ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚ್ಚರಿಯ ಕಡವೆ ಮೂಸ್

Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ಈ ವಿಶಿಷ್ಟ ಕಡವೆಯ ಕೋಡಿನ ಉದ್ದ ಮೂರರಿಂದ ಹತ್ತು ಅಡಿ. ಅಗಲ ಮೂರರಿಂದ ನಾಲ್ಕು ಅಡಿ. ತೂಕ ಇಪ್ಪತ್ತು ಕಿಲೋಗಿಂತ ಅಧಿಕ. ಕೋಡಿನ ರಚನೆ ಇನ್ನೂ ವಿಚಿತ್ರ. ಮನುಷ್ಯನ ಕೈ ಬೆರಳುಗಳ ಆಕೃತಿಯೇ ಅದರ ಹೋಲಿಕೆ.

‘ಮೂಸ್’ ಎಂದು ಕರೆಯಲಾಗುವ ಇಂಥ ವಿಭಿನ್ನ ಬದುಕಿನ ಕಡವೆ ಭಾರತದಲ್ಲಿ ಇಲ್ಲವೇ ಇಲ್ಲ. ಅದು ಹೆಚ್ಚು ತಂಪು ಹವೆಯನ್ನು ಬಯಸುವ ಜೀವಿ. ಬೇಸಿಗೆಯಲ್ಲಿ 15–27 ಡಿಗ್ರಿಗಿಂತ ಅಧಿಕ ಉಷ್ಣತೆಯನ್ನು ಸಹಿಸಿಕೊಳ್ಳುವ ಶಕ್ತಿ ಅದಕ್ಕಿಲ್ಲ. ಹೀಗಾಗಿ ನ್ಯೂಜಿಲೆಂಡ್, ಅಲಸ್ಕಾ, ಉತ್ತರ ಅಮೆರಿಕ, ಸೈಬೀರಿಯ, ಕೆನಡಾ, ರಷ್ಯ... ಇಂಥ ಶೀತ ಬಯಲು ಪ್ರದೇಶಗಳಿಗೇ ಅದರ ವಾಸ ಸೀಮಿತವಾಗಿದೆ.

ವೈಜ್ಞಾನಿಕವಾಗಿ ‘ಎಲ್ಕ್’ ಎಂಬ ಹೆಸರಿರುವ ಈ ಪ್ರಾಣಿ ಜಾತಿ ಒಂದರಿಂದ ಒಂದೂವರೆ ಲಕ್ಷ ವರ್ಷಗಳ ಹಿಂದೆ ಉಗಮವಾಯಿತೆನ್ನುವ ನಂಬಿಕೆಯಿದೆ. ಮೂಸ್ ಕಡವೆಯಲ್ಲಿ ಆರು ಜಾತಿಗಳಿದ್ದು ಒಂದೊಂದು ದೇಶದಲ್ಲಿಯೂ ಅದರ ಎತ್ತರ, ತೂಕಗಳಲ್ಲಿ ವ್ಯತ್ಯಾಸಗಳಿವೆ.  ಕೆಲವು ಕಡೆಗಳ ಮೂಸ್‌ 300ರಿಂದ700 ಕಿಲೋ ತನಕ ಅವು ತೂಗುತ್ತವೆ. ಸರಾಸರಿ ಉದ್ದ ಎರಡೂವರೆಯಿಂದ ಮೂರೂಕಾಲು ಮೀಟರ್.

ಮೂಸ್‌ಗಳ ಆಯಸ್ಸು 10–16 ವರ್ಷ. ಹೆಣ್ಣಿಗೆ ಕೋಡುಗಳಿಲ್ಲ. ಗಂಡಿಗಿಂತ ತೂಕ ಕಡಿಮೆ. ಗಂಡಿಗೆ ಕಿರೀಟದಂತಹ ಕೋಡುಗಳಲ್ಲದೇ ಗಂಟಲಿನ ಕೆಳಗೆ ಒಂದು ಗಡ್ಡವೂ ಇದೆ. ಕುತ್ತಿಗೆಯ ಉದ್ದ 30 ಸೆ. ಮೀ., ತಲೆಯ ಉದ್ದ 55ರಿಂದ 62 ಸೆ. ಮೀ. ಗಳಷ್ಟಿದೆ. ಇವು ಹಿಂಡಾಗಿ ವಾಸಿಸುವುದಿಲ್ಲ. ರಾತ್ರಿ ಸಂಚಾರಿಗಳು. ಹುಲ್ಲು, ಮರದ ತೊಪ್ಪಲುಗಳೇ ಆಹಾರ. ಹೆಚ್ಚು ಮರಗಳಿರುವ ಕಾಡುಗಳೊಳಗೆ ವಾಸವಿಲ್ಲ.

ಸಂಚಾರದ ಸಮಯದಲ್ಲಿ ಮರಗಳೆಡೆಯಲ್ಲಿ ಕೋಡು ಸಿಲುಕಿಕೊಂಡರೆ ತೆಗೆಯಲು ಕಷ್ಟವಾಗುವ ಕಾರಣ ಕೋಡನ್ನು 90 ಡಿಗ್ರಿ ವಾಲಿಸಿಕೊಂಡೇ ಹೋಗಬೇಕು. ಬೆಟ್ಟ ಗುಡ್ಡಗಳು, ಸರೋವರ ಮತ್ತು ನದಿಗಳ ಜೌಗು ಪ್ರದೇಶಗಳಲ್ಲೇ ಇದರ ವಾಸ. ನದಿಗೆ ಇಳಿದು ಈಜಬಲ್ಲುದು. ಐದೂವರೆ ಮೀಟರ್ ಆಳದ ತನಕ ಮುಳುಗಿ ಅಲ್ಲಿರುವ ಹಸಿರು ಪಾಚಿ ತಿನ್ನುವುದು ಇದಕ್ಕಿಷ್ಟ. ಗಂಟೆಗೆ 35ಕಿ. ಮೀ. ವೇಗದಲ್ಲಿ ಓಡಬಲ್ಲುದು.

ದಪ್ಪಗಿನ ಬಾಲ, ಮೈಯಲ್ಲಿ ತುಪ್ಪಳಯುಕ್ತವಾದ ದಪ್ಪ ಚರ್ಮವಿದೆ. ಕಪ್ಪು, ಕಂದು, ಕೆಂಪು, ಬೂದು ಮುಂತಾದ ವರ್ಣಗಳಿರುತ್ತವೆ. ಮೇಲಿನ ತುಟಿ ಕತ್ತೆಯಂತೆ ನೀಳ. ಕಿವಿಯೂ ಕತ್ತೆಯಂತಿದ್ದರೂ ಅಷ್ಟು ಉದ್ದವಿಲ್ಲ. ಭುಜದಲ್ಲಿ ಡುಬ್ಬವಿದೆ. ಗಂಡಿಗೆ ಮೂರರಿಂದ ಐದು ತಿಂಗಳು ವಯಸ್ಸಾದಾಗ ಕೋಡು ಬರುತ್ತದೆ. ತುಂಬ ತೆಳ್ಳಗಿರುವ ಕೋಡು ಮಳೆಗಾಲದಲ್ಲಿ ಬಲು ಮೃದು. ಬೇಸಿಗೆಯಲ್ಲಿ ಬಹು ದೃಢ. ಆಗ ಮರದ ಕಾಂಡಕ್ಕೆ ಉಜ್ಜಿ ಹರಿತಗೊಳಿಸುತ್ತದೆ.

ಬೇಸಿಗೆಯಲ್ಲಿ ಒಂದು ಹೆಣ್ಣಿಗಾಗಿ ಹಲವು ಗಂಡುಗಳೊಳಗೆ ಕೊಂಬಿನ ಕಾಳಗ ನಡೆಯುತ್ತದೆ. ಅಂತಿಮವಾಗಿ ಗೆದ್ದ ಗಂಡಿಗೆ ಹೆಣ್ಣು ದಕ್ಕುವುದಾದರೂ ಸೋತ ಗಂಡುಗಳು ಮೈತುಂಬ ಗಾಯವಾಗಿ ಸಾಯುವುದೂ ಇದೆ. ಎಂಟು ತಿಂಗಳ ಗರ್ಭಾವಸ್ಥೆ. ಒಂದು ಸಲಕ್ಕೆ ಹೆಣ್ಣು ಒಂದು ಮರಿಯಿಡುತ್ತದಾದರೂ ಅಪರೂಪವಾಗಿ ದ್ವಿವಳಿ, ತ್ರಿವಳಿಗಳಿರುವುದಿದೆ.

ಮೂಸ್ ಚಳಿಗಾಲವನ್ನು, ಹಿಮದಲ್ಲಿ ನಡೆಯುವುದನ್ನು ತುಂಬ ಇಷ್ಟಪಡುತ್ತದೆ. ಬೇಸಿಗೆಯಲ್ಲಿ ನೀರಿನಲ್ಲಿ ಈಜು ಅಂದರೆ ಪಂಚಪ್ರಾಣ. ಆಗ ತಂಪಿರುವ ಸ್ಥಳ ಅರಸುತ್ತ ವಸತಿ ಬದಲಾಯಿಸುತ್ತದೆ. ದೃಷ್ಟಿ ಶಕ್ತಿಗಿಂತ ವಾಸನೆ ಮತ್ತು ಗ್ರಹಣ ಶಕ್ತಿ ಅದಕ್ಕೆ ಹೆಚ್ಚು. ಮನುಷ್ಯನ ಮೇಲೆ ಆಕ್ರಮಣಕಾರಿಯಲ್ಲದಿದ್ದರೂ ಕೆರಳಿದರೆ ತಿವಿದು ಕೊಲ್ಲುವುದುಂಟು. ಕರಡಿ ಮತ್ತು ಆರ್ಕ್ಟಿಕ್ ತೋಳಗಳು ಅದರ ಮರಿಗಳನ್ನು ಕಬಳಿಸುತ್ತವೆ.

ಮಾಂಸ ಮತ್ತು ಔಷಧೀಯ ಬಳಕೆಗಾಗಿ ನಡೆದ ಅವ್ಯಾಹತ ಬೇಟೆಯಿಂದಾಗಿ ಮೂಸ್ ನಿರ್ವಂಶವಾಗುವ ಸ್ಥಿತಿ ತಲೆದೋರಿದಾಗ ಹಲವು ದೇಶಗಳು ಬೇಟೆಯನ್ನು ನಿಷೇಧಿಸಿದವು. ಇದರ ತಳಿ ಉಳಿಯಲೆಂಬ ದೃಷ್ಟಿಯಿಂದ ನ್ಯೂ ಫೌಂಡ್ ಲ್ಯಾಂಡಿನಲ್ಲಿ ಕ್ರಿ. ಶ. 1900ರಲ್ಲಿ ಕೆಲವು ಜೋಡಿಗಳನ್ನು ತೆಗೆದುಕೊಂಡು ಹೋಗಿ ಬಿಡಲಾಯಿತು. ಈಗ ಅವು ಸಾವಿರಾರು ಸಂಖ್ಯೆಯಲ್ಲಿ ವರ್ಧಿಸಿವೆ. ದೇಹದ ಸಮತೋಲನ ಕಾಯ್ದುಕೊಳ್ಳಲು ಹತ್ತು ಸಾವಿರ ಕ್ಯಾಲರಿ ಸಿಗುವ ಆಹಾರವನ್ನು ಸೇವಿಸುವ ಈ ಕಡವೆ ನಡೆದಾಡುವ ಪರ್ವತದ ಹಾಗೆಯೇ ಭಾಸವಾಗುತ್ತದೆ.

ರಾಮ ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT