ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚ್ಚಳಿಯದವರ ಬದುಕಲ್ಲಿ ಅಚ್ಚೊತ್ತಿದವರು

Last Updated 8 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬಾಲ್ಯದಲ್ಲಿ ನಮಗಾಗುವ ಹಲವಾರು ಅನುಭವಗಳು ನಮ್ಮ ಬದುಕು ಮತ್ತು ನಡತೆಯನ್ನು ರೂಪಿಸುತ್ತವೆ. ಇಂತಹ ಅನುಭವಗಳಿಗೆ ನಾವು ನಮ್ಮದೇ ಆದ ವ್ಯಾಖ್ಯಾನ ಕೊಟ್ಟುಕೊಳ್ಳುತ್ತೇವೆ. ಸುತ್ತಮುತ್ತಲಿನ ಸಂಗತಿಗಳನ್ನು ನಾವು ಗ್ರಹಿಸುವ ಬಗೆ ಮತ್ತು ಅದಕ್ಕೆ ನಾವು ತೋರುವ ಪ್ರತಿಕ್ರಿಯೆಯ ಮೇಲೆ ಇದು ತನ್ನದೇ ಆದ ಪ್ರಭಾವ ಬೀರುತ್ತಾ ಹೋಗುತ್ತದೆ.

ನಮ್ಮ ಯೋಚನಾ ಶಕ್ತಿಯ ಮೇಲೆ ಪರಿಣಾಮ ಬೀರುವ ವ್ಯಕ್ತಿಗಳಿಂದಲೇ ನಮ್ಮ ವ್ಯಾಖ್ಯಾನಗಳಿಗೆ ಒಂದು ನಿರ್ದಿಷ್ಟ ರೂಪ ದೊರಕುತ್ತದೆ. ಸಾಮಾನ್ಯವಾಗಿ ಬಹುತೇಕರ ಮೇಲೆ ಅವರ ಕುಟುಂಬದ ಸದಸ್ಯರು ಅಥವಾ ಶಾಲೆಯಲ್ಲಿನ ವರ್ಚಸ್ವಿ ಶಿಕ್ಷಕರ ಪ್ರಭಾವ ಹೆಚ್ಚಾಗಿರುತ್ತದೆ.

ಸ್ವಾಮಿ ವಿವೇಕಾನಂದರು ವಯಸ್ಕರಾದ ಮೇಲೆ ಅವರ ಆಲೋಚನಾ ಲಹರಿಯ ಪ್ರಮುಖ ನಿರ್ಮಾತೃ ರಾಮಕೃಷ್ಣ ಪರಮಹಂಸರು ಎಂಬುದು ನಿಸ್ಸಂಶಯ. ಇದರ ಜೊತೆಗೆ, ಬಾಲಕ ನರೇಂದ್ರನ ಜೀವನ ಮತ್ತು ಚಿಂತನಾ ಶಕ್ತಿಯ ಮೇಲೆ ಪ್ರಭಾವ ಬೀರಿದ ಸಂಗತಿಗಳ ಬಗ್ಗೆಯೂ ಸಾಕಷ್ಟು ಬರಹಗಳು ಲಭ್ಯವಿವೆ.

ಅವರ ಬದುಕಿನುದ್ದಕ್ಕೂ ಕಂಡುಬಂದ ಪ್ರಚಂಡವಾದ ಸ್ವತಂತ್ರ ವ್ಯಕ್ತಿತ್ವದ ಮೇಲೆ ಇಬ್ಬರು ಪ್ರಮುಖ ವ್ಯಕ್ತಿಗಳು ಅಚ್ಚಳಿಯದ ಪರಿಣಾಮವನ್ನೇ ಬೀರಿದ್ದರು. ಅವರು ನರೇಂದ್ರರ ತಂದೆ ವಿಶ್ವನಾಥ ದತ್ತ ಮತ್ತು ತಾಯಿ ಭುವನೇಶ್ವರಿ ದೇವಿ.

`ನನ್ನ ಬೌದ್ಧಿಕ ಬೆಳವಣಿಗೆಗೆ ಕಾರಣರಾದ ನನ್ನ ತಾಯಿಗೆ ನಾನು ಚಿರಋಣಿ~ ಎಂದು ವಿವೇಕಾನಂದರು ಆಗಾಗ್ಗೆ ಹೇಳುತ್ತಲೇ ಇದ್ದರು. ಅವರ ತಾಯಿಯ ಪ್ರಭಾವದಲ್ಲಿದ್ದ ಅನನ್ಯವಾದ ಅಂಶವೆಂದರೆ, ಅವರು ಬೀರಿದ ಪರಿಣಾಮ ಅಗೋಚರವಾಗಿತ್ತು ಮತ್ತು ಕಟ್ಟುಪಾಡು ರಹಿತವಾಗಿತ್ತು. ಇದಕ್ಕೆ ಪೂರಕವಾದ ಉದಾಹರಣೆಯೊಂದು ಇಲ್ಲಿದೆ: ಒಮ್ಮೆ ನರೇಂದ್ರ ತಮ್ಮದಲ್ಲದ ತಪ್ಪಿಗಾಗಿ ಶಾಲೆಯಲ್ಲಿ ಶಿಕ್ಷೆಗೆ ಒಳಗಾಗಬೇಕಾದ ಪ್ರಸಂಗ ಎದುರಾಗುತ್ತದೆ.

ತರಗತಿಯಲ್ಲಿ ಭೂಗೋಳ ಶಿಕ್ಷಕರು ಕೇಳಿದ ಪ್ರಶ್ನೆಗೆ ಅವರು ಸರಿಯಾದ ಉತ್ತರವನ್ನೇ ಕೊಟ್ಟಿದ್ದರೂ ಅದು ಶಿಕ್ಷಕರಿಗೆ ಸಮಾಧಾನ ತರದೆ ಅವರು ನರೇಂದ್ರರನ್ನು ದಂಡಿಸುತ್ತಾರೆ. ಆದರೆ ಇದಕ್ಕೆ ಜಗ್ಗದ ನರೇಂದ್ರ ತಮ್ಮ ಉತ್ತರ ಸರಿಯಾಗಿರುವುದರಿಂದ ಅದನ್ನು ಬದಲಿಸುವುದಿಲ್ಲ ಎಂದು ಪಟ್ಟು ಹಿಡಿಯುತ್ತಾರೆ.
 
ಇದರಿಂದ ಕೋಪೋದ್ರಿಕ್ತರಾದ ಶಿಕ್ಷಕರು ನರೇಂದ್ರರನ್ನು ದೊಣ್ಣೆಯಿಂದ ಥಳಿಸುತ್ತಾರೆ. ಕಣ್ಣೀರು ಸುರಿಸುತ್ತಾ ಮನೆಗೆ ಬರುವ ನರೇಂದ್ರ, ಅಳುತ್ತಳುತ್ತಲೇ ತಾಯಿಗೆ ಎಲ್ಲವನ್ನೂ ವಿವರಿಸುತ್ತಾರೆ. ಆಗ ಅವರ ತಾಯಿ `ನೀನು ಸರಿಯಾಗಿದ್ದ ಮೇಲೆ ಹೆದರುವುದೇಕೆ? ಎದೆಗುಂದಬೇಡ, ಏನೇ ಬರಲಿ ಎಂದೆಂದಿಗೂ ಸತ್ಯವನ್ನೇ ಹೇಳು~ ಎಂದು ಮಗನಿಗೆ ಸಾಂತ್ವನ ಹೇಳುತ್ತಾರೆ.

ಮತ್ತೊಂದು ಸಂದರ್ಭದಲ್ಲಿ ಭುವನೇಶ್ವರಿ ದೇವಿ ಮಗನಿಗೆ ನೀಡಿದ ಸಲಹೆ ಹೀಗಿದೆ: `ಶುದ್ಧವಾದ ಜೀವನ ನಡೆಸು, ನಿನ್ನ ಘನತೆ ಕಾಪಾಡಿಕೊಳ್ಳುವುದರ ಜೊತೆಗೆ ಇತರರನ್ನೂ ಗೌರವದಿಂದ ಕಾಣು. ಸಭ್ಯ ಮತ್ತು ವಿನೀತನಾಗಿರು, ಆದರೆ ಸಂದರ್ಭ ಬಂದಾಗ, ದೃಢ  ಸಂಕಲ್ಪದಿಂದ ಮಾತ್ರ ಎಂದೆಂದಿಗೂ ಹಿಂದೆ ಸರಿಯಬೇಡ~.

ಬಡವರು ಮತ್ತು ನೊಂದವರ ಬಗ್ಗೆ ವಿವೇಕಾನಂದರಿಗಿದ್ದ ಕಾಳಜಿಗೆ ಮೂರ್ತ ರೂಪ ಕೊಟ್ಟವರು ಅವರ ತಂದೆ ವಿಶ್ವನಾಥ ದತ್ತ. ನಿತ್ಯದ ಬದುಕಿನಲ್ಲಿ ಬಡವರ ಬಗ್ಗೆ ಸ್ವತಃ ಔದಾರ್ಯ ಮತ್ತು ಅನುಕಂಪ ತೋರುವ ಮೂಲಕ, ಜೀವನದ ಮೌಲ್ಯಗಳನ್ನೇ ಅವರು ನರೇಂದ್ರ ಅವರಲ್ಲಿ ಎರಕಹೊಯ್ದರು.

ನಮ್ಮೆಲ್ಲರ ಬದುಕಿನಲ್ಲೂ ಇಂತಹುದೇ ಸಾಕಷ್ಟು ಸಂದರ್ಭಗಳು ಎದುರಾಗಿರುತ್ತವೆ. ಆದರೆ ಮಾಡಿದ ಸಂಕಲ್ಪಕ್ಕೆ ಎಂತಹ ಕಠಿಣ ಸನ್ನಿವೇಶದಲ್ಲೂ ಬದ್ಧವಾಗಿ ಉಳಿಯುವ ಎದೆಗಾರಿಕೆ ತೋರುವವರು ಮಾತ್ರ ಕೆಲವೇ ಮಂದಿ ಎಂಬುದನ್ನು ನಾವು ಅರಿಯಬೇಕು.

ತಮ್ಮ  ಅನುಭವಗಳ ಬಗ್ಗೆ ಚಿಂತನೆ ನಡೆಸಿ ಅದರ ಬಗ್ಗೆ ತಮ್ಮದೇ ಆದ ನಿರ್ಧಾರಕ್ಕೆ ಬರುವವರ ಸಂಖ್ಯೆಯಂತೂ ತೀರಾ ವಿರಳ. ಬಾಲ್ಯದಲ್ಲಿ ನಾವು ಕಲಿಯುವ ಇಂತಹ ಪಾಠಗಳು ನಮ್ಮ ಮನೋಧೋರಣೆ ರೂಪಿಸುವುದರ ಜೊತೆಗೆ, ಸುತ್ತಲಿನ ಸಂಗತಿಗಳಿಗೆ ವ್ಯಕ್ತವಾಗುವ ನಮ್ಮ ಪ್ರತಿಸ್ಪಂದನದ ಮೇಲೂ ಬಹು ಮುಖ್ಯ ಪಾತ್ರ ವಹಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT