ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿ ಕೊಚ್ಚಿ

Last Updated 17 ಏಪ್ರಿಲ್ 2011, 19:00 IST
ಅಕ್ಷರ ಗಾತ್ರ

ಕೊಚ್ಚಿ (ಪಿಟಿಐ):  ಮುಂಬೈ ಇಂಡಿಯನ್ಸ್ ವಿರುದ್ಧ ಅಚ್ಚರಿಯ ಗೆಲುವು ಪಡೆದಿರುವ ಕೊಚ್ಚಿ ಟಸ್ಕರ್ಸ್ ಕೇರಳ ತಂಡದವರು ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಪೈಪೋಟಿ ನಡೆಸಲಿದ್ದಾರೆ.ನೆಹರು ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ನರಾದ ಚೆನ್ನೈಗೆ ಆಘಾತ ನೀಡುವ ಕನಸಿನಲ್ಲಿ ಮಾಹೇಲ ಜಯವರ್ಧನೆ ನೇತೃತ್ವದ ಕೊಚ್ಚಿ ತಂಡ ಇದೆ. ಕಳೆದ ಪಂದ್ಯದಲ್ಲಿ ಮಾಹೇಲ ಬಳಗ ಮುಂಬೈ ಇಂಡಿಯನ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿತ್ತು.

ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಕೊಚ್ಚಿ ಸತತ ಎರಡು ಸೋಲುಗಳ ನಿರಾಸೆಯ ಬಳಿಕ ಗೆಲುವಿನ ಹಾದಿಗೆ ಮರಳಿದೆ. ಅದೂ ಕೂಡಾ ಬಲಿಷ್ಠ ಮುಂಬೈ ವಿರುದ್ಧ ಯಶಸ್ಸು ಲಭಿಸಿರುವ ಕಾರಣ ಆಟಗಾರರ ಅತ್ಮವಿಶ್ವಾಸ ಹೆಚ್ಚಿದೆ. ಜಯವರ್ಧನೆ ಮತ್ತು ಬ್ರೆಂಡನ್ ಮೆಕ್ಲಮ್ ಅವರ ಅಬ್ಬರದ ಬ್ಯಾಟಿಂಗ್ ತಂಡದ ಜಯಕ್ಕೆ ಕಾರಣವಾಗಿತ್ತು.‘ಐಪಿಎಲ್‌ನ ಎಲ್ಲ ತಂಡಗಳೂ ಇನ್ನು ಮುಂದೆ ನಮ್ಮನ್ನು ಗಂಭೀರವಾಗಿ ಕಾಣುವರು’ ಎಂದು ಮುಂಬೈ ವಿರುದ್ಧದ ಗೆಲುವಿನ ಬಳಿಕ ಮಾಹೇಲ ಪ್ರತಿಕ್ರಿಯಿಸಿದ್ದರು. ಮೆಕ್ಲಮ್ ಎಂದಿನಂತೆ ಆಕ್ರಮಣಕಾರಿ ಆಟ ಪ್ರದರ್ಶಿಸಿದರೆ, ಚೆನ್ನೈ ತಂಡಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

ಆದರೆ ಕೊಚ್ಚಿ ತಂಡದ ಬೌಲಿಂಗ್ ವಿಭಾಗ ಇದುವರೆಗೂ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಎಸ್. ಶ್ರೀಶಾಂತ್ ಮತ್ತು ಮುತ್ತಯ್ಯ ಮುರಳೀಧರನ್ ಅವರು ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಇಬ್ಬರನ್ನು ಕಳೆದ ಪಂದ್ಯದಲ್ಲಿ ಹೊರಗಿಡಲಾಗಿತ್ತು. ಆರ್‌ಪಿ ಸಿಂಗ್ ಮತ್ತು ಕರ್ನಾಟಕದ ಆರ್. ವಿನಯ್ ಕುಮಾರ್ ಅವರೂ ಎಂದಿನ ಪ್ರದರ್ಶನ ನೀಡಿಲ್ಲ.ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಚೆನ್ನೈ ತಂಡದ ವಿರುದ್ಧ ಕೊಚ್ಚಿ ಬೌಲರ್‌ಗಳು ಯಾವ ರೀತಿಯ ಪ್ರದರ್ಶನ ನೀಡುವರು ಎಂಬುದನ್ನು ನೋಡಬೇಕು.

ಮತ್ತೊಂದೆಡೆ ಮಹೇಂದ್ರ ಸಿಂಗ್ ದೋನಿ ನೇತೃತ್ವದ ಚೆನ್ನೈ ಕೂಡಾ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಶನಿವಾರ ನಡೆದ ಪಂದ್ಯದಲ್ಲಿ ಈ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 21 ರನ್‌ಗಳ ಜಯ ಸಾಧಿಸಿತ್ತು.ಆಸ್ಟ್ರೇಲಿಯದ ಮೈಕ್ ಹಸ್ಸಿ ಪ್ರಸಕ್ತ ಋತುವಿನಲ್ಲಿ ತಾವಾಡಿದ ಮೊದಲ ಪಂದ್ಯದಲ್ಲೇ ಮಿಂಚಿನ ಪ್ರದರ್ಶನ ನೀಡಿದ್ದರು. ಹಸ್ಸಿ ಅಲ್ಲದೆ ಮುರಳಿ ವಿಜಯ್, ಸುರೇಶ್ ರೈನಾ ಮತ್ತು ದೋನಿ ಅವರನ್ನು ಒಳಗೊಂಡಿರುವ ಚೆನ್ನೈ ತಂಡದ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಿದೆ. ಸ್ಕಾಟ್ ಸ್ಟೈರಿಸ್ ಮತ್ತು ಅಲಿ ಮಾರ್ಕೆಲ್ ಅವರೂ ಅಗತ್ಯದ ಸಂದರ್ಭಗಳಲ್ಲಿ ಬ್ಯಾಟಿಂಗ್  ಮಾಡಬಲ್ಲರು.

ಚೆನ್ನೈ ತಂಡ ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಪಡೆದಿದೆ. ಕಿಂಗ್ಸ್ ಇಲೆವೆನ್ ತಂಡದ ವಿರುದ್ಧ ಸೋಲು ಎದುರಾಗಿತ್ತು. ಪಾಲ್ ವಲ್ತಾಟಿ ಅವರ ಮಿಂಚಿನ ಶತಕದಿಂದ ಕಿಂಗ್ಸ್ ಇಲೆವೆನ್ ಜಯ ಸಾಧಿಸಿತ್ತು.

ತಂಡಗಳು
ಕೊಚ್ಚಿ ಟಸ್ಕರ್ಸ್ ಕೇರಳ
ಮಾಹೇಲ ಜಯವರ್ಧನೆ (ನಾಯಕ), ವಿವಿಎಸ್ ಲಕ್ಷ್ಮಣ್, ಬ್ರಾಡ್ ಹಾಡ್ಜ್, ಬ್ರೆಂಡನ್ ಮೆಕ್ಲಮ್, ಪಾರ್ಥಿವ್ ಪಟೇಲ್, ರವೀಂದ್ರ ಜಡೇಜ, ತಿಸಾರ ಪೆರೇರಾ, ಎಸ್. ಶ್ರೀಶಾಂತ್, ಆರ್‌ಪಿ ಸಿಂಗ್, ಮುತ್ತಯ್ಯ ಮುರಳೀಧರನ್, ಕೇದಾರ್ ಜಾದವ್, ರಮೇಶ್ ಪೊವಾರ್, ಆರ್. ವಿನಯ್ ಕುಮಾರ್, ರೈಫಿ ಗೊಮೆಜ್.

ಚೆನ್ನೈ ಸೂಪರ್ ಕಿಂಗ್ಸ್
ಮಹೇಂದ್ರ ಸಿಂಗ್ ದೋನಿ (ನಾಯಕ), ಸುರೇಶ್ ರೈನಾ, ಮುರಳಿ ವಿಜಯ್, ಮೈಕ್ ಹಸ್ಸಿ, ಶ್ರೀಕಾಂತ್ ಅನಿರುದ್ಧ್, ಎಸ್. ್ಡದರೀನಾಥ್,ಅಲ್ಬಿ ಮಾರ್ಕೆಲ್, ಸ್ಕಾಟ್ ಸ್ಟೈರಿಸ್, ಟಿಮ್ ಸೌಥಿ, ಆರ್. ಅಶ್ವಿನ್, ನುವಾನ್ ಕುಲಶೇಖರ, ಸೂರಜ್ ರಂದೀವ್, ಶಾದಾಬ್ ಜಕಾತಿ.

ಪಂದ್ಯದ ಆರಂಭ: ರಾತ್ರಿ 8.00ಕ್ಕೆ 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT