ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ರ ಪೂಜಿತ ಗಣಪನ ಕ್ಷಮೆಯಾಚಿಸುತ್ತಾ...

Last Updated 7 ಸೆಪ್ಟೆಂಬರ್ 2011, 11:15 IST
ಅಕ್ಷರ ಗಾತ್ರ

ಹರಿಹರ: ಭಾದ್ರಪದ ಮಾಸದಲ್ಲಿ ಭವ್ಯ ಪೆಂಡಾಲುಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟು ಸರ್ವರಿಂದಲೂ ಪೂಜೆಗೊಂಡು, ವಿಜೃಂಭಣೆ ಮೆರವಣಿಗೆ, ಹಾಡು ಕುಣಿತಗಳ ಮೂಲಕ ವಿಸರ್ಜನೆಗೊಂಡ ಗಣಪತಿ ವಿಗ್ರಹಗಳ ನದಿದಡದಲ್ಲಿ ಅರೆಬರೆ ಕರಗಿ, ಮುರಿದು, ಅಸ್ತವ್ಯಸ್ತಗೊಂಡು, ಅನಾಥವಾಗಿ ಬಿದ್ದಿರುವ ಸ್ಥಿತಿ ನೋಡಿದಾಗ ಎಂತಹ ನಾಸ್ತಿಕನಾದರೂ ಮನ ಕರಗಿ ಮರುಕ ಮೂಡುವುದು ಸಾಮಾನ್ಯ.

ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಮಾತ್ರವಲ್ಲ ಬೌದ್ಧ ಹಾಗೂ ಜೈನ ಧರ್ಮದ ಅನುಯಾಯಿಗಳಿಂದ ಜಾಗತಿಕ ಮಟ್ಟದಲ್ಲಿ ಪೂಜೆಗೆ ಪಾತ್ರನಾದ ದೈವ ಗಣೇಶ. ಕೇವಲ ಮನೆಗೆ ಮಾತ್ರ ಸೀಮಿತವಾಗಿದ್ದ ಗಣಪತಿ ಉತ್ಸವ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರಿಂದ ಸಾರ್ವಜನಿಕ ವಲಯದಲ್ಲಿ ಆಚರಣೆಗೆ ಬಂತು. ಅಂದು ಉನ್ನತ ಧ್ಯೇಯ ಹಾಗೂ ಸಾಮಾಜಿಕ ಕಳಕಳಿಯಿಂದ ಆರಂಭಗೊಂಡ ಸಾರ್ವಜನಿಕ ಗಣೇಶ ಉತ್ಸವ, ಪ್ರಸ್ತುತದಲ್ಲಿ ತನ್ನ ಜಾಡನ್ನು ಬದಲಿಸಿದೆ.

ಸಾರ್ವಜನಿಕರಿಂದ ವಂತಿಕೆ ಸಂಗ್ರಹಿಸಿ, ಸಂಘದ ಆರ್ಥಿಕ ಶಕ್ತ್ಯಾನುಸಾರ ಸಾರ್ವಜನಿಕ ಸ್ಥಳದಲ್ಲಿ ಪೆಂಡಾಲು ನಿರ್ಮಿಸಿ ಅದರಲ್ಲಿ ಗಣಪತಿ ಮೂರ್ತಿ ಸ್ಥಾಪನೆ ಮಾಡುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಅವರವರ ಅನುಕೂಲಕ್ಕೆ ತಕ್ಕಂತೆ ಒಂದು, ಮೂರು, ಐದು, ಒಂಬತ್ತು, ಹನ್ನೊಂದು ಹಾಗೂ ಇಪ್ಪತ್ತೊಂದು ದಿನ ಗಣಪತಿ ಉತ್ಸವ ನಡೆಸುತ್ತಾರೆ. ಈ ಕಾಲಾವಧಿಯಲ್ಲಿ ಸಾಂಸ್ಕೃತಿಕ ಹಾಗೂ ರಸಮಂಜರಿ ಕಾರ್ಯಕ್ರಮಗಳು ನಡೆಯುತ್ತವೆ.

ಗಣಪತಿ ಮೂರ್ತಿ ವಿರ್ಜನೆಯೊಂದಿಗೆ ಉತ್ಸವ ಕೊನೆಗೊಳ್ಳುತ್ತದೆ. ವಿಸರ್ಜನೆಯ ದಿನ ವಿಶೇಷ ಪೂಜೆ, ಅನ್ನ ಸಂತರ್ಪಣೆ ಕಾರ್ಯಗಳು ನಡೆಯುತ್ತವೆ. ಗಣಪತಿ ಮೂರ್ತಿಯನ್ನು ಭವ್ಯ ಮಂಟಪದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಜಾಂಜ್, ವೀರಗಾಸೆ, ಡೊಳ್ಳು, ಭಜನೆ, ನಂದಿಕೋಲು, ಗೊಂಬೆ ಕುಣಿತ, ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮಾಡುತ್ತಾರೆ.

ಮಳೆಯ ಹನಿ ನೀರು ಸೋಕದಂತೆ ಛಾವಣಿ ಅಥವಾ ಕೊಡೆಗಳಿಂದ ರಕ್ಷಣೆ ನೀಡುತ್ತಾರೆ. ನಂತರ ಕೆರೆ, ಬಾವಿ, ನದಿಯಲ್ಲಿ ಗಣಪತಿ ಮೂರ್ತಿ ವಿಸರ್ಜಿಸಿ ಉತ್ಸವಕ್ಕೆ ಅಂತ್ಯ ಹಾಡುತ್ತಾರೆ.

ಗಣಪತಿ ವಿಸರ್ಜನೆ ನಂತರ, ಗಣಪತಿ ಉತ್ಸವ ಆಚರಿಸಿದವರು ನದಿ ದಂಡೆಗೆ ಒಮ್ಮೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಗಮನಿಸಿದರೆ, ಅವರಲ್ಲಿರುವ ಶ್ರದ್ಧೆ, ಭಕ್ತಿ-ಭಾವವೆಲ್ಲಾ ಕರಗಿ, ನಾವು ಆಚರಿಸಿದ ಉತ್ಸವ ಇಷ್ಟೊಂದು ಭೀಕರ ದೃಶ್ಯಗಳನ್ನು ಸೃಷ್ಟಿಸಬಲ್ಲದೇ? ಎಂದು ದಂಗುಗೊಳಿಸುತ್ತದೆ.

ಸಹಿಸಲು ಅಸಾಧ್ಯವಾದ ಕೊಳೆತ ರಸಾಯನಿಕ ಬಣ್ಣಗಳ ವಾಸನೆ, ಕರಗಿದ ಕೈ, ಕಾಲು, ಎಲ್ಲೆಂದರಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದ ರುಂಡ-ಮುಂಡಗಳು ಕ್ಷಣಮಟ್ಟಿಗಾದರೂ ದೈವಿಕ ಭಾವನೆಯ ಬುಡ ಅಲ್ಲಾಡಿಸಿ ಬಿಡುತ್ತವೆ.

ಗಣಪತಿ ವಿಸರ್ಜನೆಯ ನಂತರ ವಿಸರ್ಜಿತ ವಸ್ತುಗಳು ನದಿಯಲ್ಲಿ ಹರಿದು, ಕರಗಿ ಹೋಗಬೇಕು ಅಥವಾ ಪರಿಸರ ಇಲಾಖೆ ಅಧಿಕಾರಿಗಳು ಧಾರ್ಮಿಕ ಭಾವನೆಗಳು ಭಗ್ನವಾಗದಂತೆ ನದಿ ನೀರು ಮಲಿನಗೊಳ್ಳದಂತೆ ಗಣಪತಿ ವಿಸರ್ಜನೆಗಾಗಿ ಪ್ರತ್ಯೇಕ ಸ್ಥಳವೊಂದನ್ನು ನಿರ್ಮಿಸಿ, ವಿಸರ್ಜಿಸಿದ ವಸ್ತುಗಳೆಲ್ಲಾ ಕರಗಿದ ನಂತರ ನದಿಗೆ ಬಿಡುವ ಇದಕ್ಕೊಂದು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
 
ಧಾರ್ಮಿಕ ಆಚರಣೆಯಷ್ಟೇ ಮುಖ್ಯ ಪರಿಸರ ರಕ್ಷಣೆ ಎಂಬ ಪಾಠ ಮನೆ- ಮನೆಗಳಿಂದಲೇ ಪ್ರಾರಂಭಗೊಂಡರೆ ಈ ಜಗತ್ತು ಇನ್ನಷ್ಟು ನಿರ್ಮಲ ಹಾಗೂ ಸುಂದರವಾಗಿ ಕಾಣುತ್ತದೆ ಎಂಬುದು ಪ್ರತಿಯೊಬ್ಬರ ಮನದಲ್ಲಿ ಮೂಡಿದರೆ, ಈ ಲೇಖನ ಸಾರ್ಥಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT