ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಘನಾಶಿನಿ ತಟದಲ್ಲಿ ಜಾಗೃತಿ ಸಮಾವೇಶ

Last Updated 2 ಫೆಬ್ರುವರಿ 2011, 11:20 IST
ಅಕ್ಷರ ಗಾತ್ರ

ಸಿದ್ದಾಪುರ: ಪಶ್ಚಿಮಘಟ್ಟದ ನದಿ ಸಂರಕ್ಷಣಾ ಅಭಿಯಾನದಡಿಯಲ್ಲಿ ಅಘನಾಶಿನಿ ನದಿ ದಂಡೆಯ ಪ್ರದೇಶವಾಗಿರುವ ತಾಲ್ಲೂಕಿನ ನಾಗರಕೋಡಿಯಲ್ಲಿ ಜಾಗೃತಿ ಸಮಾವೇಶವು ಫೆ.4 ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಹಾರ್ಸಿಕಟ್ಟದ ರೈತ ವಿಕಾಸ ವಾಹಿನಿಯ ಸಂಚಾಲಕ ಮತ್ತು ಪರಿಸರ ಕಾರ್ಯಕರ್ತ ನರೇಂದ್ರ ಹೊಂಡಗಾಶಿ ತಿಳಿಸಿದರು.

ಮಂಗಳವಾರ ಪಟ್ಟಣದ ಅರಣ್ಯ ಇಲಾಖೆಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ  ‘ಅಘನಾಶಿನಿ ಸಂರಕ್ಷಿತ ಪ್ರದೇಶ’ ಎಂಬ ನಾಮಫಲಕವನ್ನು ಖ್ಯಾತ ಕ್ರಿಕೆಟಿಗ ಮತ್ತು ರಾಜ್ಯ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷ ಅನಿಲ ಕುಂಬ್ಳೆ ಅನಾವರಣ ಗೊಳಿಸುವರು ಎಂದರು.

ಶಿರಸಿ, ಸಿದ್ದಾಪುರ ಮತ್ತು ಕುಮಟಾ ತಾಲ್ಲೂಕುಗಳಲ್ಲಿ ಹರಿದಿರುವ ಅಘನಾಶಿನಿ ನದಿಯು ಮಾಲಿನ್ಯ ರಹಿತವಾದ ಏಕೈಕ ನದಿಯಾಗಿದ್ದು, ಇದರ ತಟವು ಅಮೂಲ್ಯ ಜೀವವೈವಿಧ್ಯ ಮತ್ತು ಪರಿಸರ ಸಂಪತ್ತಿನ ತಾಣವಾಗಿದೆ. ಜಗತ್ತಿನ ಅತ್ಯಂತ ಅಮೂಲ್ಯ ಸ್ಥಳಗಳಲ್ಲೊಂದಾಗಿರುವ ಅಘನಾಶಿನಿ ನದಿಯ ದಂಡೆಯ ಪ್ರದೇಶವನ್ನು ‘ಸೂಕ್ಷ್ಮ ಜೈವಿಕ ವಲಯ’ ಅಥವಾ ‘ಸಂರಕ್ಷಿತ ಪ್ರದೇಶ’ ಎಂದು ಘೋಷಿಸುವಂತೆ ಪ್ರಯತ್ನ ನಡೆಸಲಾಗುತ್ತಿದ್ದು, ಈ ಪ್ರಸ್ತಾವಕ್ಕೆ  ರಾಜ್ಯ ಸರ್ಕಾರ ಮತ್ತು ರಾಜ್ಯದ ವನ್ಯ ಜೀವಿ ಮಂಡಳಿ ಒಪ್ಪಿಗೆ ನೀಡಿವೆ. ಕೇಂದ್ರ ಸರ್ಕಾರ ಕೂಡ ಸದ್ಯದಲ್ಲಿಯೇ ಅನುಮೋದನೆ ನೀಡಲಿದೆ ಎಂದರು.

‘ವಿವಿಧ ಕಾರಣಗಳಿಂದ ಅಘನಾಶಿನಿ ನದಿಯ ಹರಿವಿನ ಸಾಮರ್ಥ್ಯ ಕಡಿಮೆಯಾಗುತ್ತಿದ್ದು, ಹೆಚ್ಚುತ್ತಿರುವ ಜನವಸತಿ, ಕೃಷಿ ಪ್ರದೇಶದ ವಿಸ್ತರಣೆ, ನಗರ ಪ್ರದೇಶದ ಅಗತ್ಯಗಳು, ಕಡಿಮೆಯಾಗುತ್ತಿರುವ ಅರಣ್ಯ ಇವುಗಳಿಂದಾಗಿ ಈ ನದಿಯ ಅಸ್ತಿತ್ವವೇ ಅಪಾಯಕ್ಕೀಡಾಗಿದೆ. ಆದ್ದರಿಂದ ಅಘನಾಶಿನಿ ನದಿಯ ಸಂರಕ್ಷಣೆಗಾಗಿ ಸನ್ನದ್ಧರಾಗುವ ಅವಶ್ಯಕತೆ ಈಗ ಹೆಚ್ಚಾಗಿದೆ. ಈ ಕಾರಣಕ್ಕಾಗಿ  ಪಶ್ಚಿಮ ಘಟ್ಟ ಕಾರ್ಯಪಡೆ ಮತ್ತು ಸ್ಥಳೀಯ ಸಂಘಟನೆಗಳ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ’ಎಂದರು.

ಈ ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ 9.30ಕ್ಕೆ ಕುಮಟಾದ ಅಘನಾಶಿನಿ ಮತ್ತು ಶಿರಸಿಯ ಶಂಕರಹೊಂಡದಲ್ಲಿ ‘ನದಿಮೂಲ ಪೂಜೆ’ ನಡೆಯಲಿದೆ. 10.30ಕ್ಕೆ ತಾಲ್ಲೂಕಿನ ನಾಗರಕೋಡಿಯಲ್ಲಿ ಅಘನಾಶಿನಿ ನದಿಯ ಪೂಜೆ ಮತ್ತು 11ಕ್ಕೆ ಸಭಾಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಫಲಕ ಅನಾವರಣ ಮತ್ತು ನದಿ ಸಂರಕ್ಷಣೆ ಬಗ್ಗೆ ಚರ್ಚೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ, ಸಂಸದ ಅನಂತಕುಮಾರ ಹೆಗಡೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಮತ್ತಿತರರು ಉಪಸ್ಥಿತರಿರುವರು ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಸಿಎಫ್ ಎಸ್.ಜಿ.ಹೆಗಡೆ ಮತ್ತು ವಲಯ ಅರಣ್ಯಾಧಿಕಾರಿ ಎನ್.ಬಿ.ನಾಯ್ಕ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT