ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ಗದ ಸಾಲ: ರೈತರ ಪ್ರಾಣ ಉಳಿಸಿ

Last Updated 28 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಎಲ್ಲಾ ಬ್ಯಾಂಕ್‌ಗಳು ನೇರವಾಗಿ ಕಡಿಮೆ ಬಡ್ಡಿದರದಲ್ಲಿ ಆರ್ಥಿಕ ಸಹಾಯ ಒದಗಿಸುವ ಯೋಜನೆ ರೂಪಿಸಬೇಕು~ ಎಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷ ಪಿ.ಎಸ್.ಸುಂದರೇಶನ್ ಎಂದು ಕಿವಿಮಾತು ಹೇಳಿದರು.
ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಸಣ್ಣ ಸಾಲ ನೀಡುವ ಸಂಸ್ಥೆಗಳಿಗೆ ಶೇ 18ರ ಬಡ್ಡಿದರದಲ್ಲಿ ಬ್ಯಾಂಕ್‌ಗಳು ಸಾಲ ನೀಡುತ್ತಿವೆ. ಈ ಸಂಸ್ಥೆಗಳು ರೈತರಿಗೆ ಶೇ 27ಕ್ಕೂ ಹೆಚ್ಚು ಬಡ್ಡಿದರದಲ್ಲಿ ಸಾಲ ಒದಗಿಸುತ್ತವೆ. ಇಷ್ಟು ಬಡ್ಡಿದರದ ಸಾಲವನ್ನು ತೀರಿಸಲಾಗದೆ ಅಸಂಖ್ಯಾತ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ~ ಎಂದು ಆತಂಕ ವ್ಯಕ್ತಪಡಿಸಿದರು.

`ರಿಸರ್ವ್ ಬ್ಯಾಂಕ್ ಸಮೀಕ್ಷೆಯ ಪ್ರಕಾರ ಶೇ 70ರಷ್ಟು ಠೇವಣಿ ಹಣ ಸಾಮಾನ್ಯ ಜನರಿಂದ ಲಭಿಸುತ್ತದೆ. ಅರ್ಥಾತ್ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಸಾಮಾನ್ಯ ಜನರಿಂದಲೇ ನಡೆಯುತ್ತಿದೆ. ಆದರೆ ಈ ಹಣ ಗ್ರಾಮೀಣಾಭಿವೃದ್ಧಿ, ಉದ್ಯೋಗ ಸೃಷ್ಟಿ, ಕೃಷಿಗೆ ಬಳಕೆಯಾಗುತ್ತಿಲ್ಲ~ ಎಂದರು.

`ಜನರ ಹಣ ಜನರಿಗಾಗಿ ಬಳಕೆಯಾಗಲೇ ಬೇಕಿದೆ. ಇದರ ಬದಲು ಬ್ಯಾಂಕ್‌ಗಳೇ ನೇರವಾಗಿ ಕಡಿಮೆ ಬಡ್ಡಿದರದಲ್ಲಿ ರೈತರಿಗೆ ಸಾಲ ಒದಗಿಸುವ ಮೂಲಕ ದೇಶಪ್ರೇಮದ ಬ್ಯಾಂಕಿಂಗ್ ಪ್ರಕ್ರಿಯೆಗೆ ಮುಂದಾಗಬೇಕಿದೆ. ಬ್ಯಾಂಕ್‌ನಲ್ಲಿರುವ ಸಂಘಟನೆಗಳು ಕೇವಲ ನೌಕರರ ಹಿತಾಸಕ್ತಿ ಬಗ್ಗೆ ಸಂಘರ್ಷಕ್ಕಿಳಿಯದೆ ಇಂತಹ ಜನಹಿತ ಕಾರ್ಯಗಳಿಗೆ ಒತ್ತಾಯಿಸಬೇಕಿದೆ~ ಎಂದು ಹೇಳಿದರು.

ಸಂಘದ ಅಧ್ಯಕ್ಷ ಎಚ್.ಎಸ್.ಹಿರಿಯಣ್ಣಯ್ಯ, `ಕೇಂದ್ರದ ಆರ್ಥಿಕ ನೀತಿಗಳ ತಿದ್ದುಪಡಿಯಿಂದಾಗಿ ಕಾರ್ಮಿಕರಿಗೆ ತುಂಬಲಾರದ ನಷ್ಟ ಉಂಟಾಗಿದೆ. ಬದಲಾಗುತ್ತಿರುವ ಸಂದರ್ಭದಲ್ಲಿ ಕಾರ್ಮಿಕರ ಶೋಷಣೆಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರು ಒಗ್ಗೂಡಿ ಕಾರ್ಯ ನಿರ್ವಹಿಸುವುದು ಅತ್ಯವಶ್ಯ~ ಎಂದರು.

`ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಂಘ ಅಪಾರ ನೇತಾರರನ್ನು ಹುಟ್ಟುಹಾಕಿದೆ. ಸಂಘದ ಹಿಂದಿರುವ ಶಕ್ತಿಗಳು ಅಪಾರ. ಬರಲಿರುವ ದಿನಗಳು ಕರಾಳವಾದುದರಿಂದ ಕಾರ್ಮಿಕರು ಎಂತಹ ತ್ಯಾಗ ಬಲಿದಾನಕ್ಕೆ ಕೂಡ ಸಿದ್ಧವಾಗಿರಬೇಕು~ ಎಂದು ಮನವಿ ಮಾಡಿದರು.

ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಮಾತನಾಡಿ ಸಂಘಕ್ಕೆ ಶುಭ ಕೋರಿದರು. ಸಂಘದ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ನಿವೃತ್ತ ಲೋಕಾಯುಕ್ತ, ಬ್ಯಾಂಕ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕಿ ಹಂಸಿಣಿ ಮೆನನ್, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಪಿ.ಆರ್.ಕಾರಂತ್, ಪ್ರಧಾನ ಕಾರ್ಯದರ್ಶಿ ಎನ್.ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT