ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿ ದುರಂತ: 9 ಮಂದಿ ಸಜೀವ ದಹನ

ಬಾಂದ್ರಾ–ಡೆಹ್ರಾಡೂನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಡೆದ ಘಟನೆ
Last Updated 8 ಜನವರಿ 2014, 20:20 IST
ಅಕ್ಷರ ಗಾತ್ರ

ಠಾಣೆ(ಮಹಾರಾಷ್ಟ್ರ), (ಪಿಟಿಐ/ಐಎಎನ್‌ಎಸ್‌): ಬಾಂದ್ರಾ–ಡೆಹ್ರಾಡೂನ್ ಎಕ್ಸ್‌ಪ್ರೆಸ್‌ ರೈಲಿನ ಮೂರು ಬೋಗಿಗಳಲ್ಲಿ ಬುಧವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡು ಒಂಬತ್ತು ಮಂದಿ ಸುಟ್ಟು ಕರಕಲಾಗಿದ್ದಾರೆ.

ಮಹಾರಾಷ್ಟ್ರ–ಗುಜರಾತ್‌ ಗಡಿಗೆ ಹೊಂದಿಕೊಂಡಿರುವ ದಹಾನು ಪಟ್ಟಣದ ಸಮೀಪ ಬೆಳಗಿನ ಜಾವ 2.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
‘ಮೃತರಲ್ಲಿ ಒಬ್ಬ ಮಹಿಳೆ ಹಾಗೂ ನಾಲ್ವರು ಪುರುಷರನ್ನು  ಗುರುತಿಸಲಾಗಿದೆ. ಅವರೆಂದರೆ:  ದೀಪಿಕಾ ಶಾ (65), ದೇವ್‌ ಶಂಕರ್‌ ಉಪಾಧ್ಯಾಯ (48), ಸುರೇಂದ್ರ ಶಾ (68), ನಾಸಿರ್‌ ಖಾನ್‌ ಅಹ್ಮದ್‌ ಖಾನ್‌ ಪಠಾಣ್‌ (50) ಹಾಗೂ ಫಿರೋಜ್‌ ಖಾನ್‌ (38). ಉಳಿದವರ ಗುರುತು ಇನ್ನೂ ಸಿಕ್ಕಿಲ್ಲ’ ಎಂದು ಪಶ್ಚಿಮ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಶರತ್‌ಚಂದ್ರ ತಿಳಿಸಿದ್ದಾರೆ.

ಎಸ್‌2 ಬೋಗಿಯಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಎಸ್‌3 ಹಾಗೂ ಎಸ್‌4 ಬೋಗಿಗಳಿಗೆ ವ್ಯಾಪಿಸಿತು. ಘಟನೆಯಲ್ಲಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪರಿಹಾರ: ಘಟನೆಗೆ ವಿಷಾದ ವ್ಯಕ್ತಪಡಿಸಿದ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಮೃತರ  ಕುಟುಂಬಕ್ಕೆ ತಲಾ ₨ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.

‘ಗಂಭೀರವಾಗಿ ಗಾಯಗೊಂಡವರಿಗೆ ತಲಾ ₨ 1ಲಕ್ಷ ಹಾಗೂ ಸಣ್ಣಪುಟ್ಟ ಗಾಯವಾದವರಿಗೆ ತಲಾ ₨ 50,000 ಪರಿಹಾರ ನೀಡಲಾಗುತ್ತದೆ’ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಅರುಣೇಂದ್ರ ಕುಮಾರ್‌ ತಿಳಿಸಿದ್ದಾರೆ.

‘ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ನಡೆಸುವರು. ಘಟನೆಗೆ ಕಾರಣ ಗೊತ್ತಾಗಿಲ್ಲ’ ಎಂದೂ  ಹೇಳಿದ್ದಾರೆ.

‘ಎಸ್‌3 ಬೋಗಿಯ ವಿದ್ಯುತ್‌ ಬೋರ್ಡ್‌ ಕೆಳಗೆ ಸುಟ್ಟ ತಂತಿಗಳು ಕಂಡಿವೆ. ಹಾಗಾಗಿ ಶಾರ್ಟ್‌ ಸರ್ಕಿಟ್‌­ನಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ತಳ್ಳಿ­ಹಾಕಲಾಗದು’ ಎಂದು ರೈಲ್ವೆ ಮೂಲಗಳು ಹೇಳಿವೆ.

ಸಹಾಯವಾಣಿ: ಈ ರೈಲಿನಲ್ಲಿದ್ದ ಪ್ರಯಾಣಿಕರ ಮಾಹಿತಿಗೆ ಉತ್ತರ ರೈಲ್ವೆ ಪ್ರಕಟಿಸಿರುವ ಸಹಾಯವಾಣಿ ಸಂಖ್ಯೆ: 23342954 ಮತ್ತು 24355954.
ಉಚಿತ ಸೇವೆ: ಮೃತರ ಕುಟುಂಬದವರು ದಹಾನು ತಲುಪುವುದಕ್ಕಾಗಿ ಅಧಿಕಾರಿಗಳು ಉಚಿತ ವಾಹನ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಪ್ರಯಾಣಿಕರಿಗೆ ಆಹಾರದ ಪೊಟ್ಟಣಗಳನ್ನೂ  ವಿತರಿಸಿದರು. ಬೆಂಕಿಯಿಂದ ಹಾನಿಯಾದ ಬೋಗಿ­ಗಳನ್ನು ಕಳಜಿ ಹೊಸ ಬೋಗಿ ಅಳವಡಿಸಿದ ಬಳಿಕ ರೈಲು ಡೆಹ್ರಾಡೂನ್‌ನತ್ತ ಪ್ರಯಾಣ ಬೆಳೆಸಿತು.

ಎರಡನೇ ದುರಂತ: ಆಂಧ್ರಪ್ರದೇಶದ ಕೊತ್ತಚೆರುವು ಗ್ರಾಮದ ಬಳಿ ಕಳೆದ ಡಿಸೆಂಬರ್‌ 28ರಂದು ಸಂಭವಿಸಿದ ರೈಲು ದುರಂತದ ಕಹಿ ನೆನಪು ಮಾಸುವ ಮುನ್ನವೇ ಈ ಘಟನೆ ನಡೆದಿದೆ.

ಮಹಾರಾಷ್ಟ್ರದ ನಾಂದೇಡ್‌ಗೆ ಹೊರಟಿದ್ದ ಎಕ್ಸ್‌ಪ್ರೆಸ್‍ ರೈಲಿನ ಹವಾ ನಿಯಂತ್ರಿತ ಬೋಗಿ­ಯಲ್ಲಿ ಬೆಂಕಿ ಕಾಣಿಸಿಕೊಂಡು ಮೂರು ಮಕ್ಕಳು ಸೇರಿದಂತೆ 27 ಮಂದಿ ಸುಟ್ಟು ಕರಕ ಲಾ­ಗಿದ್ದರು.

ಮುಖ್ಯಾಂಶಗಳು
* ಕಾವಲುಗಾರನಿಂದ ಮಾಹಿತಿ
* ಶಾರ್ಟ್‌ ಸರ್ಕಿಟ್‌ ಕಾರಣ?
* ತಲಾ ₨ 5 ಲಕ್ಷ ಪರಿಹಾರ

ತಪ್ಪಿದ ದೊಡ್ಡ ಅನಾಹುತ
ಲೆವೆಲ್ ಕ್ರಾಸಿಂಗ್ ಬಳಿ ಇದ್ದ ಕಾವಲುಗಾರನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ರೈಲಿನ ಒಳಗೆ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ಈತ  ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ. ತಕ್ಷಣವೇ ಚಾಲಕನಿಗೆ ಸುದ್ದಿ ತಲುಪಿಸಿ ರೈಲನ್ನು ನಿಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT