ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಘನಾಶಿನಿಯಲ್ಲಿ ವಿದ್ಯುತ್ ಯೋಜನೆ ಇಲ್ಲ

Last Updated 5 ಫೆಬ್ರುವರಿ 2011, 7:15 IST
ಅಕ್ಷರ ಗಾತ್ರ

ಸಿದ್ದಾಪುರ: ‘ಅಘನಾಶಿನಿ ನದಿಯಲ್ಲಿ ಮಿನಿ ಜಲವಿದ್ಯುತ್ ಘಟಕ ಅಥವಾ ಆಣೆಕಟ್ಟೆಯನ್ನಾಗಲಿ ನಿರ್ಮಿಸುವ ಯೋಜನೆ ಇಲ್ಲ’ ಎಂದು ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನುಡಿದರು.ಪಶ್ಚಿಮ ಘಟ್ಟ ಕಾರ್ಯಪಡೆ ಮತ್ತು ಅರಣ್ಯ ಇಲಾಖೆಯ ಆಶ್ರಯದಲ್ಲಿ ಶುಕ್ರವಾರ ತಾಲ್ಲೂಕಿನ ನಾಗರಕೋಡಿಯಲ್ಲಿ ಏರ್ಪಡಿಸಲಾಗಿದ್ದ ‘ಅಘನಾಶಿನಿ ನದಿ ಮೂಲ ಸಂರಕ್ಷಣಾ ಅಭಿಯಾನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 150 ಮಿನಿ ಜಲವಿದ್ಯುತ್ ಘಟಕಗಳನ್ನು ಸ್ಥಾಪಿಸುವ ಯೋಜನೆಯಿದ್ದರೂ, ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ರೀತಿಯ ಒಂದೂ ಘಟಕ ಸ್ಥಾಪನೆಯ ಪ್ರಸ್ತಾವ ಇಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು  ತಿಳಿಸಿದ್ದಾರೆ’ ಎಂದು ಅವರು ನುಡಿದರು. ‘ಅಘನಾಶಿನಿ ನದಿ ನಿಷ್ಕಳಂಕವಾದ ನದಿ. ಈ ನದಿಗೆ ಪಾಪ ತಟ್ಟಿಲ್ಲ. ಇದು ಪರಿಶುದ್ಧವಾಗಿದೆ. ಇದೇ ರೀತಿಯಲ್ಲಿ ಪಶ್ಚಿಮ ಘಟ್ಟದ ಪ್ರಮುಖ ನದಿಗಳಿಲ್ಲ. ಅರಣ್ಯನಾಶದ ಕಾರಣದಿಂದ ಹಲವು ನದಿಗಳಲ್ಲಿ ನೀರಿನ  ಹರಿವು ಕಡಿಮೆಯಾಗುತ್ತಿದೆ. ಕುಮಾರಧಾರಾ ಮತ್ತು ಸೌಪರ್ಣಿಕಾ ನದಿಗಳು ಕೂಡ ಕಲುಷಿತಗೊಳ್ಳುತ್ತಿವೆ’ ಎಂದರು.

ಬೇಡ್ತಿ- ಅಘನಾಶಿನಿ ಹೋರಾಟದ ನಿರಂತರತೆ ಉಳಿಸಲು ಮತ್ತು ಯುವ ಜನಾಂಗಕ್ಕೆ ಬೇಡ್ತಿ ಮತ್ತು ಅಘನಾಶಿನಿ ಆಣೆಕಟ್ಟಿನ ವಿರೋಧಿ ಚಳವಳಿಯ ಬಗ್ಗೆ ತಿಳಿಸಲು ಕೂಡ ಇಂತಹ ಸಭೆಗಳು ಸಹಾಯಕವಾಗುತ್ತವೆ ಎಂದರು.ಅಭಿಯಾನ ಉದ್ಘಾಟಿಸಿದ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ  ವಿನೋದ ಪ್ರಭು, ‘ಮುಂದಿನ ಪೀಳಿಗೆ ನಮ್ಮನ್ನು ಶಪಿಸದಂತಾಗಲು ನಾವು ಪರಿಸರ ರಕ್ಷಣೆಯನ್ನು ಕರ್ತವ್ಯದಂತೆ ಮಾಡಬೇಕು. ಪ್ರಕೃತಿ ಚೆನ್ನಾಗಿದ್ದರೇ ಸಮಾಜ ಚೆನ್ನಾಗಿರುತ್ತದೆ. ಯಾವುದೇ ಉದ್ದಿಮೆ ಅಥವಾ ಉದ್ಯೋಗ ಪರಿಸರಕ್ಕೆ ಪೂರಕವಾಗಿರಬೇಕು’ ಎಂದು ನುಡಿದರು.

‘ಅಘನಾಶಿನಿ ಸಂರಕ್ಷಿತ ಪ್ರದೇಶ’ ಎಂಬ ನಾಮಫಲಕ ಅನಾವರಣ ಮಾಡಿದ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ, ‘ಅಘನಾಶಿನಿ ನದಿಯೊಂದಿಗೆ ನಮಗೆ ಭಾವನಾತ್ಮಕ ಸಂಬಂಧವಿದೆ. ಆದರೆ ಈ ಅಘನಾಶಿನಿ ನದಿದಂಡೆಯಲ್ಲಿರುವ ನಮ್ಮ ಮೇಲೆ ಆಗಾಗ ತೂಗು ಕತ್ತಿ ತೂಗುತ್ತಲೇ ಇರುತ್ತದೆ. ಆಗಾಗ ಈ ನದಿಗೆ ಅಪಾಯ ಬರುತ್ತದೆ. ನಮಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಬೇಕಾಗಿಲ್ಲ. ಈಗ ಆಗಿರುವ ಅಭಿವೃದ್ಧಿ ಸಾಕು’ ಎಂದರು.

ಪಶ್ಚಿಮ ಘಟ್ಟ ಕಾರ್ಯಪಡೆ ಸದಸ್ಯರಾದ ಬಿ.ಎಂ. ಕುಮಾರ ಸ್ವಾಮಿ, ಶಾಂತಾರಾಮ ಸಿದ್ದಿ, ಜಿ.ಪಂ. ಸದಸ್ಯ ಆರ್.ಡಿ.ಹೆಗಡೆ, ಅರಣ್ಯ ಕಾಲೇಜಿನ ಡೀನ್ ಜನಗೌಡರ್, ಉಪನ್ಯಾಸಕ ಡಾ.ವಾಸುದೇವ. ಪರಿಸರ ತಜ್ಞ ಡಾ. ಸುಭಾಶ್ಚಂದ್ರನ್, ಸಹಾಯಕ ಆಯುಕ್ತ ಜಗದೀಶ, ಹಾರ್ಸಿಕಟ್ಟ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ ನಾಯ್ಕ, ಹೆಗ್ಗರಣಿ ಗ್ರಾ.ಪಂ.ಅಧ್ಯಕ್ಷೆ  ಸುಶೀಲಾ ಹೆಗಡೆ, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಭಾಕರ ಭಟ್ಟ ಮತ್ತಿತರರು ಉಪಸ್ಥಿತರಿದ್ದರು.ಉಪಅರಣ್ಯ ಸಂರಕ್ಷಣಾಧಿಕಾರಿ ಮನೋಜಕುಮಾರ ಸ್ವಾಗತಿಸಿದರು. ಶಾಂತಾರಾಮ ಸಿದ್ದಿ ವಂದಿಸಿದರು. ನರೇಂದ್ರ ಹೊಂಡಗಾಶಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT