ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗೋಚರದೀಚೆ ವಾಸ್ತವದ ಅನಾವರಣ

Last Updated 4 ಜನವರಿ 2011, 8:40 IST
ಅಕ್ಷರ ಗಾತ್ರ

ಅಗೋಚರವಾದ ಪದರುಗಳ ಒಂದರ ಮೇಲೊಂದು ಹರಡಿಕೊಂಡಿರುವ ಚಿತ್ರಗಳಿವು. ಚಿತ್ರದ ಮುಖ್ಯ ವಸ್ತುವಿನತ್ತ ನೋಡುವ ಮೊದಲು ಇದನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ಕಾಣುವಂತೆ ಹೆಣೆದುಕೊಂಡಿವೆ. ಶಿಸ್ತಿನ ಗೆರೆಗಳು, ವರ್ಣಗಳು, ಆಕಾರಗಳು ಪ್ರಿಸಂ (ಮುಪ್ಪಟೆಯ ಘನಾಕೃತಿ)ಯ ಆಳ ಪಡೆದುಕೊಂಡಿರುವುದು ವಿಶೇಷ. ವಿರೂಪಗಳಿಲ್ಲ, ಒಡಕುಗಳಿಲ್ಲ, ಬಿರುಕುಗಳೂ ಇಲ್ಲ. ಆದರೂ ಬೇರ್ಪಡುವ ಹಾಗೆ ತೋರುವ ವರ್ತುಲ ಸ್ತಂಭಾಕೃತಿಯ ನೋಟಗಳು ಕೊನೆಯಿಲ್ಲದ ಸ್ಪಷ್ಟತೆಯತ್ತ ಎಳೆದಿವೆ.

ಹೀಗೆ ದಿಟ್ಟಿಸಿ ನೋಡುತ್ತ ಇದ್ದರೆ ಕ್ಯಾನ್ವಾಸ್ ಪೂರಾ ಪಾರದರ್ಶಕ ನೀರಿನಂತೆ ಕಾಣುತ್ತದೆ. ಅಲಂಕೃತ ವಿವರಗಳನ್ನು ಹಾಗೆಯೇ ಅರ್ಥೈಸದೆ ಅನ್ವಯಾನುಸಾರ ನಿರುಕಿಸುವುದು ಸಾಧ್ಯವಾಗುತ್ತದೆ. ಆಕೃತಿ ಮತ್ತು ವಸ್ತುವಿಷಯದ ಮಧ್ಯೆ ವೈರುಧ್ಯಗಳಿಲ್ಲ. ಇದು ಕಲಾವಿದ ಅಲೋಕ್ ಚಕ್ರವರ್ತಿಯವರ ಕಲೆಯ ವಿಶೇಷ.

 ಅಲೋಕ್ ಅವರದು ಪರಿಸರ ಮಾಲಿನ್ಯ ಮತ್ತು ಜಗತ್ತಿನ ತಾಪಮಾನದ ವಿರುದ್ಧದ ನಿಲುವು. ಯಥಾರ್ಥ ನಿರ್ಮಿತಿಯ ಹಾದಿಯನ್ನವರು ಕ್ರಮಿಸುತ್ತಾರೆ. ಗಿಡ, ಮರ, ಅದರಲ್ಲೂ ಪ್ರಧಾನವಾಗಿ ಎಲೆಗಳ ಜಗವನ್ನು ಅನಾವರಣಗೊಳಿಸಿದ್ದಾರೆ. ನಿಸರ್ಗವನ್ನು ಪ್ರಮುಖವಾಗಿ ಕೇಂದ್ರೀಕರಿಸಿದ ಜಾಣ್ಮೆಯ ಚೌಕಟ್ಟುಗಳು ಅವರ ಕಲೆಯಲ್ಲಿ ಮೈದಳೆದಿವೆ. ನಿಸರ್ಗವೆಲ್ಲ ತಾಜಾ ಸುಂದರ ರೂಪದಲ್ಲಿ ಎದ್ದುಬಂದಿದೆ.

ಮಾನವಾಕೃತಿಗಳೇನಿದ್ದರೂ ಕಾಷ್ಠಶಿಲ್ಪಗಳಂತೆ. ಆಳ ಇನ್ನೂ ಆಳ, ಮತ್ತೂ ಆಳಕ್ಕೆ ತಲುಪುವ ಅದೇ ವಸ್ತುವಿಷಯ ಕಡೆಗೆ ಹೂರಣವಾಗುವ ಪರಿ ಬೆರಗು ಮೂಡಿಸುತ್ತದೆ. ಹೌದೊ ಅಲ್ಲವೊ ಎನ್ನುವಂತೆ ಜ್ಯಾಮಿತಿಯ ಗೆರೆಗಳು ರಮಿಸುವ ಮೊನಚು ಪಡೆದಿವೆ.

ಮಗುವಿನಂತಹ ವರ್ಣಪಟಲ ವೈಯಕ್ತಿಕ ಅಭಿವ್ಯಕ್ತಿಯಾಗಿದೆ. ಮೀನಾಕ್ಷಿಗಳೂ ಮೀನಪರ್ಣಗಳೂ ಐಡೊಯೊಗ್ರಾಫಿಕ್ ಫಿಕ್ಸೇಶನ್ ಎನಿಸಿದರೂ ತಾಳಬದ್ಧ ಪ್ರದರ್ಶನದಿಂದಾಗಿ ಅಲೆ ಅಲೆಯಾಗಿ ಜೀವಂತವಾಗಿ ತೋರುವ ಪರಿ ವಿಸ್ಮಯ. ಅಗೋಚರವಾದ ವಾಸ್ತವ ಜಗದ ಪದರ ಕಾಣಿಸುವ ಮೊದಲು ಅಲ್ಲಿನ ಹಲವಾರು ದೃಗ್ಗೋಚರ ಪದರಗಳನ್ನು ಹಾದು ಹೋಗಬೇಕು. ಆಗಲೇ ಜಾಣ್ಮೆಯ ಒಳಾರ್ಥ ತೋರುತ್ತದೆ.

 ವರ್ಷದ  ಮೊದಲ ದಿನದಿಂದ ಆರಂಭವಾಗಿರುವ ‘ಬಿಕಾನ್ ಆಫ್ ನೇಚರ್’ನಲ್ಲಿ ಅಲೋಕ್ ಚಕ್ರವರ್ತಿಯವರ ಪೇಂಟಿಂಗ್‌ಗಳ ಪ್ರದರ್ಶನ ಶುಕ್ರವಾರ ದವರೆಗೆ ನಡೆಯಲಿದೆ.
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT