ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿ ದುರಂತ ತಪ್ಪಿಸುವಲ್ಲಿ ನಿರ್ಲಕ್ಷ್ಯ: ಬಿಬಿಎಂಪಿ ಮುಚ್ಚಬಾರದೇಕೆ- ಹೈಕೋರ್ಟ್ ಪ್ರಶ್ನೆ

Last Updated 6 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕಾರ್ಲ್‌ಟನ್ ಟವರ್‌ನಲ್ಲಿ ನಡೆದ ಬೆಂಕಿ ಅನಾಹುತದ ನಂತರ ಬಹುಮಹಡಿ ಕಟ್ಟಡಗಳಲ್ಲಿ ಮುಂಜಾಗರೂಕತಾ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ನೀಡಿರುವ ಆದೇಶವನ್ನೂ ಕಡೆಗಣಿಸಿರುವ ಬಿಬಿಎಂಪಿ ವಿರುದ್ಧ ಕೆಂಡಾಮಂಡಲವಾದ ನ್ಯಾಯಮೂರ್ತಿಗಳು ಪಾಲಿಕೆಯನ್ನು ಏಕೆ ಮುಚ್ಚಬಾರದು ಎಂದು ಸೋಮವಾರ ಪ್ರಶ್ನಿಸಿದರು.

`ಪಾಲಿಕೆಯನ್ನು ಮುಚ್ಚಿ, ಅದಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸುತ್ತೇವೆ. ಸರ್ಕಾರದ ಸುಪರ್ದಿಗೆ ಪಾಲಿಕೆಯನ್ನು ವಹಿಸಿಕೊಡುತ್ತೇವೆ. ಆಗಲಾದರೂ ಕೋರ್ಟ್ ಆದೇಶ ಜಾರಿಯಾಗಿ ಇಂತಹ ಅನಾಹುತಗಳಿಂದ ಜನರು ರಕ್ಷಣೆ ಪಡೆಯಬಹುದು~ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿತು.

2010ರ ಫೆಬ್ರುವರಿ ತಿಂಗಳಿನಲ್ಲಿ  ಕಾರ್ಲ್‌ಟನ್ ಟವರ್‌ನಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಒಂಬತ್ತು ಜೀವ ಬಲಿಯಾದ ಬಳಿಕವೂ, ಬಹು ಮಹಡಿ ಕಟ್ಟಡಗಳಲ್ಲಿ ಅಗ್ನಿ ಸುರಕ್ಷೆಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿ `ಬಿಯಾಂಡ್ ಕಾರ್ಲ್‌ಟನ್~ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

ಬಹು ಮಹಡಿ ಕಟ್ಟಡಗಳಲ್ಲಿ ಅಗ್ನಿ ಅನಾಹುತ ಸಂಭವಿಸದಂತೆ ಯಾವ ರೀತಿಯ ಕ್ರಮ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಎರಡು ತಿಂಗಳ ಒಳಗೆ ಕ್ರಿಯಾ ಯೋಜನೆ ರೂಪಿಸುವಂತೆ ಕಳೆದ ಮಾರ್ಚ್ ತಿಂಗಳಿನಲ್ಲಿ ಪೀಠ ಪಾಲಿಕೆಗೆ ನಿರ್ದೇಶಿಸಿತ್ತು. ಆದರೆ ಆದೇಶ ಪಾಲನೆ ಮಾಡುವ ಬದಲು ಮುಂದೆ ಕ್ರಮ ತೆಗೆದುಕೊಳ್ಳುವ ಕುರಿತು ಪಾಲಿಕೆ ಪ್ರಮಾಣ ಪತ್ರ ಸಲ್ಲಿಸಿತ್ತು. ಇದು ನ್ಯಾಯಮೂರ್ತಿಗಳ ಅಸಮಾಧಾನಕ್ಕೆ ಕಾರಣವಾಯಿತು.
`ಬೆಂಗಳೂರಿನ ಜನರ ರಕ್ಷಣೆ ಮಾಡುವುದು ಬಿಬಿಎಂಪಿ ಕರ್ತವ್ಯ. ಅದನ್ನು ಮರೆತರೆ ಹೇಗೆ? ಮೂರು ತಿಂಗಳು ಆದರೂ ಬೇಜವಾಬ್ದಾರಿಯಿಂದ ವರ್ತಿಸಿರುವುದು ಏಕೆ~ ಎಂದು ಪ್ರಶ್ನಿಸಿದರು.

ವಾರದ ಗಡುವು: ಕೋರ್ಟ್‌ಗೆ ಹಾಜರು ಇದ್ದ ಬಿಬಿಎಂಪಿ ನಗರ ಯೋಜನೆಯ ಸಹಾಯಕ ನಿರ್ದೇಶಕ ಕೃಷ್ಣಕುಮಾರ್ ಹಾಗೂ ಅಗ್ನಿ ಶಾಮಕ ದಳದ ಉಪ ನಿರ್ದೇಶಕ ಹಂಪಗೌಡ ಅವರನ್ನು ಉದ್ದೇಶಿಸಿದ ಪೀಠ, `ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ದುರಂತ ತಡೆ ಹಾಗೂ ಒಂದು ವೇಳೆ ದುರಂತ ಸಂಭವಿಸಿದರೆ ಏನು ಕ್ರಮ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಒಂದು ವಾರದ ಒಳಗೆ ಜಂಟಿಯಾಗಿ ಕ್ರಿಯಾ ಯೋಜನೆ ರೂಪಿಸಬೇಕು~ ಎಂದು ತಿಳಿಸಿದೆ. ಅಂತೆಯೇ, ಅವರು ಮಾಡುವ ಶಿಫಾರಸನ್ನು ಯಥಾವತ್ತಾಗಿ ಅಥವಾ  ಅಗತ್ಯವಿದ್ದರೆ ಸ್ವಲ್ಪ ಬದಲಾವಣೆ ಮಾಡಿ ನಂತರದ 2 ವಾರಗಳ ಒಳಗೆ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT