ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿ ಅನಾಹುತ:ಮಹಿಳೆ ಸಾವು

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಡುಗೆ ಅನಿಲ ಸೋರಿಕೆಯಾಗಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿ ಅವರ ಪತಿ ಮತ್ತು ಮಗ ಗಾಯಗೊಂಡಿರುವ ಘಟನೆ ಯಲಹಂಕ ಉಪನಗರ ಸಮೀಪದ ಚಿಕ್ಕಬೊಮ್ಮಸಂದ್ರದಲ್ಲಿ ನಡೆದಿದೆ.

ಚಿಕ್ಕಬೊಮ್ಮಸಂದ್ರ ಎರಡನೇ ಅಡ್ಡರಸ್ತೆ ನಿವಾಸಿ ಸುಬ್ರಹ್ಮಣ್ಯರೆಡ್ಡಿ (35) ಎಂಬುವರ ಪತ್ನಿ ಶೋಭಾ (29) ಅವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸುಬ್ರಹ್ಮಣ್ಯರೆಡ್ಡಿ ಮತ್ತು ಅವರ ಎಂಟು ವರ್ಷದ ಮಗ ನಂದಕುಮಾರ್ ಎಂಬಾತನಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಬ್ರಹ್ಮಣ್ಯರೆಡ್ಡಿ ಕೂಲಿ ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ.

ಶೋಭಾ ಅವರು ಸೋಮವಾರ ರಾತ್ರಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಅಡುಗೆ ಅನಿಲದ ಸಿಲಿಂಡನ ಪೈಪ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತು.

ಈ ಸಂದರ್ಭದಲ್ಲಿ ಮನೆಯಲ್ಲೇ ಇದ್ದ ಸುಬ್ರಹ್ಮಣ್ಯರೆಡ್ಡಿ ಪತ್ನಿಯನ್ನು ರಕ್ಷಿಸಲು ಮುಂದಾದಾಗ ಅವರಿಗೂ ಮತ್ತು ಬಾಲಕ ನಂದಕುಮಾರ್‌ಗೂ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಅವರು ರಕ್ಷಣೆಗಾಗಿ ಕೂಗಿಕೊಂಡಾಗ ಅಕ್ಕಪಕ್ಕದ ಮನೆಯವರು ಬೆಂಕಿ ನಂದಿಸಿ ಮೂರೂ ಮಂದಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರು.

ತೀವ್ರ ಸುಟ್ಟ ಗಾಯಗಳಾಗಿದ್ದ ಶೋಭಾ ಅವರು ಮಂಗಳವಾರ ಬೆಳಿಗ್ಗೆ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ. ಯಲಹಂಕ ಉಪನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ದರೋಡೆ
ನಗರದ ಬೆನ್ಸನ್‌ಟೌನ್ ಮತ್ತು ಜೆ.ಪಿ.ನಗರದಲ್ಲಿ ಸೋಮವಾರ ರಾತ್ರಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಸಾರ್ವಜನಿಕರಿಂದ ಹಣ, ದ್ವಿಚಕ್ರ ವಾಹನ ಹಾಗೂ ಮೊಬೈಲ್ ಫೋನ್ ದರೋಡೆ ಮಾಡಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಾಪಾರಿಯನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ನಾಲ್ಕು ಲಕ್ಷ ನಗದು, ಬ್ಯಾಂಕ್ ಚೆಕ್‌ಗಳು ಮತ್ತು ಅವರ ವಾಹನವನ್ನು ದರೋಡೆ ಮಾಡಿರುವ ಘಟನೆ ಬೆನ್ಸನ್‌ಟೌನ್ ಒಂದನೇ ಅಡ್ಡರಸ್ತೆಯಲ್ಲಿ ನಡೆದಿದೆ.

ನಂದಿದುರ್ಗ ರಸ್ತೆ ನಿವಾಸಿ ಅಬ್ದುಲ್ ಗಫರ್ ಎಂಬುವರು ಈ ಸಂಬಂಧ ದೂರು ಕೊಟ್ಟಿದ್ದಾರೆ. ಅವರು ಜೆ.ಸಿ.ನಗರದಲ್ಲಿ ಆಹಾರ ಪದಾರ್ಥಗಳ ಮಾರಾಟ ಮಳಿಗೆ ಇಟ್ಟುಕೊಂಡಿದ್ದಾರೆ.

ವಹಿವಾಟು ಮುಗಿದ ನಂತರ ಅಬ್ದುಲ್ ಅವರು ಅಂಗಡಿಯ ಬಾಗಿಲು ಮುಚ್ಚಿ ನಾಲ್ಕು ಲಕ್ಷ ಹಣವನ್ನು ಬ್ಯಾಗ್‌ನಲ್ಲಿಟ್ಟುಕೊಂಡು ಮನೆಗೆ ಹೋಗುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಹಿಂಬಾಲಿಸಿ ಬಂದು ಅಡ್ಡಗಟ್ಟಿದ್ದಾರೆ. ನಂತರ ಮಾರಕಾಸ್ತ್ರಗಳಿಂದ ಬೆದರಿಸಿ ಹಣ, ದ್ವಿಚಕ್ರ ವಾಹನ ಮತ್ತು 33 ಚೆಕ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಜೆ.ಸಿ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣ: ಜೆ.ಪಿ.ನಗರ ಒಂದನೇ ಹಂತದ ಹತ್ತನೇ ಅಡ್ಡರಸ್ತೆಯಲ್ಲಿ ದುಷ್ಕರ್ಮಿಗಳು ರೀಚಾ ಅಗರ್‌ವಾಲ್ ಎಂಬ ಮಹಿಳೆಯನ್ನು ಅಡ್ಡಗಟ್ಟಿ ಮೊಬೈಲ್ ಫೋನ್ ಮತ್ತು ಡೆಬಿಟ್ ಕಾರ್ಡ್ ದರೋಡೆ ಮಾಡಿದ್ದಾರೆ.
ಜೆ.ಪಿ.ನಗರ ಹತ್ತನೇ `ಬಿ~ ಅಡ್ಡರಸ್ತೆ ನಿವಾಸಿಯಾದ ರೀಚಾ ಅವರು ರಾತ್ರಿ ಎಂಟು ಗಂಟೆ ಸುಮಾರಿಗೆ ಮನೆಯ ಸಮೀಪದ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಅವರಿಗೆ ಚಾಕುವಿನಿಂದ ಬೆದರಿಸಿ ಮೊಬೈಲ್ ಫೋನ್ ಮತ್ತು ಕ್ರೆಡಿಟ್ ಕಾರ್ಡ್ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೆ.ಪಿ.ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಯುವಕನ ಕೊಲೆ
ಆಟೊ ಚಾಲಕನೊಬ್ಬ ಯುವಕನನ್ನು ಕೊಲೆ ಮಾಡಿರುವ ಘಟನೆ ಜ್ಞಾನಭಾರತಿ ಸಮೀಪದ ಗಿಡದಕೊನೇನಹಳ್ಳಿ ಬಳಿ ಸೋಮವಾರ ರಾತ್ರಿ ನಡೆದಿದೆ.

ಗಿಡದಕೊನೇನಹಳ್ಳಿ ಸಮೀಪದ ಜನತಾ ಕಾಲೊನಿ ನಿವಾಸಿ ನಾಗರಾಜ್ (24) ಕೊಲೆಯಾದ ಯುವಕ. ಪ್ರಕರಣದ ಆರೋಪಿ ವಿನೋದ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ನಾಗರಾಜ್ ಪೇಂಟರ್ ಆಗಿದ್ದರು. ಅವರು ಗಿಡದಕೊನೇನಹಳ್ಳಿಯಲ್ಲಿರುವ ಸುಮಾ ಎಂಬುವರ ಮನೆಯಲ್ಲಿ ವಾಸವಾಗಿದ್ದರು. ಸುಮಾ ಮತ್ತು ನಾಗರಾಜ್ ಒಂದೇ ಊರಿನವರಾಗಿದ್ದ ಕಾರಣ ಪರಿಚಿತರಾಗಿದ್ದರು. ಸುಮಾ ಅವರ ಮಗಳ ಜತೆ ವಿನೋದ್ ಅನುಚಿತವಾಗಿ ವರ್ತಿಸುತ್ತಿದ್ದ.
 
ಈ ವಿಷಯವಾಗಿ ನಾಗರಾಜ್ ಹಾಗೂ ವಿನೋದ್ ನಡುವೆ ರಾತ್ರಿ ವಾಗ್ವಾದ ನಡೆದು ಜಗಳವಾಗಿದೆ. ಈ ವೇಳೆ ಆರೋಪಿಯು ಅವರ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT