ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ರಸ್ಥಾನಕ್ಕೇರುವ ಹುಮ್ಮಸ್ಸಿನಲ್ಲಿ ಸೆಹ್ವಾಗ್ ನೇತೃತ್ವದ ತಂಡ:ಚಾರ್ಜರ್ಸ್‌ಗೆ ಡೆವಿಲ್ಸ್ ಭಯ

Last Updated 9 ಮೇ 2012, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಪಾಯಿಂಟುಗಳ ಪಟ್ಟಿಯಲ್ಲಿ ಎತ್ತರದಲ್ಲಿರುವ ಬಲಾಢ್ಯ ಕ್ರಿಕೆಟ್ ಪಡೆಯೊಂದು; ಇನ್ನೊಂದು ಕಟ್ಟಕಡೆಯಲ್ಲಿರುವ ತಂಡ. ಆದ್ದರಿಂದ ಇದು ಅಸಮ ಬಲಗಳ ನಡುವಣ ಹೋರಾಟ ಎಂದು ಹೇಳುವುದು ಸಹಜ.

ಡೆಲ್ಲಿ ಡೇರ್‌ಡೆವಿಲ್ಸ್ ಗೆಲುವಿನ ಓಟದ ಉತ್ಸಾಹದ ಮುಂದೆ ಡೆಕ್ಕನ್ ಚಾರ್ಜಸ್ ತಂಡದ್ದು ಮಂದಗತಿ. ಈಗಾಗಲೇ ಎಂಟು ಪಂದ್ಯಗಳಲ್ಲಿ ಗೆದ್ದಿರುವ ವೀರೇಂದ್ರ ಸೆಹ್ವಾಗ್ ನೇತೃತ್ವದ ಡೆವಿಲ್ಸ್ ಮತ್ತೊಂದು ವಿಜಯ ಸಾಧಿಸುವ ವಿಶ್ವಾಸ ಹೊಂದಿದೆ.

ಗುರುವಾರದ ಪಂದ್ಯದಲ್ಲಿ ಗೆದ್ದು ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯ ಲೀಗ್ ಪಟ್ಟಿಯಲ್ಲಿ ತಮ್ಮ ತಂಡವು ಅಗ್ರಸ್ಥಾನ ಗಿಟ್ಟಿಸಬೇಕು ಎನ್ನುವುದು `ವೀರೂ~ ಮಹತ್ವಾಕಾಂಕ್ಷೆ.

ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಆಡಿದ ಪಂದ್ಯದಲ್ಲಿ ಡೇರ್‌ಡೆವಿಲ್ಸ್‌ಗೆ ಆರು ವಿಕೆಟ್‌ಗಳ ಅಂತರದಿಂದ ನಿರಾಸೆ ಕಾಡಿತ್ತು. ಆ ಸೋಲಿನೊಂದಿಗೆ ಅಗ್ರಸ್ಥಾನವನ್ನೂ ಕಳೆದುಕೊಂಡಿತ್ತು. ಈಗ ಮತ್ತೆ ಆ ಸ್ಥಾನವನ್ನು ಪಡೆದುಕೊಳ್ಳುವ ಅವಕಾಶ ಮುಂದಿದೆ.
 
ಆದರೆ ಅದಕ್ಕಾಗಿ  ಚಾರ್ಜರ್ಸ್ ತಂಡವನ್ನು ಸೋಲಿಸಬೇಕು. ಅದು ಕಷ್ಟವೆಂದು ಅನಿಸದು. ಏಕೆಂದರೆ ಸೆಹ್ವಾಗ್ ನಾಯಕತ್ವದಲ್ಲಿ ಡೆವಿಲ್ಸ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುವ ಜೊತೆಗೆ ಬೌಲಿಂಗ್‌ನಲ್ಲಿಯೂ ಪ್ರಭಾವಿಯಾಗಿದೆ.

ಡೇರ್‌ಡೆವಿಲ್ಸ್ ಪ್ಲೇಆಫ್‌ನಲ್ಲಿ ಆಡುವುದು ಭಾಗಶಃ ಖಚಿತವೂ ಆಗಿದೆ. ಆದರೂ ಅದು ಉತ್ತಮ ಸ್ಥಿತಿಯೊಂದಿಗೆ ಆ ಹಂತದಲ್ಲಿ ಆಡಲು ಇಷ್ಟಪಡುತ್ತದೆ. ಆದ್ದರಿಂದ ಬಾಕಿ ಐದು ಪಂದ್ಯಗಳಲ್ಲಿ ಸಾಧ್ಯವಾದಷ್ಟು ಹೆಚ್ಚು ಪಾಯಿಂಟುಗಳನ್ನು ಗಿಟ್ಟಿಸುವತ್ತ ಗಮನ ಕೇಂದ್ರೀಕರಿಸಿದೆ.

ಡೆಕ್ಕನ್ ಚಾರ್ಜರ್ಸ್ ತನ್ನ ನೆಲದಲ್ಲಿ ಆಡುತ್ತಿದ್ದರೂ ಅದು ವಿಶ್ವಾಸದಿಂದ ಬೀಗುವಂಥ ಸ್ಥಿತಿಯಲ್ಲಿಯಂತೂ ಇಲ್ಲ. ಅದು ಆಡಿರುವ ಹನ್ನೆರಡು ಪಂದ್ಯಗಳಲ್ಲಿ ಗೆದ್ದಿದ್ದು ಕೇವಲ ಎರಡರಲ್ಲಿ. ಪಂದ್ಯವೊಂದು ರದ್ದಾಗಿದ್ದರಿಂದ ಅದೃಷ್ಟ ಎನ್ನುವಂತೆ ಪಾಯಿಂಟೊಂದು ಸಿಕ್ಕಿತ್ತು. ಎಲ್ಲವೂ ಸೇರಿ ಗಳಿಸಿದ್ದು ಐದು ಪಾಯಿಂಟ್ಸ್.

ಪುಣೆ ವಾರಿಯರ್ಸ್ ವಿರುದ್ಧದ ಗೆಲುವಿನ ನಂತರ ಮತ್ತೆ ನಿರಾಸೆಯ ಹಾದಿಯಲ್ಲಿ ನಿರುತ್ಸಾಹದಿಂದ ಸಾಗಿರುವ ಚಾರ್ಜರ್ಸ್ ತಂಡದವರು ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಪರಾಭವಗೊಂಡಿದ್ದಾರೆ.
ಪಂದ್ಯ ಆರಂಭ: ಸಂಜೆ 4.00ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT