ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ಗದ ಐಫೋನ್‌ ಸ್ಪರ್ಧೆ!

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್‌ನ ಆಧಿಪತ್ಯ ಮುರಿಯಲು ಆಪಲ್‌, ಇತ್ತೀಚೆಗೆ ಎರಡು ಹೊಸ ಐಫೋನ್‌ಗಳನ್ನು  ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಾಂಪ್ರದಾಯಿಕ ಶೈಲಿಗಿಂತ ಭಿನ್ನವಾದ ವಿನ್ಯಾಸ ಹೊಂದಿರುವ ಮತ್ತು ವರ್ಣ­ರಂಜಿತ­ವಾಗಿರುವ ಈ ಹ್ಯಾಂಡ್‌ಸೆಟ್‌ಗಳಲ್ಲಿ ಒಂದನ್ನು ಪ್ಲಾಸ್ಟಿಕ್‌ನಿಂದ ಮಾಡ­ಲಾಗಿದೆ. ಇನ್ನೊಂದಕ್ಕೆ ವಿಶ್ವದರ್ಜೆಯ ಸ್ಮಾರ್ಟ್‌ಫೋನ್‌ ನಿರ್ಮಾಣ ಮಾನ­ದಂಡ (ಗೋಲ್ಡ್ ರೇಟಿಂಗ್‌) ಅನುಸರಿಸ­ಲಾಗಿದೆ. ಬಳಕೆದಾರರ ಬೆರಳಮುದ್ರೆ ಗುರು­ತಿಸುವ ತಂತ್ರಜ್ಞಾನವೂ ಇದ­ರಲ್ಲಿದೆ. ಇವೆರಡು ಹ್ಯಾಂಡ್‌­ಸೆಟ್‌­ಗಳನ್ನು ಎರಡು ಪ್ರತ್ಯೇಕ ವರ್ಗದ ಗ್ರಾಹಕ­ರಿಗಾಗಿ ಅಭಿವೃದ್ಧಿಪಡಿಸಲಾಗಿದೆ.

ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಪಲ್‌ ‘ಐಫೋನ್‌–5ಸಿ‘ ಮತ್ತು ‘ಐಫೋನ್‌–5ಎಸ್‌’ ಎಂಬ ಹೆಸರಿನ ಈ ಎರಡು ಹ್ಯಾಂಡ್‌­ಸೆಟ್‌ಗಳು ಮಾರುಕಟ್ಟೆಗೆ ಬಿಡುಗಡೆಗೊಂಡಿವೆ.

ಅಗ್ಗದ ಐಫೋನ್‌–5ಸಿ
‘ಐಫೋನ್‌–5ಸಿ’ ಪಂಚ ವರ್ಣಗಳಲ್ಲಿ ಲಭ್ಯವಿದೆ. ಹಸಿರು, ನೀಲಿ, ಹಳದಿ, ಗುಲಾಬಿ ಮತ್ತು ಬಿಳಿ ಬಣ್ಣಗಳಲ್ಲಿರುವ ಈ ಹ್ಯಾಂಡ್‌ಸೆಟ್‌ ಅನ್ನು ಆಪಲ್‌ನ ‘ಸಿಇಒ’ ಟಿಮ್‌ ಕುಕ್‌, ‘ಹೆಚ್ಚು ಮೋಜು –ಹೆಚ್ಚು ವರ್ಣರಂಜಿತ’ ಎಂದು ಬಣ್ಣಿಸಿ­ದ್ದಾರೆ.

8 ಮೆಗಾಪಿಕ್ಸಲ್‌ ಕ್ಯಾಮೆರಾ ಮತ್ತು 4 ಇಂಚಿನ ರೆಟಿನಾ ಡಿಸ್‌ಪ್ಲೆ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಆಪಲ್‌ನ ‘ಎ–6’ ಚಿಪ್‌ ಕಾರ್ಯನಿರ್ವ­ಹಣೆ ಸಾಮರ್ಥ್ಯ ಹೊಂದಿದೆ. ಲೈವ್‌ ಫೋಟೊ ಫಿಲ್ಟರ್‌ ಸೇರಿದಂತೆ ಹೊಸ ತಲೆಮಾರಿನ ಹಲವು ವಿಶೇಷತೆಗಳೂ ಇದರಲ್ಲಿವೆ. ಸದ್ಯ 16 ಗಿಗಾಬೈಟ್‌ (ಜಿ.ಬಿ) ಸಾಮರ್ಥ್ಯದ ‘5ಸಿ’ ಮಾದರಿ ಬೆಲೆ 99 ಡಾಲರ್‌(ಅಂದಾಜು ₨6 ಸಾವಿರ). 32 ಜಿ.ಬಿ ಸಾಮರ್ಥ್ಯದ ಹ್ಯಾಂಡ್‌­­ಸೆಟ್‌ ಎರಡು ವರ್ಷದ ವಯರ್‌­ಲೆಸ್‌ ಕರಾರಿನ ಜತೆ 199 ಡಾಲರ್‌­ಗಳಿಗೆ ಲಭಿಸುತ್ತದೆ.

‘ಅಮೆರಿಕ ಮತ್ತು ಯೂರೋಪ್‌ ಮಾರುಕಟ್ಟೆಯಲ್ಲಿ ಗ್ರಾಹಕರು ದುಬಾರಿ ಬೆಲೆ ತೆತ್ತು ಐಫೋನ್ ಖರೀದಿಸುತ್ತಾರೆ. ಆದರೆ, ಅಗ್ಗದ ದರದಲ್ಲಿ ಆಪಲ್‌  ಹ್ಯಾಂಡ್‌­ಸೆಟ್‌ ಖರೀದಿಸಲು ಕಾತರಿ­ಸುತ್ತಿರುವ ದೇಶಗಳ ಗ್ರಾಹಕರಿಗಾಗಿ, ವಿಶೇಷವಾಗಿ ಚೀನಾ, ಭಾರತದಂತಹ ಪ್ರವರ್ಧ­ಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳನ್ನು ಗಮನದಲ್ಲಿಟ್ಟು­ಕೊಂಡು ಆಪಲ್‌ ‘5ಸಿ’ ಬಿಡುಗಡೆ­ಮಾಡಿದೆ  ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಐಫೋನ್‌ 5ಎಸ್‌
‘ಐಫೋನ್‌ 5ಎಸ್’ ಅಭಿವೃದ್ಧಿಯಲ್ಲಿ ವಿಶ್ವದರ್ಜೆಯ ಮಾನದಂಡ ಅನುಸರಿ­ಸಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯಂತ ಸುಧಾರಿತ ತಂತ್ರಜ್ಞಾನ ಮತ್ತು ಗುಣವಿಶೇಷಗಳಿರುವ ಹ್ಯಾಂಡ್‌ಸೆಟ್‌ ಎಂಬ ಹೆಗ್ಗಳಿಕೆಯೂ ಇದರದ್ದು. ‘ಇಂಥ­ದೊಂದು ಸ್ಮಾರ್ಟ್‌ಫೋನ್‌ ಇದುವರೆಗೆ ಮಾರುಕಟ್ಟೆಗೆ ಬಿಡುಗಡೆ­ಗೊಂಡಿಲ್ಲ’ ಎನ್ನುತ್ತಾರೆ ಆಪಲ್‌ನ ಮಾರುಕಟ್ಟೆ ಉಪಾಧ್ಯಕ್ಷ ಫಿಲ್‌ ಷಿಲ್ಲರ್‌.

ಚಿನ್ನ, ಬೆಳ್ಳಿ ಮತ್ತು ಸ್ಪೇಸ್‌ ಗ್ರೇ ಬಣ್ಣಗಳಲ್ಲಿರುವ ಐಫೋನ್‌–5ಎಸ್‌ ಆಪಲ್‌ನ ಹೊಸ ‘ಎ–7’ ಚಿಪ್‌ ಕಾರ್ಯ­ನಿರ್ವಹಣೆ ಸಾಮರ್ಥ್ಯ ಹೊಂದಿದೆ. ಎ–7 ಚಿಪ್‌ ಎ–6 ಗಿಂತಲೂ ಎರಡು ಪಟ್ಟು ಹೆಚ್ಚಿನ ವೇಗ ಹೊಂದಿದೆ ಎನ್ನುವುದು ಇಲ್ಲಿ ಗಮನಿ­ಸಬೇಕಾದ ಅಂಶ.

ಆರೋಗ್ಯ ಮತ್ತು ಫಿಟ್‌ನೆಸ್‌ಗೆ ಸಂಬಂಧಿಸಿದಂತಹ ಹಲವು ಅಪ್ಲಿಕೇ­ಷನ್ಸ್‌­ಗಳು(ಇನ್‌ಬಿಲ್ಟ್‌) ಇದರಲ್ಲಿವೆ. ‘ಅಮೆರಿಕ, ಯೂರೋಪ್‌ನಲ್ಲಿ ಈ ಅಪ್ಲಿಕೇಷನ್ಸ್‌ಗಳು ಜನರ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿವೆ. ದಿನ ನಿತ್ಯದ ವ್ಯಾಯಾಮದ ಮೇಲೆ ನಿಗಾ ವಹಿಸಲು, ಮಧುಮೇಹ, ರಕ್ತದೊತ್ತಡ ತಿಳಿಯಲು, ನಿದ್ರೆ ಮಾಡಲು, ನಿದ್ರೆ­ಯಿಂದ ಏಳಲು ಸಹ ಜನರು ಅಪ್ಲಿಕೇಷನ್ಸ್‌ ಬಳಸು­ತ್ತಿದ್ದಾರೆ.  ಹೀಗಾಗಿ ಹೆಚ್ಚು ಆರೋಗ್ಯ ಸಂಬಂಧಿತ ಅಪ್ಲಿಕೇ­ಷನ್ಸ್‌­ಗಳನ್ನು ಒದಗಿಸಲಾಗಿದೆ’ ಎನ್ನು­ವುದು ಷಿಲ್ಲರ್‌ ಅವರ ವಿವರಣೆ.

ಐಫೊನ್‌–5ಎಸ್‌ನಲ್ಲಿರುವ ಕ್ಯಾಮೆರಾ­ವನ್ನು  ಮೇಲ್ದರ್ಜೆಗೆ ಏರಿಸಲಾ­ಗಿದೆ. ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಹಲವು ಸ್ವಯಂಚಾಲಿತ ಸೌಲಭ್ಯಗಳನ್ನು ಒದಗಿ­ಸಲಾಗಿದೆ. ಪಿಕ್ಸಲ್‌ ಸಾಮರ್ಥ್ಯ ಹೆಚ್ಚಿಸ­ಲಾಗಿದೆ. ‘ಟ್ರೂ ಟನ್‌’ ಫ್ಲಾಶ್‌ ಸೌಲಭ್ಯ ಇರುವುದರಿಂದ ಎಲ್ಲ ಬಣ್ಣಗಳು ಸರಿಯಾಗಿ ಸೆರೆಯಾಗುತ್ತವೆ. ಬಣ್ಣಗಳು ಅಂದಗೆಡುವ ಸಾಧ್ಯತೆಯೇ ಇಲ್ಲ. ಮನುಷ್ಯನ ಚರ್ಮದ ಬಣ್ಣ, ಕೋಣೆ ಒಳಗಿನ, ಹೊರಗಿನ ಬಣ್ಣ ಸಹ ಅಷ್ಟೇ ಸ್ಪಷ್ಟವಾಗಿ ಸೆರೆಯಾಗುತ್ತವೆ. ಇಲ್ಲಿಯ­ವರೆಗೆ ಐಫೋನ್‌ನಲ್ಲಿ ಈ ಸೌಲಭ್ಯ ಇರಲಿಲ್ಲ ಎನ್ನುತ್ತಾರೆ ಷಿಲ್ಲರ್‌.

ಐಫೊನ್‌–5ಎಸ್‌ನ ಕ್ಯಾಮೆರಾವನ್ನು ‘ಐಸೈಟ್‌’ ಎಂದು ಕರೆಯಲಾಗಿದೆ. ಇದರಲ್ಲಿ­ರುವ ಮತ್ತೊಂದು ವೈಶಿಷ್ಟ್ಯ ಎಂದರೆ ‘ಆಟೊ ಇಮೇಜ್‌ ಸ್ಟೆಬಲೈ­ಸೇಷನ್‌’ ತಂತ್ರಜ್ಞಾನ. ಇದರಿಂದ ಚಿತ್ರಗಳು ಬ್ಲರ್‌(ಮಸುಕು) ಆಗುವ ಸಾಧ್ಯತೆ ಕಡಿಮೆ. ಚಲಿಸುತ್ತಿರುವ ವಾಹನದಿಂ­ದಲೂ ಚಿತ್ರ, ವಿಡಿಯೊ ಸೆರೆ ಹಿಡಿ­ಯಬಹುದು ಎನ್ನುತ್ತಾರೆ.

ಇದರಲ್ಲಿರುವ ‘ಟಚ್‌ ಐಡಿ’ ಎಂಬ ಅನ್‌ಲಾಕ್‌ ತಂತ್ರಜ್ಞಾನ ಬಳಕೆದಾರರ ಬೆರಳು ಮುದ್ರೆಯನ್ನೂ ಗುರು­ತಿಸುತ್ತದೆ. ಹೀಗಾಗಿ ಇನ್ನೊಬ್ಬರು ಫೋನ್‌ ತೆಗೆದು ನೋಡುವ, ದುರು­ಪಯೋಗಪಡಿ­ಸಿಕೊ­ಳ್ಳುವ ಅವಕಾಶ ಇಲ್ಲ. ಸ್ಪರ್ಶ ಪರದೆ ಮೇಲೆ ಬೆರಳು ಸೋಕಿಸಿದಾಗ ಅದರು ಬೆರಳು ಮುದ್ರೆಯನ್ನು ಥಟ್ಟನೆ ಗುರುತಿಸುತ್ತದೆ. ಬೆರಳು ಮುದ್ರೆ ಬೇರೆಯದೇ ಆಗಿದ್ದರೆ ಫೋನ್‌ ತನ್ನಿಂದ ತಾನೇ ಲಾಕ್‌ ಆಗಿಬಿಡುತ್ತದೆ. ಐಫೊನ್‌–5ಎಸ್‌ನ ಬೆಲೆ ಅಂದಾಜು ₨50 ಸಾವಿರ.

‘ಐಒಎಸ್‌–7’ ಉಚಿತ
ಸೆ. 18ರ ನಂತರ ಬಳಕೆದಾರರು ಆಪಲ್‌ನ ಹೊಸ ಕಾರ್ಯನಿರ್ವಹಣಾ ತಂತ್ರಾಂಶ ‘ಐಒಎಸ್‌–7’ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಂಡು ಬಳಸ­ಬಹುದು. ಈ ಮೂಲಕ ಸ್ಮಾರ್ಟ್‌­ಫೋನ್‌ನ ಹೊಸತೊಂದು ಜಗತ್ತಿಗೆ ಪ್ರವೇಶ ಪಡೆಯಬಹುದು ಎನ್ನುತ್ತಾರೆ ಕಂಪೆನಿಯ ಸಾಫ್ಟ್‌ವೇರ್‌ ವಿಭಾಗದ ಮುಖ್ಯಸ್ಥ ಕ್ರೇಗ್‌ ಫೆಡ್ರಿಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT