ಥವಾಗಿ ಕಸದ ಗುಡ್ಡೆಗೆ ಎಸೆಯುವ ಆಹಾರದಿಂದ ಕೂಡ ಪರಿಸರಕ್ಕೆ ಹಾನಿಯಿದೆ. (ಅಮೆರಿಕದಲ್ಲಿ ಮನೆಗಳಿಂದ ಹೊರಸುರಿಯುವ ಕಸದಲ್ಲಿ ಆಹಾರ ಪದಾರ್ಥಗಳಿಂದ ಕೂಡಿದ ಸಾವಯವ ಕಸದ ಸ್ಥಾನವೇ ಎರಡನೆಯದು).

ಮೂರನೇ ಒಂದು ಪಾಲು ಪೋಲು
ಪ್ರತಿ ವರ್ಷ ಜಾಗತಿಕವಾಗಿ 230 ಕೋಟಿ ಮೆಟ್ರಿಕ್ ಟನ್ ಆಹಾರ  ಉತ್ಪಾದನೆಯಾಗುತ್ತಿದೆ. ಇದರಲ್ಲಿ ಉತ್ಪಾದನೆಯಾಗುವ 1/3ರಷ್ಟು ಆಹಾರ (ಅಂದಾಜು 130 ಕೋಟಿ ಮೆಟ್ರಿಕ್ ಟನ್) ಪೋಲಾಗುತ್ತಿದೆ. ಈ ಪೋಲಿನಲ್ಲಿ ಶ್ರೀಮಂತ ರಾಷ್ಟ್ರಗಳ ಪಾಲು 22.20 ಕೋಟಿ ಮೆಟ್ರಿಕ್ ಟನ್. ಈ ಪ್ರಮಾಣ ಸಬ್ ಸಹಾರಾ ಆಫ್ರಿಕಾ ದೇಶಗಳ ವಾರ್ಷಿಕ ನಿವ್ವಳ ಆಹಾರೋತ್ಪಾದನೆಗೆ (23 ಕೋಟಿ ಟನ್‌ಗಳು) ಸಮ.
ಇಂಗ್ಲೆಂಡಿನ ಮನೆಗಳಲ್ಲಿ ಪ್ರತಿ ವರ್ಷ 67 ಲಕ್ಷ ಮೆಟ್ರಿಕ್ ಟನ್ ಆಹಾರ ಪೋಲಾಗುತ್ತಿದೆ. ಹೀಗೆ ವ್ಯರ್ಥವಾಗುತ್ತಿರುವ ಆಹಾರದ ಪ್ರಮಾಣವು ಆ ಕುಟುಂಬಗಳು ವಾರ್ಷಿಕವಾಗಿ ಖರೀದಿಸುತ್ತಿರುವ ಪ್ರಮಾಣದ 1/3ರಷ್ಟಿರುತ್ತದೆ. ಅಂದರೆ ಅಲ್ಲಿನ ಜನ ತಾವು ಖರೀದಿಸುವ ಶೇ 32ರಷ್ಟು ಆಹಾರವನ್ನು ತಿನ್ನುವುದೇ ಇಲ್ಲ. ಅಮೆರಿಕೆಯಲ್ಲಿ ಸಹ ಪ್ರತಿ ವರ್ಷ ಅಲ್ಲಿನ ಜನ ಬಳಸುವ ಒಟ್ಟು ಆಹಾರ ಪದಾರ್ಥಗಳ ಶೇ 30ರಷ್ಟನ್ನು ಬಿಸಾಡಲಾಗುತ್ತಿದೆ. ಇದರಿಂದಾಗಿ ಈ ಆಹಾರವನ್ನು ಬೆಳೆಯಲು ಬಳಸಿದ ಶೇ 50ರಷ್ಟು ನೀರು ಕೂಡ ವ್ಯರ್ಥವಾದಂತೆಯೇ.

ಸಂಗ್ರಹ - ಸಂಸ್ಕರಣಾ ತಂತ್ರಜ್ಞಾನದ ಕೊರತೆ
ವಿಶ್ವದಲ್ಲಿ ಉತ್ಪಾದನೆಯಾಗುವ ಒಟ್ಟು ಆಹಾರ ಪದಾರ್ಥಗಳಲ್ಲಿ ಶೇ 50ರಷ್ಟು ಆಹಾರ ತಲುಪಬೇಕಾದ ಬಾಯಿಗಳನ್ನು ತಲುಪುವುದೇ ಇಲ್ಲ. 1960ರ ನಂತರ ನಾವು ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ಆದರೆ, ಪ್ರತಿ ವರ್ಷ ಐವತ್ತು ಸಾವಿರ ಕೋಟಿ ರೂಪಾಯಿ ಮೌಲ್ಯದ ಆಹಾರಧಾನ್ಯಗಳು ಮತ್ತು ತರಕಾರಿಗಳು ನಾಗರಿಕರ ಬಳಕೆಗೆ ಲಭ್ಯವಾಗದೇ ಹಾಳಾಗುತ್ತಿವೆ.

ನಮ್ಮ ದೇಶದ ಕೃಷಿ ಭೂಮಿಯಲ್ಲಿ ಬೆಳೆದ ಶೇ 40ರಷ್ಟು ಹಣ್ಣು, ತರಕಾರಿ ಮತ್ತು ಆಹಾರ ಧಾನ್ಯಗಳು ಮಾರುಕಟ್ಟೆ ತಲುಪುವ ಮುನ್ನವೇ ಹಾಳಾಗುತ್ತಿವೆ.
ಅಸಮರ್ಪಕ ಸಂಗ್ರಹ ಮತ್ತು ವಿತರಣಾ ವ್ಯವಸ್ಥೆಯಿಂದಾಗಿ ನಾವು ಪ್ರತಿ ವರ್ಷ ವ್ಯರ್ಥ ಮಾಡುತ್ತಿರುವ ಗೋಧಿಯ ಪ್ರಮಾಣ 2.10 ಕೋಟಿ ಮೆಟ್ರಿಕ್ ಟನ್. ಇದು ಆಸ್ಟ್ರೇಲಿಯಾ ದೇಶದ ಒಟ್ಟು ಗೋಧಿಯ ಉತ್ಪಾದನಾ ಪ್ರಮಾಣಕ್ಕೆ ಸಮ. ನೆರೆಯ ಪಾಕಿಸ್ತಾನದಲ್ಲಿ ಈ ರೀತಿ ವ್ಯರ್ಥವಾಗುತ್ತಿರುವ ಆಹಾರ ಧಾನ್ಯಗಳ ಪ್ರಮಾಣ ವಾರ್ಷಿಕ 32 ಲಕ್ಷ ಮೆಟ್ರಿಕ್ ಟನ್‌ಗಳು.

ಅಂದರೆ ದೇಶದ ಒಟ್ಟು ಉತ್ಪಾದನೆಯ ಶೇ 16ರಷ್ಟು. ಹಾಗೆಯೇ ನಾವು ಹಾಳು ಮಾಡುತ್ತಿರುವ ಹಣ್ಣು ಮತ್ತು ತರಕಾರಿಗಳ ಪ್ರಮಾಣ ಇಂಗ್ಲೆಂಡ್ ದೇಶದ ಇಡೀ ವರ್ಷದ ಒಟ್ಟು ಬಳಕೆಯ ಪ್ರಮಾಣಕ್ಕೆ ಸಮ. ಅನಾನಸ್, ಮಾವು ಹಾಗೂ ಇತರೆ ಹಣ್ಣುಗಳು ಮತ್ತು ತರಕಾರಿಗಳನ್ನು ತುಂಬಿದ ಟ್ರಕ್‌ಗಳು ದಕ್ಷಿಣ ಭಾರತದಿಂದ ವ್ಯತಿರಿಕ್ತ ತಾಪಮಾನದ ವಾತಾವರಣದಲ್ಲಿ ಉತ್ತರ ಭಾರತದ ದೆಹಲಿಯಂತಹ ನಗರಗಳನ್ನು ತಲುಪುವ ವೇಳೆಗೆ ಅವುಗಳಲ್ಲಿ ಲೋಡ್ ಆಗಿರುವ ಗಣನೀಯ ಪ್ರಮಾಣದ ಆಹಾರ ಪದಾರ್ಥಗಳು ಹಾಳಾಗಿರುತ್ತವೆ. ನಾವು ಬೆಳೆಯುವ ಹಣ್ಣು ಮತ್ತು ತರಕಾರಿಗಳ ಶೇ 40ರಷ್ಟು ಭಾಗ ಈ ರೀತಿ ಬೆಳೆಗಾರ ಮತ್ತು ಬಳಕೆದಾರರ ನಡುವೆ ಸೂಕ್ತ ಸಂಗ್ರಹಣಾ ಸೌಲಭ್ಯಗಳಿಲ್ಲದೆಯೇ ವ್ಯರ್ಥವಾಗಿ ಹೋಗುತ್ತಿವೆ.

ವ್ಯತಿರಿಕ್ತ ಹವಾಮಾನದಲ್ಲಿ ಆಹಾರೋತ್ಪನ್ನಗಳನ್ನು ಸಾಗಾಣಿಕೆ ಮಾಡುವ ವಾಹನಗಳಲ್ಲಿ ಯಾವುದೇ ವೈಜ್ಞಾನಿಕ ಸಂಗ್ರಹಣಾ ವ್ಯವಸ್ಥೆ ಇಲ್ಲದಿರುವುದು ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ.
ಅಭಿವೃದ್ಧಿಶೀಲ ದೇಶಗಳಲ್ಲಿ ಕೊಯಿಲು, ಸಾಗಣೆ ಮತ್ತು ಸಂಗ್ರಹಣೆ ಮುಂತಾದ ಪ್ರಾಥಮಿಕ ಹಂತಗಳಲ್ಲೇ ಆಹಾರ ಧಾನ್ಯ, ಹಣ್ಣು-ತರಕಾರಿಗಳು ಪೋಲಾಗುತ್ತಿರುವುದು ಗುಟ್ಟಿನ ವಿಷಯವೇನಲ್ಲ.. ಆಹಾರ ಪದಾರ್ಥಗಳ ಸಂಸ್ಕರಣಾ ತಂತ್ರಜ್ಞಾನ ಸಾಮಾನ್ಯ ಕೃಷಿಕನ ಕೈಗೆಟುಕದಿರುವುದು ಇದಕ್ಕೆ ಕಾರಣ.

ಈ ಎಲ್ಲ ಅಂಶಗಳನ್ನು ಪರಿಗಣಿಸಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಕೃಷಿ ತಜ್ಞ ಡಾ. ನಾರ್ಮನ್ ಬೊರ್‌ಲಾಗ್ ಹೇಳುತ್ತಾರೆ- “ವಿಶ್ವಶಾಂತಿಯನ್ನು ಹಸಿದ ಹೊಟ್ಟೆಗಳು ಮತ್ತು ಮಾನವ ಸಂಕಷ್ಟಗಳ ಮೇಲೆ ಸಾಕಾರಗೊಳಿಸಲು ಸಾಧ್ಯವಾಗದು. ರೈತರಿಗೆ ಆಧುನಿಕ ತಂತ್ರಜ್ಞಾನವನ್ನು ನಿರಾಕರಿಸುವುದು ವಿಶ್ವವನ್ನು ವಿನಾಶದೆಡೆಗೆ ತಳ್ಳಿದಂತೆ. ಶಾಂತಿಯ ಬಿಕ್ಕಟ್ಟು ನಮ್ಮಂತಹ ಕೆಲವರು ಭಾವಿಸಿದಂತೆ ಪರಿಸರ ವಿನಾಶದಿಂದ ಸಂಭವಿಸುತ್ತದೆ ಎನ್ನುವುದಕ್ಕಿಂತ ಹಸಿವು, ಸಾಮಾಜಿಕ ಹಾಗೂ ರಾಜಕೀಯ ಗೊಂದಲಗಳಿಂದ ಉಂಟಾಗಲಿದೆ”.

ಬೊರ್‌ಲಾಗ್‌ರ ವಿವೇಕದ ಮಾತುಗಳನ್ನು ವ್ಯಾಪಾರಿ ಸಂಸ್ಕೃತಿಯ ದೇಶಗಳಿಗೆ- ಕಂಪನಿಗಳಿಗೆ ಮನದಟ್ಟು ಮಾಡಿಸುವುದು ಹೇಗೆ?
ಚೀನಾ ಮತ್ತು ಭಾರತದಂತಹ ದೇಶಗಳಲ್ಲಿ ಜಾಗತಿಕ ಆರ್ಥಿಕ ಸುಧಾರಣೆಗಳ ಫಲವಾಗಿ ನಾಗರಿಕರ ತಲಾದಾಯದಲ್ಲಿ ಹೆಚ್ಚಳವಾಗಿದೆ. ಆಹಾರದ ಬಳಕೆಯ ಪ್ರಮಾಣದಲ್ಲಿ ಕೂಡ ಗಣನೀಯ ಏರಿಕೆಯಾಗಿದೆ. ಅದರಲ್ಲೂ ಕಾಳು, ಹಣ್ಣು, ಮೊಟ್ಟೆ, ಮಾಂಸ ಮತ್ತು ಡೇರಿ ಉತ್ಪನ್ನಗಳ ಬಳಕೆಯು ಆಹಾರ ಧಾನ್ಯಗಳ ಬಳಕೆಗಿಂತ ಹೆಚ್ಚಿನ ಏರು ಗತಿಯಲ್ಲಿ ಸಾಗಿರುವುದನ್ನು ವಿಶ್ವಬ್ಯಾಂಕಿನ ಸಮೀಕ್ಷೆ ಬೊಟ್ಟು ಮಾಡಿ ತೋರಿಸಿದೆ. ಚೀನಾದಲ್ಲಿ ಮಾಂಸದ ತಲಾ ಬಳಕೆ ಹತ್ತು ವರ್ಷಗಳ ಹಿಂದೆ ಇದ್ದುದಕ್ಕಿಂತ 3 ಪಟ್ಟು ಹೆಚ್ಚಾಗಿದೆ. ಈ ಏರಿಕೆಯ ಜೊತೆಗೆ ಆಹಾರದ ಅಪವ್ಯಯವೂ ಹೆಚ್ಚುತ್ತಿದೆ.

ವಿಶ್ವದಾದ್ಯಂತ ಹಿಡಿಯಲಾಗುವ 10ರಿಂದ 13 ಕೋಟಿ ಮೆಟ್ರಿಕ್ ಟನ್‌ಗಳಷ್ಟು ಮೀನಿನಲ್ಲಿ ವ್ಯರ್ಥವಾಗಿ ಬಿಸಾಡಲಾಗುವ ಮೀನಿನ ಪ್ರಮಾಣ 3 ಕೋಟಿ ಮೆಟ್ರಿಕ್ ಟನ್‌ಗಳು. ಅಂದರೆ ಬಹು ಮುಖ್ಯ ಪ್ರೋಟೀನ್‌ನ ಮೂಲವೆಂದು ಭಾವಿಸಲಾದ ಮತ್ಸ್ಯ ಮೂಲ ಆಹಾರದ 1/4ರಷ್ಟನ್ನು  ಅಗತ್ಯವಿರುವವರ ಬಾಯಿಗೆ ತಲುಪಿಸದೆ ಹಾಳು ಮಾಡುತ್ತಿದ್ದೇವೆ. ಶೇ 20ರಷ್ಟು ಮಾಂಸ ಹಾಗೂ ಡೇರಿ ಉತ್ಪನ್ನಗಳು ಬಳಕೆದಾರರನ್ನು ತಲುಪದೆಯೇ ಮಧ್ಯದಲ್ಲೇ ವ್ಯರ್ಥವಾಗುತ್ತಿವೆ. ಮಾಂಸ ಹಾಗೂ ಡೇರಿ ಉತ್ಪನ್ನಗಳನ್ನು ತಯಾರಿಸಲು ಹೇರಳ ಪ್ರಮಾಣದಲ್ಲಿ ಬಳಸುವ ನೀರು, ಪಶು ಆಹಾರ ಹಾಗೂ ಈ ಪದಾರ್ಥಗಳ ಸಾಗಾಣಿಕೆಗಾಗಿ ಸುಡುವ ಇಂಧನ- ಇವುಗಳನ್ನೆಲ್ಲ ಲೆಕ್ಕ ಹಾಕಿದರೆ ಪರಿಸರಕ್ಕೆ ನಾವೆಷ್ಟು ಹಾನಿ ಮಾಡುತ್ತಿದ್ದೇವೆ ಎಂಬುದರ ಅರಿವಾದೀತು.

ಸಂಸ್ಕರಣೆಯ ಪಾರಂಪರಿಕ ವಿಧಾನಗಳು
ಈ ವರ್ಷದ `ವಿಶ್ವ ಪರಿಸರ ದಿನಾಚರಣೆ'ಯ ಆತಿಥೇಯ ರಾಷ್ಟ್ರ ಮಂಗೋಲಿಯ. ಅಲ್ಲಿ ಪರಂಪರಾನುಗತವಾಗಿ ಅದರದೇ ಆದ ಆಹಾರ ಸಂರಕ್ಷಣೆಯ ಕೌಶಲಗಳು ಬಹಳ ಹಿಂದಿನಿಂದಲೂ ಬಳಕೆಯಲ್ಲಿವೆ. ಮಂಗೋಲಿಯಾದ ದಾಳಿಕೋರ ದೊರೆ ಚಂಗೀಸ್‌ಖಾನನ ಸೈನ್ಯದಲ್ಲಿದ್ದ ಆಹಾರ ಪರಿಣಿತರು ಒಂದು ಹಸುವಿನ ಮಾಂಸವನ್ನು ಒಂದು ಕೈ ಹಿಡಿಯಲ್ಲಿ ತುಂಬಿಕೊಳ್ಳಬಹುದಾದಷ್ಟು ಪ್ರಮಾಣಕ್ಕೆ ಸಾಂದ್ರೀಕರಿಸುವಂತಹ ಅದ್ಭುತ ಆಹಾರ ಸಂರಕ್ಷಣಾ ಕೌಶಲಗಳನ್ನು ಹೊಂದಿದ್ದರು.

ಹೀಗಾಗಿ ಆತನ ಸೈನ್ಯವು ಯಾವುದೇ ಆಹಾರ ಸರಬರಾಜಿಲ್ಲದೆಯೇ ತಾಯ್ನೊಡಿನಿಂದ ಬಹುದೂರ ಬಹುಕಾಲದವರೆಗೆ ಹೋಗಿ ಬರುವ ಸಾಮರ್ಥ್ಯ ಪಡೆದಿತ್ತು. ಆಹಾರದ ಅವಶ್ಯಕತೆ ಬಿದ್ದಾಗ ಸೇನೆ ತನ್ನ ಜತೆ ಕೊಂಡೊಯ್ದಿದ್ದ ಈ ಸಾಂದ್ರೀಕೃತ ಹಸುವಿನ ಮಾಂಸವನ್ನು ಬಿಸಿ ನೀರಿಗೆ ಹಾಕಿ ಅತ್ಯಂತ ಪುಷ್ಟಿದಾಯಕವಾದ ಸೂಪ್ ಅನ್ನು ತಯಾರಿಸಿಕೊಳ್ಳುತ್ತಿತ್ತು. ಇದು ಪ್ರಾಚೀನ ಮಂಗೋಲಿಯದಲ್ಲಿ ಬಳಕೆಯಲ್ಲಿದ್ದ ಹಲವು ಆಹಾರ ಸಂಸ್ಕರಣೆಯ ಕೌಶಲಗಳಲ್ಲಿ ಒಂದು.

ಐಸ್‌ಲ್ಯಾಂಡ್‌ನಲ್ಲಿ ಮೀನನ್ನು ನೆಲದಲ್ಲಿ ಹೂತು, ಬೇಕಾದಾಗ ತೆಗೆದು ಉಪಯೋಗಿಸುತ್ತಾರೆ. ಹಾಗೆಯೇ ನಮ್ಮ ಗ್ರಾಮಾಂತರ ಪ್ರದೇಶಗಳಲ್ಲಿ ಹಿಂದೆ ಮಾಂಸದಿಂದ `ಉಪ್ಪುಖಂಡ' ಹಾಕಿ ಇಟ್ಟುಕೊಂಡು ಅದನ್ನು ಬಹಳ ದಿನಗಳವರೆಗೆ ಸಂರಕ್ಷಿಸಿ ಬಳಸಲಾಗುತ್ತಿತ್ತು. ಇವು ಯಾವುದೇ ರೆಫ್ರಿಜರೇಟರ್, ಶೈತ್ಯಾಗಾರಗಳ ಅಗತ್ಯ ಇಲ್ಲದೆಯೇ ಆಹಾರ ಸಂಸ್ಕರಣೆ ಹಾಗೂ ಸಂಗ್ರಹಣೆ ಮಾಡುವ ಪರಿಸರ ಸ್ನೇಹಿ ವಿಧಾನಗಳಾಗಿದ್ದವು. ಆಯಾ ಪ್ರದೇಶಗಳಿಗೆ ಹಾಗೂ ಸಮುದಾಯಗಳಿಗೆ ಸೂಕ್ತವೆನಿಸಬಹುದಾದ ಇಂತಹ ಪರಂಪರಾನುಗತವಾದ ಜ್ಞಾನವನ್ನು ಪುನರುಜ್ಜೀವನಗೊಳಿಸಿ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.

ಆಹಾರ ಕೊರತೆಯ ಸಮಸ್ಯೆಗಳ ನಡುವೆಯೇ ಭಾರತದಂತಹ ತೃತೀಯ ಜಗತ್ತಿನ ರಾಷ್ಟ್ರಗಳ ನಿವಾಸಿಗಳು ಕೂಡ ಆಹಾರ ಪೋಲು ಮಾಡುವ ವಿಷಯದಲ್ಲಿ ಅಮೆರಿಕ ಮತ್ತು ಯೂರೋಪಿನ ದೇಶಗಳೊಡನೆ ಸ್ಪರ್ಧೆಗೆ ಇಳಿದಂತೆ ತೋರುತ್ತಿದೆ. ಜಗತ್ತಿನಾದ್ಯಂತ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿರುವ ಸುಮಾರು 87 ಕೋಟಿ ಜನರಲ್ಲಿ ಶೇ 35ರಷ್ಟು ಮಂದಿ ಭಾರತ, ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾಗಳನ್ನು ಒಳಗೊಂಡ ದಕ್ಷಿಣ ಏಷ್ಯಾಕ್ಕೆ ಸೇರಿದವರು ಎಂಬುದು ಗಮನಾರ್ಹ. ಆದಾಗ್ಯೂ ಇಡೀ ಜೀವನದಲ್ಲಿಗಳಿಸಿದ ತಮ್ಮೆಲ್ಲಾ ಸಂಪತ್ತನ್ನು ಮಗನ ಅಥವಾ ಮಗಳ ಮದುವೆಗೆ ಅದ್ದೂರಿಯಾಗಿ ಖರ್ಚು ಮಾಡಬೇಕೆನ್ನುವ ವಿಚಿತ್ರ ಮನಸ್ಥಿತಿ ಇಲ್ಲಿನವರದ್ದು.

ತುತ್ತು ಕೂಳಿಗೂ ಕಷ್ಟಪಡುವ ಮಂದಿ ಸಮಾರಂಭಗಳಿಗೆ ದುಂದು ವೆಚ್ಚ ಮಾಡಲು ಹಿಂಜರಿಯುವುದಿಲ್ಲ. ಉಳ್ಳವರ ಕತೆ ಕೇಳುವಂತೆಯೇ ಇಲ್ಲ.

ಜರ್ಮನಿಯ ರೆಸ್ಟೋರೆಂಟ್‌ಗಳಲ್ಲಿ ತಮಗೆ ಬೇಕಾದಷ್ಟು ಆಹಾರಕ್ಕೆ ಮಾತ್ರ ಆರ್ಡರ್ ಮಾಡಿ ತರಿಸಿಕೊಂಡು ತಿನ್ನಬೇಕು. ತಟ್ಟೆಯಲ್ಲಿ ಆಹಾರ ಪದಾರ್ಥಗಳನ್ನು ತಿನ್ನದೆಯೇ ಬಿಟ್ಟರೆ ಅದಕ್ಕೆ ದಂಡ ತೆರಬೇಕಾಗುತ್ತದೆ. ಹಣ ನಿಮ್ಮದಿರಬಹುದು, ಆದರೆ ಸಂಪನ್ಮೂಲಗಳು ಸಮಾಜಕ್ಕೆ ಸೇರಿದವುಗಳು; ಜಗತ್ತಿನಲ್ಲಿ ಹಲವು ಮಂದಿ ಆಹಾರದ ಕೊರತೆ ಎದುರಿಸುತ್ತಿರುವಾಗ ನೀವು ಆಹಾರವನ್ನು ವ್ಯರ್ಥ ಮಾಡಲು ಯಾವುದೇ ಕಾರಣಗಳಿಲ್ಲ ಎನ್ನುವ ಧೋರಣೆ ಅಲ್ಲಿದೆ.

ಇದು ಎಲ್ಲರ ಧೋರಣೆ, ಆಚರಣೆ ಆಗಬೇಕು. ಪ್ರತಿ ಸಲ ತಟ್ಟೆಯಲ್ಲಿ ಅನ್ನವಿಟ್ಟುಕೊಂಡು ಉಣ್ಣುವಾಗ ನಮ್ಮೆಲ್ಲರ ಅಂತಃಸಾಕ್ಷಿಯನ್ನು ಈ ಪ್ರಜ್ಞೆ ಕಾಡುವಂತಾಗಬೇಕು.

ಯೋಚಿಸಿ - ಸೇವಿಸಿ - ಉಳಿಸಿ
ಜೂನ್ 5 `ವಿಶ್ವ ಪರಿಸರ ದಿನ'. ಪ್ರಸ್ತುತ ಮನುಕುಲಕ್ಕೆ ಅಗತ್ಯವಾದ ಸಾಕಷ್ಟು ಆಹಾರ ಉತ್ಪಾದನೆಯಾಗುತ್ತಿದ್ದರೂ ಕೂಡ ಅಸಮರ್ಪಕ ನಿರ್ವಹಣೆಯಿಂದಾಗಿಯೇ ಆಹಾರದ ಕೊರತೆ ನಮ್ಮನ್ನು ಕಾಡುತ್ತಿದೆ.

ಇದನ್ನು ಮನಗಂಡು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಸಂಘಟನೆಯು (ಖಿಘೆಉ) ಈ ವರ್ಷದ `ವಿಶ್ವ ಪರಿಸರ ದಿನಾಚರಣೆ'ಯನ್ನು `ಯೋಚಿಸಿ- ಸೇವಿಸಿ- ಉಳಿಸಿ' ಎಂಬ ಧ್ಯೇಯ ವಿಷಯದೊಡನೆ ಆಚರಿಸುತ್ತಿದೆ. ಆಹಾರ ಪೋಲು ಮಾಡುವುದರ ಹಾಗೂ ಅನಗತ್ಯ ಆಹಾರ ಸೇವನೆ ವಿರುದ್ಧ ಜಾಗೃತಿ ಮೂಡಿಸಿ, ಅವಶ್ಯಕವಾದ ಸಮತೋಲನ ಆಹಾರ ಸೇವನೆ ಬಗ್ಗೆ ಅರಿವು ಮೂಡಿಸಲು ವಿಶ್ವದಾದ್ಯಂತ ವ್ಯಾಪಕ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT