ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ಗದ ಚೀನಾ ರೇಷ್ಮೆ: ಸುರಿ ವಿರೋಧಿ ತೆರಿಗೆ ವಿಸ್ತರಣೆ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಅಗ್ಗದ ರೇಷ್ಮೆ  ಬಟ್ಟೆ, ಕೃತಕ ಸಕ್ಕರೆ ಸೇರಿದಂತೆ ಚೀನಾದಿಂದ ಆಮದಾಗುವ ನಾಲ್ಕು ಉತ್ಪನ್ನಗಳ ಮೇಲಿನ ಸುರಿ ವಿರೋಧಿ ತೆರಿಗೆಯನ್ನು ಸರ್ಕಾರ ಮುಂದಿನ ಐದು ವರ್ಷಗಳ ಕಾಲ ವಿಸ್ತರಿಸಿದೆ.

ಚೀನಾದಿಂದ ಆಮದಾಗುವ ಅಗ್ಗದ ದರದ ಸರಕುಗಳಿಂದ ದೇಶೀಯ ಉದ್ಯಮ ರಕ್ಷಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಕೆಲವು ಆಯ್ದ ಚೀನಾ ರೇಷ್ಮೆ ಬಟ್ಟೆ ಮೇಲಿನ ಸುರಿ ವಿರೋಧಿ ತೆರಿಗೆಯನ್ನು ಪ್ರತಿ ಮೀಟರ್‌ಗೆ  1.82 ಡಾಲರ್ (ರೂ94) ನಿಂದ 7.59 ಡಾಲರ್‌ಗಳಿಗೆ (ರೂ394) ಹೆಚ್ಚಿಸಲಾಗಿದೆ ಎಂದು ಕಂದಾಯ ಇಲಾಖೆ ಪ್ರಕಟಣೆ ತಿಳಿಸಿದೆ.

ಕಳೆದ ಹಣಕಾಸು ವರ್ಷದಲ್ಲಿ ಚೀನಾ  ಜತೆಗಿನ ದೇಶದ ವ್ಯಾಪಾರ ಕೊರತೆಯು 16 ಶತಕೋಟಿ ಡಾಲರ್‌ಗಳಷ್ಟು (ರೂ83,200ಕೋಟಿ) ಇತ್ತು. ಪ್ರಸಕ್ತ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲೇ ಇದು 20 ಶತಕೋಟಿ ಡಾಲರ್ (ರೂ1,04,000ಕೋಟಿ)   ದಾಟಿದೆ ಎಂದು ಕಂದಾಯ ಇಲಾಖೆ ಹೇಳಿದೆ.

2006ರಿಂದ 2011ರ ವರೆಗೆ ಚೀನಾ ರೇಷ್ಮೆ ಬಟ್ಟೆಗಳ ಮೇಲೆ ಪ್ರತಿ ಮೀಟರ್‌ಗೆ ರೂ94ರಂತೆ ಸುರಿ ವಿರೋಧಿ ತೆರಿಗೆ ಹೇರಲಾಗಿತ್ತು. ಆದರೆ, ಸುರಿ ವಿರೋಧಿ ತೆರಿಗೆ ಹೆಚ್ಚಿಸಿ, ಅವಧಿ ವಿಸ್ತರಿಸದಿದ್ದರೆ ಇದರಿಂದ ದೇಶೀಯ ಉದ್ಯಮಕ್ಕೆ ಅಪಾಯ ಹೆಚ್ಚು ಎನ್ನುವ ಹಿನ್ನೆಲೆಯಲ್ಲಿ, ಸುರಿ ವಿರೋಧಿ ತೆರಿಗೆ ಮಹಾನಿರ್ದೇಶನಾಲಯವು (ಡಿಜಿಎಡಿ) ಮುಂದಿನ 5 ವರ್ಷಗಳ ಅವಧಿಗೆ  ವಿಸ್ತರಿಸಿ ನಿರ್ಧಾರ  ಕೈಗೊಂಡಿದೆ.

ತೈಪೆ, ಮಲೇಷ್ಯಾ, ಥಾಯ್ಲೆಂಡ್, ಕೊರಿಯಾದಿಂದ ಆಮದಾಗುವ ನೈಲಾನ್ ಬಟ್ಟೆಗಳ ಮೇಲಿನ ಸುರಿ ವಿರೋಧಿ ತೆರಿಗೆ ಮುಂದಿನ ಐದು ವರ್ಷಗಳ ಅವಧಿಗೆ ಪ್ರತಿ ಕೆ.ಜಿಗೆ 0.20ರಿಂದ 1.51 ಡಾಲರ್‌ಗಳಷ್ಟು (ರೂ78) ಇರಲಿದೆ ಎಂದು `ಡಿಜಿಎಡಿ~ ಹೇಳಿದೆ. ಆದರೆ, ರಸಗೊಬ್ಬರ ಹೊರತುಪಡಿಸಿ ಇಸ್ರೇಲ್ ಮತ್ತು ತೈವಾನ್‌ನಿಂದ ಆಮದಾಗುವ ರಂಜಕದ ಮೇಲಿನ ತಾತ್ಕಾಲಿಕ ಸುರಿ ವಿರೋಧಿ ತೆರಿಗೆಯನ್ನು ತಗ್ಗಿಸಲಾಗಿದೆ  ಎಂದೂ ತಿಳಿಸಲಾಗಿದೆ. ಭಾರತವು ಚೀನಾ ವಿರುದ್ಧ ಇಲ್ಲಿಯವರೆಗೆ 150 ಸುರಿ ವಿರೋಧಿ ಪ್ರಕರಣಗಳನ್ನು ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT