ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ಗದ ದರಕ್ಕೆ 3000 ನಿವೇಶನ

Last Updated 26 ಫೆಬ್ರುವರಿ 2012, 10:20 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಏಕ ನಿವೇಶನ ವಿನ್ಯಾಸಕ್ಕೆ 15 ದಿನಗಳಲ್ಲಿ ಅನುಮೋದನೆ ನೀಡುವಂತೆ ಮಾಡಲು ವಸತಿ ಏಕ ವಿನ್ಯಾಸ ಅನುಮೋದನೆ ವ್ಯವಸ್ಥೆ ಮಾರ್ಚ್ ತಿಂಗಳಲ್ಲಿ ಆರಂಭಗೊಳ್ಳಲಿದೆ ಎಂದು ಮೂಡಾ ಅಧ್ಯಕ್ಷ ಎಸ್.ರಮೇಶ್ ತಿಳಿಸಿದರು.

ಮೂಡಾ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡಾಕ್ಕೆ ಬರುವ ಅರ್ಜಿಗಳಲ್ಲಿ ಶೇ. 75ರಷ್ಟು ಏಕ ನಿವೇಶನಕ್ಕೆ ಸೇರಿದವು. ಈ ಅರ್ಜಿಗಳ ಅನುಮೋದನೆ ವಿಳಂಬವಾಗುತ್ತಿದೆ. ಏಕ ನಿವೇಶನದ ಅರ್ಜಿಗಳೇ ತಿಂಗಳಿಗೆ ಸಾವಿರದಷ್ಟು ಬರುತ್ತಿವೆ. ಈ ನಿಟ್ಟಿನಲ್ಲಿ ಹಲವು ಸುತ್ತಿನ ಸಮಾಲೋಚನೆ ಬಳಿಕ ಈ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಸಂಬಂಧ ಅಧಿಕಾರಿಗಳಿಗೂ ತಿಳಿಸಲಾಗಿದೆ. ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅಗ್ಗದಲ್ಲಿ ನಿವೇಶನ: 
ಸುರತ್ಕಲ್‌ನಲ್ಲಿ 200 ಎಕರೆ ಪ್ರದೇಶದಲ್ಲಿ ನಗರ ಯೋಜನಾ ತತ್ವದಂತೆ 3000 ವಸತಿ ನಿವೇಶನ ಅಭಿವೃದ್ಧಿಪಡಿಸಿ ವಸತಿ ರಹಿತರಿಗೆ ಅತಿ ಕಡಿಮೆ ದರದಲ್ಲಿ ವಿತರಿಸಲಾಗುವುದು. ಜೂನ್‌ನಲ್ಲಿ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

6 ಕಡೆ ನಿಲ್ದಾಣ:  ಸುರತ್ಕಲ್, ಕಾವೂರು, ಉರ್ವ ಸ್ಟೋರ್, ಪಂಪ್‌ವೆಲ್, ಕಂಕನಾಡಿ, ಹಂಪನಕಟ್ಟೆಯಲ್ಲಿ ಬಹುಮಹಡಿ ವಾಹನ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಹಂಪನಕಟ್ಟೆ ವಾಹನ ನಿಲ್ದಾಣ ಕೆಲಸ ಖಾಸಗಿ ಸಹಭಾಗಿತ್ವದಲ್ಲಿಜೂನ್‌ನಲ್ಲಿ ಆರಂಭವಾಗಲಿದ್ದು, ಇಲ್ಲಿ ಸಾವಿರ ಕಾರುಗಳ ನಿಲುಗಡೆಗೆ ಅವಕಾಶವಾಗಲಿದೆ ಎಂದರು.

ಸುರತ್ಕಲ್, ಕಾವೂರು, ವಾಮಂಜೂರು, ಕದ್ರಿ, ಅಡ್ಯಾರು, ತೊಕ್ಕೊಟ್ಟಿನಲ್ಲಿ ಹೊಸ ಆಟದ ಮೈದಾನ ನಿರ್ಮಿಸಲಾಗುವುದು. ಮಹಾ ಯೋಜನೆಯಲ್ಲಿ ಗೊಂದಲಕ್ಕೆ ಒಳಗಾದ ರಸ್ತೆಯ ಅಸ್ತವ್ಯಸ್ತಗಳನ್ನು ಪ್ರಾಧಿಕಾರದಲ್ಲೇ ವಿಲೇವಾರಿ ಮಾಡಲಾಗುವುದು. ಉರ್ವಸ್ಟೋರ್, ಬೋಂದೆಲ್‌ನಲ್ಲಿ ವಸತಿ ಸಮುಚ್ಛಯ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ರಸ್ತೆ ವಿಸ್ತರಣೆಗೆ ಜಾಗ ಬಿಟ್ಟು ಕೊಟ್ಟ ಜಾಗಕ್ಕೆ ಅಭಿವೃದ್ಧಿ ಹಕ್ಕಿನ ಸೌಲಭ್ಯ ನೀಡಲಾಗುವುದು. ನರಹಂತಹ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಮೃತರಾದ ಪೊಲೀಸರ ಕುಟುಂಬಕ್ಕೆ ಶಕ್ತಿನಗರದಲ್ಲಿ ನಿವೇಶನ ನೀಡಲಾಗುವುದು. ನಗರ ವ್ಯಾಪ್ತಿಯಲ್ಲಿ ಕನಿಷ್ಠ ಮೂರು ಜೈವಿಕ ಉದ್ಯಾನವನ ನಿರ್ಮಿಸಲಾಗುವುದು ಎಂದು ವಿವರಿಸಿದರು.

ಕೂಳೂರು, ಸುರತ್ಕಲ್, ಕಂಕನಾಡಿ, ಅತ್ತಾವರ, ತೊಕ್ಕೊಟ್ಟು, ಬಜಾಲ್, ಉಳ್ಳಾಲ, ಕುಲಶೇಖರ, ಸುಲ್ತಾನ್‌ಬತ್ತೇರಿಯಲ್ಲಿ ಹೊಸ ಉದ್ಯಾನವನ ನಿರ್ಮಿ ಸಲು ಯೋಜಿಸಲಾಗಿದೆ. ಮಂಗಳಾ ಕಾರ್ನಿಷ್ ರಸ್ತೆ ಸರ್ವೆ ಕಾರ್ಯ ಕೆಎಸ್‌ಐಡಿಸಿ ಸಂಸ್ಥೆಗೆ ವಹಿಸಲಾಗಿದೆ ಎಂದರು.  ಪ್ರಾಧಿಕಾರಕ್ಕೆ ನಾಗರಿಕರು ನೇರವಾಗಿ ಕಚೇರಿ ಕೆಲಸ ಮಾಡಿಸಿಕೊಳ್ಳಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದೆಂದು ವಿನಂತಿಸಿದರು. ಮೂಡಾ ಸದಸ್ಯ ಶರತ್‌ಚಂದ್ರ ಶೆಟ್ಟಿ, ವಕೀಲ ಎಂ. ಸುಧಾಕರ ಜೋಷಿ, ತಾಂತ್ರಿಕ ಸದಸ್ಯ ಸುರೇಶ್ ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT