ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜರೆಂಕಾ ಮತ್ತೊಮ್ಮೆ ಚಾಂಪಿಯನ್

ಆಸ್ಟ್ರೇಲಿಯಾ ಓಪನ್: ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಇಂದು ಮರೆ-ಜೊಕೊವಿಚ್ ಮುಖಾಮುಖಿ
Last Updated 26 ಜನವರಿ 2013, 19:59 IST
ಅಕ್ಷರ ಗಾತ್ರ

ಮೆಲ್ಬರ್ನ್ (ರಾಯಿಟರ್ಸ್): ಪ್ರಮುಖ ಘಟ್ಟದಲ್ಲಿಯೇ ಲೀ ನಾ ಅವರಿಗೆ ಅದೃಷ್ಟ ಕೈಕೊಟ್ಟಿತು. ಮೊದಲ ಸೆಟ್‌ನಲ್ಲಿ ಗೆದ್ದು ಮತ್ತೊಂದು ಗ್ರ್ಯಾನ್‌ಸ್ಲಾಮ್ ಕಿರೀಟದ ಕನಸು ಕಾಣುತ್ತಿದ್ದ ಚೀನಾದ ಈ ಆಟಗಾರ್ತಿಗೆ ವಿಧಿಯೊಂದು ಬಂದಪ್ಪಳಿಸಿತು. ಈ ಕಾರಣ ಅವರ ಕನಸು ಈಡೇರಲೇ ಇಲ್ಲ. ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಫೈನಲ್ ಮಧ್ಯದಲ್ಲಿ ಲೀ ನಾ ಗಾಯಗೊಂಡಿದ್ದು ಚಾಂಪಿಯನ್ ಆಗುವ ಹಾದಿಗೆ ಅಡ್ಡಿಯಾಯಿತು.

ಇದೇ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಮಿರುಗುವ ಟ್ರೋಫಿ ಎತ್ತಿ ಹಿಡಿದರು. ಮೆಲ್ಬರ್ನ್ ಪಾರ್ಕ್‌ನಲ್ಲಿ ಶನಿವಾರ ನಡೆದ ಅಂತಿಮ ಕಾದಾಟದಲ್ಲಿ ಅಜರೆಂಕಾ 4-6, 6-4, 6-3ರಲ್ಲಿ ಲೀ ನಾ ಅವರನ್ನು ಮಣಿಸಿದರು. ಹಾಗಾಗಿ ಎರಡನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಲೀ ನಾ ಕನಸು ನುಚ್ಚುನೂರಾಯಿತು. 6-4, 1-3ರಲ್ಲಿ ಮುನ್ನಡೆದಿದ್ದಾಗ ಮೊದಲ ಬಾರಿ ಗಾಯಕ್ಕೆ ಒಳಗಾದರು. ಆಗ ಏಳು ನಿಮಿಷ ಚಿಕಿತ್ಸೆ ಪಡೆದರು. ಆದರೆ ಮತ್ತೊಮ್ಮೆ ಕಾಲಿಗೆ ಏಟು ಬಿತ್ತು. ಆ ಬಳಿಕ ಅವರು ಚೇತರಿಕೆ ಆಟ ತೋರಲೇ ಇಲ್ಲ. ಮತ್ತೊಂದು ಬಾರಿ ಅವರ ತಲೆಗೆ ಪೆಟ್ಟು ಬಿತ್ತು.
ಹಾಲಿ ಚಾಂಪಿಯನ್ ಕೂಡ ಆಗಿರುವ ಅಜರೆಂಕಾ ಅವರ ಪಾಲಿಗೆ ಮೆಲ್ಬರ್ನ್ ಪಾಕ್ ಅದೃಷ್ಟದ ತಾಣ. ಏಕೆಂದರೆ ಸತತ ಎರಡನೇ ಬಾರಿ ಇಲ್ಲಿ ಪ್ರಶಸ್ತಿ ಒಲಿದಿದೆ. ಈ ಮೂಲಕ ಅವರು ವಿಶ್ವ ಟೆನಿಸ್ ರ‌್ಯಾಂಕಿಂಗ್‌ನಲ್ಲಿ ಅಗ್ರಪಟ್ಟ ಉಳಿಸಿಕೊಂಡರು.

`ಉತ್ತಮ ಸಾಧನೆ ಮಾಡುವ ಮುನ್ನ ಹಲವು ಬಾರಿ ಎಡವಿ ಬೀಳಬೇಕಾಗುತ್ತದೆ. ನನ್ನ ಪಾಲಿಗೆ ಇದೊಂದು ಕಠಿಣ ಹಾದಿ. ಆದರೆ ಈಗ ನಾನು ಖುಷಿಯ ವ್ಯಕ್ತಿ' ಎಂದು 23 ವರ್ಷ ವಯಸ್ಸಿನ ಅಜರೆಂಕಾ ಪಂದ್ಯದ ಬಳಿಕ ನುಡಿದಿದ್ದಾರೆ. 30 ವರ್ಷ ವಯಸ್ಸಿನ ಲೀ 2011ರ ಫ್ರೆಂಚ್ ಓಪನ್ ಜಯಿಸಿದ್ದರು. ಆ ಮೂಲಕ ಗ್ರ್ಯಾನ್‌ಸ್ಲಾಮ್ ಜಯಿಸಿದ ಚೀನಾದ ಮೊದಲ ಆಟಗಾರ್ತಿ ಎನಿಸಿದ್ದರು. ಆದರೆ ಮತ್ತೊಂದು ಸಾಧನೆಯ ಸನಿಹದಲ್ಲಿ ಎಡಬಿದ್ದರು.

ಶನಿವಾರ `ಆಸ್ಟ್ರೇಲಿಯಾ ಡೇ'. ಈ ಕಾರಣ ಪಟಾಕಿ ಸಿಡಿಸಲಾಯಿತು. ಇದರಿಂದ ಪಂದ್ಯ 9 ನಿಮಿಷ ಸ್ಥಗಿತಗೊಂಡಿತು. ಜನರ ಪೂರ್ಣ ಬೆಂಬಲ ಲೀ ನಾ ಅವರಿಗಿತ್ತು. ಆದರೆ ಗಾಯದ ಕಾರಣ ಅವರು ಹಿನ್ನಡೆ ಅನುಭವಿಸಬೇಕಾಯಿತು. ಪಂದ್ಯದ ಬಳಿಕ ಭಾವುಕರಾದ ಅವರ ಕಣ್ಣುಗಳಲ್ಲಿ ನೀರು ಜಿನುಗುತಿತ್ತು. `ನನಗೆ ಅದೃಷ್ಟವಿರಲಿಲ್ಲ. ಅಜರೆಂಕಾಗೆ ಅಭಿನಂದನೆಗಳು' ಎಂದರು. ಇಂದು ಪುರುಷರ ಹೋರಾಟ: ಕುತೂಹಲಕ್ಕೆ ಕಾರಣವಾಗಿರುವ ಪುರುಷರ ವಿಭಾಗದ ಸಿಂಗಲ್ಸ್ ಫೈನಲ್ ಭಾನುವಾರ ನಡೆಯಲಿದ್ದು, ಸರ್ಬಿಯಾದ ನೊವಾಕ್ ಜೊಕೊವಿಚ್ ಹಾಗೂ ಬ್ರಿಟನ್‌ನ ಆ್ಯಂಡಿ ಮರ‌್ರೆ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಹಾಲಿ ಚಾಂಪಿಯನ್ ಕೂಡ ಆಗಿರುವ ಜೊಕೊವಿಚ್ ಮೆಲ್ಬರ್ನ್ ಪಾರ್ಕ್‌ನಲ್ಲಿ ಹ್ಯಾಟ್ರಿಕ್ ಗ್ರ್ಯಾನ್‌ಸ್ಲಾಮ್ ಗೆಲುವಿನ ಹಾದಿಯಲ್ಲಿದ್ದಾರೆ. 1960ರ ಬಳಿಕ ಯಾರೂ ಇಂತಹ ಸಾಧನೆ ಮಾಡಿಲ್ಲ. ಸದ್ಯ ವಿಶ್ವ ರ‌್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಅವರು ಆ ಸಾಧನೆ ಮಾಡುವ ವಿಶ್ವಾಸದಲ್ಲಿದ್ದಾರೆ. ಆದರೆ ಅದಕ್ಕೆ ಮರ‌್ರೆ ಅಡ್ಡಿಯಾಗುವ ಸಾಧ್ಯತೆ ಇದೆ. ಏಕೆಂದರೆ ಅವರೀಗ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವುದೇ ಅದಕ್ಕೆ ಸಾಕ್ಷಿ. ಇಲ್ಲಿ ಅವರು 17 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ರೋಜರ್ ಫೆಡರರ್‌ಗೆ ಆಘಾತ ನೀಡಿದ್ದಾರೆ. 79 ವರ್ಷಗಳಿಂದ ಬ್ರಿಟನ್‌ನ ಯಾರೂ ಪುರುಷರ ವಿಭಾಗದ ಸಿಂಗಲ್ಸ್ ಚಾಂಪಿಯನ್ ಆಗಿಲ್ಲ.

ಪ್ರಶಸ್ತಿ: ಅಮೆರಿಕದ ಬಾಬ್ ಹಾಗೂ ಮೈಕ್ ಬ್ರಯಾನ್ ಪುರುಷರ ಡಬಲ್ಸ್‌ನ ಫೈನಲ್‌ನಲ್ಲಿ 6-3, 6-4ರಲ್ಲಿ ಹಾಲೆಂಡ್‌ನ ರಾಬಿನ್ ಹಾಸ್-ಐಗೋರ್ ಸಿಜ್ಲಿಂಗ್ ಎದುರು ಗೆದ್ದರು. ಇದು ಬ್ರಯಾನ್ ಸಹೋದರರು ಮೆಲ್ಬರ್ನ್      ಪಾರ್ಕ್‌ನಲ್ಲಿ ಗೆಲ್ಲುತ್ತಿರುವ 13ನೇ ಡಬಲ್ಸ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ. ಈ ಮೂಲಕ ವಿಶ್ವದಾಖಲೆಗೆ ಕಾರಣಾದರು. ಈ ಮೊದಲು ಆಸ್ಟ್ರೇಲಿಯಾದ ಜಾನ್ ನ್ಯೂಕೊಂಬೆ ಹಾಗೂ ಟೋನಿ ರೋಚ್ 12 ಬಾರಿ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT